ಕೊರೋನ: ಅಸಲಿ ಭ್ರಷ್ಟರ ವಿರುದ್ಧ ಸಂಸದರ ನಕಲಿ ಕಾರ್ಯಾಚರಣೆ

Update: 2021-05-06 07:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಸೋಂಕು ನಿರ್ವಹಣೆಯಲ್ಲಿ ಸರಕಾರ ಮತ್ತು ಆಸ್ಪತ್ರೆಗಳು ಸಂಪೂರ್ಣ ವಿಫಲವಾಗಿರುವುದು ದೇಶಾದ್ಯಂತ ಸಂಭವಿಸುತ್ತಿರುವ ಸರಣಿ ಸಾವುಗಳಿಂದ ಬಟಾಬಯಲಾಗಿದೆ. ಸರಕಾರದ ವೈಫಲ್ಯ ಮತ್ತು ಆಸ್ಪತ್ರೆಗಳ ಅಸಹಾಯಕತೆ ಜನರನ್ನು ಆಕ್ರೋಶಕ್ಕೆ ತಳ್ಳಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ನಡೆದ ದುರಂತ, ರಾಜ್ಯದ ಘನತೆಯನ್ನು ವಿಶ್ವದ ಮುಂದೆ ‘ನತಮಸ್ತಕ’ವಾಗಿಸಿದೆ. ಜನರನ್ನು ಎದುರಿಸಲು ಮುಖವಿಲ್ಲದೆ ರಾಜಕಾರಣಿಗಳು, ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದಕ್ಕೆ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಅವರಲ್ಲಿರುವ ಒಂದೇ ಅಸ್ತ್ರ ಕೋಮುಗಲಭೆ. ಕೊರೋನ ಈ ದೇಶಕ್ಕೆ ಕಾಲಿಟ್ಟಾಗ, ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಕೇಂದ್ರ ಸರಕಾರ ‘ತಬ್ಬೀಗಿ’ ಸಮಾವೇಶವನ್ನು ಬಳಸಿಕೊಂಡಿತು. ಈ ಬಾರಿ ಸರಕಾರ ತಾನೇ ತೋಡಿದ ಹೊಂಡದಲ್ಲಿ ಬಿದ್ದು ಹೊರಳಾಡುತ್ತಿದೆ. ಚುನಾವಣಾ ರ್ಯಾಲಿ, ಕುಂಭಮೇಳದಂತಹ ಸಮಾವೇಶಗಳಿಗೆ ಅವಕಾಶ ಮಾಡಿಕೊಟ್ಟು ಕೊರೋನ ಉಲ್ಬಣಿಸಲು ಕಾರಣವಾಗಿರುವ ಸರಕಾರ, ಇದೀಗ ಕೊರೋನವನ್ನು ಮತ್ತೆ ಒಂದು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟಲು ಅವಕಾಶಗಳಿವೆಯೇ ಎಂದು ಹೊಂಚು ಹಾಕಿ ಕಾಯುತ್ತಿದೆ. ಅದರ ಭಾಗವಾಗಿ, ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಒಂದು ನಕಲಿ ಕಾರ್ಯಾಚರಣೆಯನ್ನು ನಡೆಸಿ, ಕೊರೋನ ವೈಫಲ್ಯಗಳಿಗೆ ಮುಸ್ಲಿಮ್ ಕೊರೋನ ವಾರಿಯರ್ಸ್‌ ಕಾರಣ ಎಂದು ಆರೋಪಿಸಲು ಹೋಗಿ ತಾವೇ ಬೆತ್ತಲಾಗಿ ನಿಂತಿದ್ದಾರೆ.

ಬ್ರಾಹ್ಮಣ ಸಮುದಾಯದ ಯುವ ಮುಖಂಡ ಎಂದೇ ಗುರುತಿಸಲ್ಪಟ್ಟಿರುವ ಸಂಸದ ತೇಜಸ್ವಿ ಸೂರ್ಯ ಅವರು ನಿನ್ನೆ ಏಕಾಏಕಿ ಬಿಬಿಎಂಪಿಗೆ ದಾಳಿ ನಡೆಸಿ, ಆಸ್ಪತ್ರೆಗಳ ಬೆಡ್‌ಗಳ ಕಾದಿರಿಸುವಿಕೆಯ ಹಿಂದಿದ್ದ ಅವ್ಯವಹಾರವೊಂದರ ತನಿಖೆ ನಡೆಸಿದರು. ಈ ಸಂದರ್ಭದಲ್ಲಿ ಅಕ್ರಮವಾಗಿ ಆಸ್ಪತ್ರೆಗಳ ಬೆಡ್‌ಗಳನ್ನು ಬ್ಲಾಕ್ ಮಾಡಿ ಅದನ್ನು ಭಾರೀ ದುಡ್ಡಿಗೆ ಮಾರಾಟ ಮಾಡುವ ದಂಧೆ ಮುನ್ನೆಲೆಗೆ ಬಂತು. ಆಸ್ಪತ್ರೆಯ ಬೆಡ್‌ಗಳು, ಆಕ್ಸಿಜನ್‌ಗಳು ಮತ್ತು ಔಷಧಿಗಳು ಅಕ್ರಮವಾಗಿ ಮಾರಾಟವಾಗುತ್ತಿರುವ ಕುರಿತಂತೆ ಆರೋಪಗಳಿರುವುದು ಇಂದು ನಿನ್ನೆಯೇನೂ ಅಲ್ಲ. ಕೊರೋನದಿಂದ ಈ ಪರಿಯ ಸಾವುನೋವುಗಳು ಸಂಭವಿಸುವುದಕ್ಕೆ ಈ ಅಕ್ರಮ ದಂಧೆಯೇ ಕಾರಣ ಎನ್ನುವುದನ್ನು ವಿವಿಧ ಸಂಘಸಂಸ್ಥೆಗಳು ಈಗಾಗಲೇ ಆರೋಪಿಸುತ್ತಾ ಬಂದಿವೆ. ಸಂಘಟನೆಯೊಂದು ದೂರನ್ನೂ ದಾಖಲಿಸಿದೆ. ಆದರೆ ಸರಕಾರ ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಸರಕಾರದೊಳಗಿರುವ ಮುಖಂಡರೇ ಈ ದಂಧೆಯಲ್ಲಿ ಭಾಗಿಯಾಗಿರುವುದರಿಂದ ಸಂಬಂಧಪಟ್ಟವರು ಈ ದಂಧೆಯನ್ನು ನಿಯಂತ್ರಿಸಲು ವಿಫಲರಾಗುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ, ಏಕಾಏಕಿ ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿ, ಅಕ್ರಮ ಬೆಡ್ ಕಾದಿರಿಸುವಿಕೆಯ ಕಡೆಗೆ ಬೆಟ್ಟು ಮಾಡಿದ್ದು ಶ್ಲಾಘನೀಯ ಕೆಲಸ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿರೋಧ ಪಕ್ಷದ ನಾಯಕರು ಮಾಡಬೇಕಾದ ಕೆಲಸವನ್ನು ಸಂಸದ ತೇಜಸ್ವಿ ಸೂರ್ಯ ಅವರು ಮಾಡಿದ್ದರು. ತನ್ನದೇ ಸರಕಾರದ ವಿರುದ್ಧ ಕಾರ್ಯಾಚರಣೆ ನಡೆಸುವ ಮೂಲಕ, ಕೊರೋನ ಸಾವುನೋವುಗಳಿಗೆ ತಕ್ಷಣದ ತಾತ್ಕಾಲಿಕ ಪರಿಹಾರವೊಂದನ್ನು ಅವರು ನೀಡಬಹುದು ಎಂದೇ ಜನರು ಭಾವಿಸಿದ್ದರು. ಆದರೆ, ಇಡೀ ಕಾರ್ಯಾಚರಣೆಯ ಕಟ್ಟ ಕಡೆಯ ಉದ್ದೇಶ, ಕೊರೋನ ವೈಫಲ್ಯಗಳಿಗೆ ನಿರ್ದಿಷ್ಟ ಸಮುದಾಯದ ಜನರನ್ನು ಹೊಣೆ ಮಾಡುವುದೇ ಆಗಿತ್ತು ಎನ್ನುವುದು ಗೊತ್ತಾದಾಗ ಮಾತ್ರ ನಾಡಿನ ಜನತೆ ಬೇಸ್ತು ಬಿದ್ದರು. ಕಾರ್ಯಾಚರಣೆಯ ಸಂದರ್ಭದಲ್ಲಿ ಬೆಡ್ ಬ್ಲಾಕಿಂಗ್ ದಂಧೆಯ ಬಗ್ಗೆ ತನ್ನ ಆಕ್ರೋಶವನ್ನು ವ್ಯಕ್ತ ಪಡಿಸಿದ ಸಂಸದರು, ಅಧಿಕಾರಿಯೊಬ್ಬರ ಬಳಿ ವಾರ್ ರೂಂನಲ್ಲಿರುವ ಸುಮಾರು 17 ಹೆಸರುಗಳನ್ನು ವಾಚಿಸಿದರು. ಅವೆಲ್ಲವೂ ವಾರ್‌ರೂಂನಲ್ಲಿ ಕೆಲಸ ಮಾಡುವ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಸಿಬ್ಬಂದಿಯ ಹೆಸರುಗಳಾಗಿದ್ದವು. ಅವರು ಹೆಸರನ್ನು ವಾಚಿಸುತ್ತಿದ್ದಂತೆಯೇ, ಪಕ್ಕದಲ್ಲೇ ಇದ್ದ ಶಾಸಕ ರವಿಸುಬ್ರಹ್ಮಣ್ಯ ಅವರು ‘‘ನೀವು ನೇಮಕ ಮಾಡಿರುವುದು ಕಾರ್ಪೊರೇಶನ್‌ಗಾ? ಅಥವಾ ಮದ್ರಸಕ್ಕಾ?’’ ಎಂದು ಕೇಳಿದರು.

ವಾರ್ ರೂಂನಲ್ಲಿ ಕೆಲಸ ಮಾಡುತ್ತಿರುವುದು ಒಂದು ಧರ್ಮಕ್ಕೆ ಸೇರಿದ ಈ 17 ಜನರು ಮಾತ್ರ ಎಂದು ಜನ ತಪ್ಪು ತಿಳಿಯುವಂತೆ ಸಂಸದರು ವರ್ತಿಸಿದ್ದರು. ಈ ವಾರ್‌ರೂಂನಲ್ಲಿ ವಿವಿಧ ಧರ್ಮಗಳಿಗೆ ಸೇರಿದ 200ಕ್ಕೂ ಅಧಿಕ ಮಂದಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಬಿಟ್ಟು ಕೇವಲ ಒಂದು ಧರ್ಮಕ್ಕೆ ಸೇರಿದ ಕೆಲವು ಹೆಸರುಗಳನ್ನು ಅಲ್ಲಿ ಉಲ್ಲೇಖಿಸಲು ಕಾರಣವಾದರೂ ಏನು? ಈ ಹೆಸರುಗಳು ಅಕ್ರಮದಲ್ಲಿ ಭಾಗಿಯಾಗಿವೆ ಎಂಬ ಮಾಹಿತಿಗಳೇನಾದರೂ ಸಂಸದರಿಗೆ ಸಿಕಿದೆಯೆ? ಇಡೀ ಕಾರ್ಯಾಚರಣೆಯಲ್ಲಿ ಸಂಸದರು ಬಹಿರಂಗ ಪಡಿಸಿರುವ ಅತ್ಯಂತ ರಹಸ್ಯ ಮಾಹಿತಿ ಏನು ಎಂದರೆ, ವಾರ್ ರೂಂನಲ್ಲಿರುವ 200 ಕ್ಕೂ ಅಧಿಕವಿರುವ ಕೊರೋನ ವಾರಿಯರ್‌ಗಳಲ್ಲಿ 17 ಜನರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಿದ್ದಾರೆ ಎನ್ನುವುದಷ್ಟೇ. ‘ಎದೆ ಸೀಳಿದರೆ ಒಂದಕ್ಷರ ಸಿಗದವರು’ ‘ಪಂಕ್ಚರ್ ಹಾಕುವವರು’ ವಾರ್ ರೂಂನಲ್ಲಿರುವುದು ಸಂಸದರಿಗೆ ಆಘಾತ ತಂದಿರುವುದು ಸಹಜವೇ ಆಗಿದೆ.

ಆದರೆ ಅದಕ್ಕಾಗಿ ಅವರು, ಸೂಕ್ತ ವೈದ್ಯರನ್ನು ಸಂಪರ್ಕಿಸಿ ತಮ್ಮ ಮೆದುಳಿಗೆ ಅಂಟಿರುವ ಕೋಮು ವೈರಸ್‌ನ್ನು ಶುಚಿಗೊಳಿಸಬೇಕೇ ಹೊರತು, ಬಿಬಿಎಂಪಿ ಅಧಿಕಾರಿಗಳ ಮೇಲೆ ಹರಿಹಾಯುವುದು ಸರಿಯೇ? ಇಷ್ಟಕ್ಕೂ ವಾರ್‌ರೂಂ ಸಿಬ್ಬಂದಿಯ ಕೆಲಸ ಸೀಮಿತವಾದುದು. ಒಂದು ಆಸ್ಪತ್ರೆಯ ಬೆಡ್‌ಗಳನ್ನು ಬ್ಲಾಕ್‌ನಲ್ಲಿ ತೆಗೆದಿರಿಸುವ ಯಾವ ಅಧಿಕಾರವೂ ಅವರಿಗಿಲ್ಲ. ಮೇಲಧಿಕಾರಿಗಳ ಕಣ್ಗಾವಲಿನಲ್ಲಿ ಅವರು ಕೆಲಸ ಮಾಡುತ್ತಾರೆ. ಮೇಲಧಿಕಾರಿಗಳು ಸೂಚಿಸಿದಂತೆ ಕಾರ್ಯನಿರ್ವಹಿಸುವುದಷ್ಟೇ ಅವರ ಹೊಣೆ. ರಾಜ್ಯಾದ್ಯಂತ ಕೊರೋನ ಜನರನ್ನು ಸಾಲು ಸಾಲಾಗಿ ಬಲಿ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲಿ, ತಮ್ಮ ಜೀವವನ್ನು ಪಣಕ್ಕಿಟ್ಟು ಇಲ್ಲಿ ಕೆಲಸ ನಿರ್ವಹಿಸುವ ವಾರಿಯರ್ಸ್‌ನ್ನು ಅಭಿನಂದಿಸಬೇಕಾಗಿದ್ದ ಸಂಸದ, ತನ್ನ ಸರಕಾರವನ್ನು ರಕ್ಷಿಸುವುದಕ್ಕಾಗಿ ಅವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವುದು ಅಕ್ಷಮ್ಯ ಮತ್ತು ಅಮಾನವೀಯವಾಗಿದೆ.

ರಾಜ್ಯದಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಸಂಸದರೇ, ಈಗ ಅದಕ್ಕೆ ಹೊಣೆ ಯಾರು ಎನ್ನುವುದನ್ನು ಸ್ಪಷ್ಟ ಪಡಿಸಬೇಕು ಮತ್ತು ಅವರ ರಾಜೀನಾಮೆಗೆ ಒತ್ತಾಯಿಸಬೇಕು. ರಾಜ್ಯದಲ್ಲಿರುವುದು ಬಿಜೆಪಿ ಸರಕಾರ. ಮುಖ್ಯಮಂತ್ರಿಯೂ ಅವರದೇ ಪಕ್ಷದವರು. ಆರೋಗ್ಯ ಸಚಿವರೂ ಬಿಜೆಪಿಗೆ ಸೇರಿದವರು. ಬಿಬಿಎಂಪಿಯ ನಿಯಂತ್ರಣವಿರುವುದೂ ಬಿಜೆಪಿಯ ಕೈಯಲ್ಲೇ. ಅಂದರೆ ಸಂಸದರು ನೇರವಾಗಿ ಸರಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ಈ ಆರೋಪದ ಬಗ್ಗೆ ಸರಕಾರ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿರಾಕರಿಸಿಯೂ ಇಲ್ಲ. ದಂಧೆಗೆ ಸಂಬಂಧಿಸಿದಂತೆ ಹಲವರ ಬಂಧನವಾಗಿದೆ. ಬೆಡ್ ಬ್ಲಾಕಿಂಗ್ ದಂಧೆಯಿಂದ ಈಗಾಗಲೇ ನೂರಾರು ಕೊರೋನ ಸೋಂಕಿತರು ಬೆಡ್ ಸವಲತ್ತುಗಳಿಲ್ಲದೆ ಮೃತಪಟ್ಟಿದ್ದಾರೆ. ಅಂದರೆ ರಾಜ್ಯದಲ್ಲಿ ನಡೆಯುತ್ತಿರುವ ಸಾವು ನೋವುಗಳು ಪರೋಕ್ಷವಾಗಿ, ಸರಕಾರದ ಮೂಲಕ ನಡೆಯುತ್ತಿರುವ ಕೊಲೆಗಳು ಎನ್ನುವುದನ್ನು ಸಂಸದರೇ ನಾಡಿಗೆ ಸ್ಪಷ್ಟಪಡಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಕನಿಷ್ಠ ಆರೋಗ್ಯ ಸಚಿವರಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇದೇ ಸಂದರ್ಭದಲ್ಲಿ ಅಕ್ರಮ ಬೆಡ್ ಬ್ಲಾಕಿಂಗ್ ದಂಧೆಯ ಕುರಿತಂತೆ ಉನ್ನತ ಸಂಸ್ಥೆಯ ನೇತೃತ್ವದಲ್ಲಿ ತನಿಖೆ ನಡೆದು, ಸಂಬಂಧಪಟ್ಟವರಿಗೆ ಶಿಕ್ಷೆಯಾಗಬೇಕಾಗಿದೆ. ಇಲ್ಲವಾದರೆ ಕೊರೋನ ಸಂತ್ರಸ್ತರ ಕಣ್ಣಿಗೆ ಮಣ್ಣೆರಚಲು ಸಂಸದರು ಅಸಲಿ ಭ್ರಷ್ಟರ ವಿರುದ್ಧ ನಡೆಸಿದ ನಕಲಿ ಕಾರ್ಯಾಚರಣೆ ಎಂದೇ ಇದನ್ನು ಭಾವಿಸಬೇಕಾಗುತ್ತದೆ. ಮತ್ತು ಕೊರೋನದಂತಹ ತುರ್ತು ವಿಕೋಪದ ಸಂದರ್ಭದಲ್ಲಿ ಜನರ ನಡುವೆ ಕೋಮುದ್ವೇಷವನ್ನು ಹರಡಲು ಯತ್ನಿಸಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News