ನಮಗೂ ಸಹ ನೆರವು ಪಡೆಯಲಾಗುತ್ತಿಲ್ಲ: ಐಎಎಸ್, ಐಪಿಎಸ್, ಐಆರ್ ಎಸ್‌ ಅಧಿಕಾರಿಗಳ ಅಳಲು

Update: 2021-05-05 17:58 GMT

ಹೊಸದಿಲ್ಲಿ,ಮೇ 5: ದೇಶವನ್ನು ಅಪ್ಪಳಿಸಿರುವ ಕೊರೋನವೈರಸ್ ಎರಡನೇ ಅಲೆಯು ಬಡವರು-ಬಲ್ಲಿದರು ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ದೇಶದ ಆಡಳಿತ ವ್ಯವಸ್ಥೆಯ ಬೆನ್ನೆಲುಬು ಎಂದೇ ಪರಿಗಣಿಸಲಾಗಿರುವ ಉನ್ನತ ಅಧಿಕಾರಿಗಳೂ ಇದರಿಂದ ಹೊರತಾಗಿಲ್ಲ. ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿಯಾಗಿದ್ದ,ಇನ್ನೂ ಕೇವಲ 32ರ ಹರೆಯದ ಅಖಿಲ ಭಾರತ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿ ಅನಂತ ತಾಂಬೆ ಅವರು ಸೋಮವಾರ ನಿಧನರಾಗಿದ್ದು,ಕೊರೋನವೈರಸ್ ಗೆ ಬಲಿಯಾಗಿರುವ ಉನ್ನತ ಅಧಿಕಾರಿಗಳ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದ್ದಾರೆ.

ತಾಂಬೆಯವರ ನಿಧನಕ್ಕೆ ಕೆಲವೇ ದಿನಗಳ ಮುನ್ನ ಎ.30ರಂದು ಬಿಹಾರದ ಮುಖ್ಯ ಕಾರ್ಯದರ್ಶಿ, 1985ರ ತಂಡದ ಐಎಎಸ್ ಅಧಿಕಾರಿ ಅರುಣ್ ಕುಮಾರ್ ಸಿಂಗ್ ಅವರು ಪಾಟ್ನಾದ ಆಸ್ಪತ್ರೆಯಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿದ್ದರು. ಎ.14ರಂದು ಬಿಹಾರ ಕೇಡರ್ನ 2008ರ ತಂಡದ ಐಎಎಸ್ ಅಧಿಕಾರಿ ವಿಜಯ ರಂಜನ್ ಅವರೂ ಪಾಟ್ನಾದಲ್ಲಿ ಕೋವಿಡ್ ಗೆ ಬಲಿಯಾಗಿದ್ದರು.

ನೆರೆಯ ಉತ್ತರ ಪ್ರದೇಶದಲ್ಲಿ ಹಿರಿಯ ಐಎಎಸ್ ಅಧಿಕಾರಿ ದೀಪಕ ತ್ರಿವೇದಿ ಅವರು ತನ್ನ ನಿವೃತ್ತಿಗೆ ಮುನ್ನಾ ದಿನ ಎ.29ರಂದು ಕೋವಿಡ್ ನಿಂದಾಗಿ ನಿಧನರಾಗಿದ್ದರು. ಇದಕ್ಕೂ ಮುನ್ನ ಎ.11ರಂದು ಗುಜರಾತ ಕೇಡರ್ನ ಡಿಐಜಿ ದರ್ಜೆಯ ಐಪಿಎಸ್ ಅಧಿಕಾರಿ ಮಹೇಶ ನಾಯಕ್ ಅವರನ್ನು ವಡೋದರಾದ ಆಸ್ಪತ್ರೆಯಲ್ಲಿ ಕೋವಿಡ್ ಬಲಿ ಪಡೆದಿತ್ತು.

ಕೊರೋನವೈರಸ್ ಯಾವುದೇ ಸೇವೆಯನ್ನು ಬಿಟ್ಟಿಲ್ಲ. 

ಪುಷ್ಪವಂತ ಶರ್ಮಾ, ಸಂಜಯ್ ಕುಮಾರ್ ಶ್ರೀವಾಸ್ತವ ಮತ್ತು ಮಣಿಕಾಂತ್ ಠಾಕೂರ್ ಸೇರಿದಂತೆ ಭಾರತೀಯ ಮಾಹಿತಿ ಸೇವೆ (ಐಐಎಸ್)ಯ ಕನಿಷ್ಠ ಮೂವರು ಹಿರಿಯ ಅಧಿಕಾರಿಗಳು ಕಳೆದ ಕೆಲವು ವಾರಗಳಲ್ಲಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ.
ಹಾಲಿ ಅಧಿಕಾರಿಗಳ ಸರಣಿ ಸಾವುಗಳು ದೇಶದ ನಾಗರಿಕ ಸೇವಾ ವಲಯಗಳಲ್ಲಿ ಭೀತಿಯನ್ನು ಸೃಷ್ಟಿಸಿದ್ದು,‌ ಹಲವಾರು ಅಧಿಕಾರಿಗಳು ತಮ್ಮ ಮತ್ತು ತಮ್ಮ ಕುಟುಂಬಗಳ ಆರೋಗ್ಯದ ಬಗ್ಗೆ ಆತಂಕದಲ್ಲಿದ್ದಾರೆ.

ಹಲವಾರು ಕಿರಿಯ ಅಧಿಕಾರಿಗಳೂ ಕೋವಿಡ್ಗೆ ಬಲಿಯಾಗಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಸರಕಾರಗಳಿಂದಲೂ ಸಂತಾಪ ವ್ಯಕ್ತವಾಗಿಲ್ಲ ಎಂದು ಹೇಳಿದ ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೋರ್ವರು,ಈಗಲೂ ಹಿರಿಯ ಅಧಿಕಾರಿಗಳನ್ನು ಕಚೇರಿಗಳಿಗೆ ಕರೆಸಿಕೊಳ್ಳಲಾಗುತ್ತಿದೆ. ಇವರೆಲ್ಲ ಹೆಚ್ಚಾಗಿ 50-55 ವರ್ಷ ಮೇಲ್ಪಟ್ಟ ವಯೋಮಾನದವರಾಗಿದ್ದು, ಸುಲಭವಾಗಿ ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದರು.

ಇತ್ತೀಚಿಗಷ್ಟೇ ಕೋವಿಡ್ ಗೆ ಪಾಸಿಟಿವ್ ಆಗಿದ್ದ ಮಹಿಳಾ ಅಧಿಕಾರಿಯೋರ್ವರು ತನ್ನ ಸಹೋದ್ಯೋಗಿಗಳೊಂದಿಗೆ ವಾಟ್ಸ್ಆ್ಯಪ್ನಲ್ಲಿ ನಡೆಸಿದ್ದ ಮಾತುಕತೆ ದೇಶದ ಉನ್ನತ ಅಧಿಕಾರಿಗಳ ಇಕ್ಕಟ್ಟಿನ ಸ್ಥಿತಿಗೆ ಕನ್ನಡಿಯಾಗಿದೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಈ ಮಹಿಳಾ ಅಧಿಕಾರಿ ಮೂರು ದಿನಗಳವರೆಗೆ ಕಾದಿದ್ದರು,ಸೋಂಕಿಗೆ ಗುರಿಯಾಗಿದ್ದ ಅವರ ಅತ್ತೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಮೃತಪಟ್ಟಿದ್ದರು.

‘ಸಹಾಯ ಕೋರಿ ಸಂಬಂಧಿಕರು ನಮಗೆ ಕರೆಗಳನ್ನು ಮಾಡುತ್ತಾರೆ,ಆದರೆ ಅವರಿಗಾಗಿ ಏನೂ ಮಾಡಲಾಗದ ಮುಜುಗರದ ಸ್ಥಿತಿಯಲ್ಲಿ ನಾವಿದ್ದೇವೆ. ನಮಗೆ ಸೋಂಕು ತಗುಲಿದರೆ ಆಸ್ಪತ್ರೆಯಲ್ಲಿ ಹಾಸಿಗೆ ದೊರೆತರೆ ಅದೇ ನಮ್ಮ ಅದೃಷ್ಟ. ಹಿರಿಯ ಅಧಿಕಾರಿಗಳಾದ ನಮಗೂ ಯಾವುದೇ ನೆರವು ದೊರೆಯುತ್ತಿಲ್ಲ’ ಎಂದು ಈ ಮಹಿಳಾ ಅಧಿಕಾರಿ ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News