ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಸಹಿಸುವುದಾದರೂ ಹೇಗೆ ?: ಕುಮಾರಸ್ವಾಮಿ

Update: 2021-05-07 06:10 GMT

ಬೆಂಗಳೂರು, ಮೇ 7: ಕರ್ನಾಟಕಕ್ಕೆ ನಿತ್ಯ 1200 ಟನ್‌ ಆಮ್ಲಜನಕ ಪೂರೈಸುವಂತೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. 'ಕರ್ನಾಟಕಕ್ಕೆ ಆಮ್ಲಜನಕ ಪೂರೈಕೆ ಹೆಚ್ಚಿಸಿದರೆ ಆರೋಗ್ಯ ವ್ಯವಸ್ಥೆ ಕುಸಿಯಲಿದೆ' ಎಂದು ವಾದಿಸಿದೆ. ಕರ್ನಾಟಕದಿಂದ ಎಲ್ಲವನ್ನೂ ಪಡೆದ ಕೇಂದ್ರ ಕರ್ನಾಟಕವನ್ನು ಇನ್ನೆಷ್ಟು ವಂಚಿಸಬೇಕೆಂದಿದೆ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯಕ್ಕೆ ನಿತ್ಯ 1700 ಟನ್‌ ಆಮ್ಲಜನಕದ ಅಗತ್ಯವಿದೆ. ಆದರೂ, 1200 ಟನ್‌ ಆಮ್ಲಜನಕ ಇದ್ದರೆ ಪರಿಸ್ಥಿತಿ ಹೇಗೋ ನಿಭಾಯಿಸಬಹುದು. ಕರ್ನಾಟಕದಲ್ಲಿ ಹೆಚ್ಚು ಕಡಿಮೆ 1200 ಟನ್‌ಗೂ ಅಧಿಕ ಪ್ರಮಾಣದ ಆಮ್ಲಜನಕವೂ ಉತ್ಪಾದನೆಯಾಗುತ್ತಿದೆ. ಆದರೆ, ನಮ್ಮಿಂದ ಆಮ್ಲಜನಕ ಕಿತ್ತುಕೊಳ್ಳುತ್ತಿರುವ ಕೇಂದ್ರ ಪೂರೈಸುತ್ತಿರುವುದು 865-965 ಟನ್‌ ಮಾತ್ರ ಎಂದು ತಿಳಿಸಿದ್ದಾರೆ.

''ಅನುದಾನದಲ್ಲಿ ತಾರತಮ್ಯ, ಜಿಎಸ್‌ಟಿ ಬಾಕಿಯಲ್ಲಿ ತಾರತಮ್ಯ, ನೆರೆ-ಬರ ಪರಿಹಾರದಲ್ಲಿ ಮಾಡಲಾದ ತಾರತಮ್ಯವನ್ನು ಕರ್ನಾಟಕ, ಕನ್ನಡಿಗರು ಹೇಗೋ ಸಹಿಸಿದ್ದಾರೆ. ಆದರೆ, ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಈ ಮಾರಕ ತಾರತಮ್ಯವನ್ನು ಸಹಿಸುವುದಾದರೂ ಹೇಗೆ. ಇದು ಕನ್ನಡಿಗರ ಜೀವ, ಜೀವನದ ಪ್ರಶ್ನೆ ಎಂಬುದನ್ನು ಕೇಂದ್ರ ಸರ್ಕಾರ ಅರಿಯುತ್ತಿಲ್ಲ ಏಕೆ?''

''ಅಷ್ಟಕ್ಕೂ ನಾವು ಅಧಿಕವಾಗಿ ಏನೂ ಕೇಳುತ್ತಿಲ್ಲ. ನಮ್ಮಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ನಮಗೇ ನೀಡಿ ಎಂಬುದು ನಮ್ಮ ಬೇಡಿಕೆ. ನಮ್ಮವರ ಜೀವವನ್ನೇ ಕಿತ್ತು ಗುಜರಾತ್‌ ಮತ್ತಿತರ ರಾಜ್ಯಗಳ ಜನರ ಜೀವ ಉಳಿಸಬೇಕಾದ ಅನಿವಾರ್ಯತೆ, ತ್ಯಾಗ ಮಾಡಬೇಕಾದ ಸಂದಿಗ್ಧತೆಯಲ್ಲಿ ನಮ್ಮನ್ನು ಸಿಲುಕಿಸಬಾರದು. ಕೇಂದ್ರ ನಮ್ಮ ಪಾಲನ್ನು ನಮಗೆ ನೀಡಲಿ''

''ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಕೇಂದ್ರದ ಇಂಥ ತಾರತಮ್ಯವನ್ನು ಪ್ರಶ್ನಿಸಬೇಕು. ಇಲ್ಲಿವರೆಗೆ ಬಾಯಿಗೆ ಬೀಗ ಹಾಕಿಕೊಂಡಿರುವ ಬಿಜೆಪಿ ಸಂಸದರು ಈಗ ಜನರ ಜೀವ ಉಳಿಸುವುದಕ್ಕಾದರೂ ಬಾಯಿ ಬಿಡಲಿ. ರಾಜ್ಯದಿಂದ ಶಕ್ತಿ ಪಡೆದಿರುವ ಕೇಂದ್ರ ಅದೇ ಶಕ್ತಿಯನ್ನು ಬಳಸಿಕೊಂಡು ರಾಜ್ಯದ ಮೇಲೆ ಗದಾಪ್ರಹಾರ ನಡೆಸುತ್ತಿರುವುದನ್ನು ಜನ ಗಮನಿಸಲಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News