ತೇಜಸ್ವಿ ಸೂರ್ಯರ ಕೋಮುವಾದಿ ಮನಸ್ಥಿಗೆ ಲಸಿಕೆ ಕಂಡು ಹಿಡಿಯಬೇಕು: ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್

Update: 2021-05-21 10:31 GMT

ಬೆಂಗಳೂರು, ಮೇ 5: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವ ಸಂಬಂಧ ಸರಕಾರ ಕೈಗೊಂಡಿರುವ ಕ್ರಮಗಳೇನು? ಎಷ್ಟು ಆಕ್ಸಿಜನ್ ಹಾಸಿಗೆಗಳಿವೆ ? ಆಕ್ಸಿಜನ್ ಪ್ರಮಾಣದ ಲಭ್ಯತೇ ಎಷ್ಟು ? ರೆಮ್‍ಡೆಸಿವಿರ್ ಔಷಧಿಯ ಲಭ್ಯತೆ, ಲಸಿಕೆಯ ಲಭ್ಯತೆ, ರಾಜ್ಯದ ಜನತೆಗೆ ಲಸಿಕೆ ಹಾಕಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದರ ಬಗ್ಗೆ ಸರಕಾರ ಶ್ವೇತ್ರಪತ್ರ ಬಿಡುಗಡೆ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಆಗ್ರಹಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ 24 ಜನ ಸತ್ತರೆ, ಸಚಿವರು ಮೂವರು ಮಾತ್ರ ಸತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಘಟನೆ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ ಎಂದರು.

ಸರಕಾರದ ವಿರುದ್ಧ ಮಾಧ್ಯಮಗಳು, ಜನಸಾಮಾನ್ಯರು ಹಿಡಿಶಾಪ ಹಾಕುತ್ತಿರುವುದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನಿನ್ನೆ ಬಿಬಿಎಂಪಿ ವಾರ್ ರೂಮ್‍ನಲ್ಲಿ ಒಂದು ನಾಟ ಆಡಿದ್ದಾರೆ. ಬಿಬಿಎಂಪಿಯಲ್ಲಿ ಯಾವುದೇ ಅವ್ಯವಹಾರಗಳು ನಡೆದರೂ ಅದಕ್ಕೆ ಉತ್ತರದಾಯಿತ್ವ ಬಿಬಿಎಂಪಿಯ ಆಡಳಿತಾಧಿಕಾರಿ ಹಾಗೂ ಬೆಂಗಳೂರು ಉಸ್ತುವಾರಿಯಾಗಿರುವ ಮುಖ್ಯಮಂತ್ರಿ ಹೆಗಲಿಗಿದೆ. ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಅವ್ಯವಹಾರ ಕುರಿತು ಪ್ರಶ್ನಿಸಬೇಕಿರುವುದು ಬಿಬಿಎಂಪಿ ಹಾಗೂ ಮುಖ್ಯಮಂತ್ರಿಯನ್ನು ಎಂದು ನಾಸೀರ್ ಹುಸೇನ್ ಹೇಳಿದರು.

ನಮ್ಮ ರಾಜ್ಯದಲ್ಲಿ ಆಕ್ಸಿಜನ್ ವ್ಯವಸ್ಥೆ, ಆಕ್ಸಿಜನ್ ಹಾಸಿಗೆಗಳ ಸೌಲಭ್ಯ, ರೆಮ್‍ಡಿಸಿವಿರ್ ಚುಚ್ಚು ಮದ್ದಿನ ಲಭ್ಯತೆ, ಕೋವಿಡ್ ಲಸಿಕೆಯ ಲಭ್ಯತೆ ಕುರಿತು ಎಂದಾದರೂ ತೇಜಸ್ವಿ ಸೂರ್ಯ ಸರಕಾರದ ಜೊತೆ ಮಾತನಾಡಿದ್ದಾರಾ. ಚಾಮರಾಜನಗರದ ಘಟನೆಯಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಈ ಪ್ರಯತ್ನ ನಡೆಸಲಾಗಿದೆ ಎಂದು ಅವರು ದೂರಿದರು.

ಬೆಂಗಳೂರು ದಕ್ಷಿಣ ವಲಯದ ಕೋವಿಡ್ ವಾರ್ ರೂಮ್‍ಗೆ ಹೊರ ಗುತ್ತಿಗೆ ಆಧಾರದಲ್ಲಿ 205 ಮಂದಿಯನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಈ ಪೈಕಿ 17 ಮುಸ್ಲಿಮರು ಇದ್ದಾರೆ. ನಿನ್ನೆ ಬೆಡ್ ಬ್ಲಾಕಿಂಗ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಕೇವಲ 17 ಜನ ಮುಸ್ಲಿಮರ ಹೆಸರನ್ನು ಮಾತ್ರ ಓದಿದ್ದಾರೆ. ಉಳಿದವರ ಹೆಸರು ಇವರ ಕಣ್ಣಿಗೆ ಕಂಡಿಲ್ಲ. ಇವರಿಗೆ ಮಾನ ಮರ್ಯಾದೆ ಇದೆಯೇ? ಒಂದು ರೀತಿಯಲ್ಲಿ ಥರ್ಡ್ ಕ್ಲಾಸ್ ಕೆಲಸ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಡ್ ಬ್ಲಾಕಿಂಗ್‍ನಲ್ಲಿ 17 ಜನ ಅಕ್ರಮ ಮಾಡಿದ್ದಾರೆ ಎಂದು ಇವರಿಗೆ ಹೇಳಿದವರು ಯಾರು? ಇವರು ತನಿಖೆ ಮಾಡಿದ್ದಾರೆಯೇ? ತಪ್ಪಿತಸ್ಥರು ಎಂದು ಹೇಗೆ ತೀರ್ಮಾನ ಮಾಡಿದರು. ಆ 17 ಜನರನ್ನು ಬಿಬಿಎಂಪಿ ಕೆಲಸದಿಂದ ತೆಗೆದು ಹಾಕಿದೆ. ಹಾಗಾದರೆ, ಉಳಿದ 188 ಜನರು ಏನೂ ಮಾಡಿಲ್ಲವೇ? ಕೋವಿಡ್ ಸೋಂಕಿಗೆ ಲಸಿಕೆ ಕಂಡು ಹಿಡಿದ ಮಾದರಿಯಲ್ಲೆ ತೇಜಸ್ವಿ ಸೂರ್ಯ ಮನಸ್ಸಿನಲ್ಲಿರುವ ಕೋಮುವಾದಿ ಮನಸ್ಥಿತಿಗೂ ಲಸಿಕೆ ಕಂಡು ಹಿಡಿಯಬೇಕು. ಇಂತಹವರು ನಮ್ಮ ದೇಶ, ರಾಜ್ಯದಲ್ಲಿ ಜನಪ್ರತಿನಿಧಿಗಳಾಗಲೂ ಯೋಗ್ಯರಲ್ಲ ಎಂದು ಅವರು ಕಿಡಿಗಾರಿದರು.

ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಮಾತನಾಡಿ, ತೇಜಸ್ವಿ ಸೂರ್ಯ ಒಂದು ಕೋಮಿಗೆ ಸೇರಿದ 17 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ. ಹಾಗಾದರೆ, ಬೇರೆಯವರೆಲ್ಲರೂ ಒಳ್ಳೆಯವರೇ ಅವರು ಏನು ತಪ್ಪು ಮಾಡಿಲ್ಲವೇ? ತೇಜಸ್ವಿ ಸೂರ್ಯ ರಾಜಧರ್ಮ ಪಾಲಿಸುವ ಕೆಲಸವೇ ಇದು ಎಂದು ಪ್ರಶ್ನಿಸಿದರು.

17 ಮಂದಿಯನ್ನು ಹೊರತುಪಡಿಸಿ ಬೇರೆಯವರೆಲ್ಲರೂ ಒಳ್ಳೆಯವರು ಎಂದು ಹೇಳಲು ನಿಮ್ಮ ಬಳಿ ಯಾವ ಮಾಹಿತಿ, ಪುರಾವೆ ಇದೆ. ಆಧಾರ ಇಲ್ಲದೆ  ಎಲ್ಲವನ್ನೂ ಹೇಳಲು ಸಾಧ್ಯವೇ? ಇದೀಗ ಸಿಸಿಬಿಯವರು ಎಲ್ಲ ವೈದ್ಯರನ್ನು ಕರೆಸಿ ವಿಚಾರಣೆ ಮಾಡುತ್ತಿದ್ದಾರೆ. ಈಗಾಗಲೆ ಕೋವಿಡ್‍ನಿಂದ ಸುಮಾರು 500 ವೈದ್ಯರು ಬಲಿಯಾಗಿದ್ದಾರೆ. ಕೋವಿಡ್ ಪರಿಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ ವೈದ್ಯರು ತನಿಖೆಗೆ ಒಳಗಾಗಬೇಕೇ? ಎಂದು ಅವರು ಪ್ರಶ್ನಿಸಿದರು.

ವೆಂಟಿಲೇಟರ್ ಗಳು, ಮಾಸ್ಕ್, ಸ್ಯಾನಿಟೈಸರ್ ಬಗ್ಗೆ ಹಗರಣಗಳು ನಡೆದಿವೆ. 5,000 ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ನಾವು ಹೇಳಿದ್ದೇವೆ. ಆದರೆ, ಇಲ್ಲಿ 15 ಸಾವಿರ ರೂ,  20 ಸಾವಿರ ರೂ. ಪಡೆದು ಹಾಸಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಕೋವಿಡ್ ರೋಗಿಗಳು ಅಲ್ಲದೇ ಇರುವವರಿಗೆ ಹಾಸಿಗೆ ಕೊಟ್ಟಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು.

ತೇಜಸ್ವಿ ಸೂರ್ಯ ಒಂದು ಟ್ರಸ್ಟ್ ನಡೆಸುತ್ತಿದ್ದಾರೆ. ಅವರು ಯಾರಿಗೆ ಬೇಕು ಅವರಿಗೆ ಬೆಡ್ ಕೊಡಿಸುತ್ತಿದ್ದಾರೆ. ಈ ಸಂಬಂಧ ಸರಕಾರದ ಮೇಲೆ ಅವರು ದಬ್ಬಾಳಿಕೆ ತೋರಿಸುತ್ತಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News