ಮಾಜಿ ಕೇಂದ್ರ ಸಚಿವ, ಆರ್ ಎಲ್ ಡಿ ಮುಖ್ಯಸ್ಥ ಅಜಿತ್ ಸಿಂಗ್ ಕೋವಿಡ್ ನಿಂದ ನಿಧನ

Update: 2021-05-06 15:52 GMT

ಹೊಸದಿಲ್ಲಿ,ಮೇ 6: ಮಾಜಿ ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ)ದ ಮುಖ್ಯಸ್ಥ ಅಜಿತ ಸಿಂಗ್ (82) ಅವರು ಗುರುವಾರ ಬೆಳಿಗ್ಗೆ ಕೋವಿಡ್‌ ನಿಂದಾಗಿ ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದಾಗಿ ಆರೋಗ್ಯ ಹದಗೆಟ್ಟ ಬಳಿಕ ಮಂಗಳವಾರ ಅವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಿಂಗ್ ಕೋವಿಡ್-19ಕ್ಕೆ ಪಾಸಿಟಿವ್ ಆಗಿರುವುದು ಎ.20ರಂದು ಪತ್ತೆಯಾಗಿತ್ತು ಎಂದು ತಿಳಿಸಿರುವ ಅವರ ಪುತ್ರ ಜಯಂತ ಚೌಧರಿ ಅವರು,ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತಮ್ಮ ಮನೆಗಳಲ್ಲಿಯೇ ದಿವಂಗತ ನಾಯಕನಿಗೆ ಗೌರವಗಳನ್ನು ಸಲ್ಲಿಸುವಂತೆ ಜನರನ್ನು ಕೋರಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಪುತ್ರರಾಗಿದ್ದ ಸಿಂಗ್ ಏಳು ಬಾರಿ ಉತ್ತರ ಪ್ರದೇಶದ ಬಾಘಪತ್ನಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಸಿಂಗ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಅವರ ನಿಧನ ನೋವನ್ನುಂಟು ಮಾಡಿದೆ. ಸದಾ ರೈತರ ಬೆಂಬಲಿಗರಾಗಿದ್ದ ಅವರು ರೈತರ ಏಳಿಗೆಗಾಗಿ ತನ್ನನ್ನು ಅರ್ಪಿಸಿಕೊಂಡಿದ್ದರು. ಕೇಂದ್ರದ ಹಲವಾರು ಇಲಾಖೆಗಳಲ್ಲಿ ತನ್ನ ಹೊಣೆಗಾರಿಕೆಯನ್ನು ಅವರು ದಕ್ಷತೆಯಿಂದ ನಿರ್ವಹಿಸಿದ್ದರು ಎಂದು ಟ್ವೀಟಿಸಿದ್ದಾರೆ.

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್ ನಾಯಕ ರಣದೀಪ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವಾರು ಗಣ್ಯರು ಸಿಂಗ್ ನಿಧನಕ್ಕೆ ಸಂತಾಪಗಳನ್ನು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News