"ಬೆಡ್ ಬ್ಲಾಕಿಂಗ್ ಹಗರಣ ಸಂಸದ ಬಯಲು ಮಾಡುತ್ತಾರೆಂದರೆ ಪೊಲೀಸ್, ಗುಪ್ತಚರ ಇಲಾಖೆ ಏನು ಕತ್ತೆ ಕಾಯುತ್ತಿತ್ತೇ?"

Update: 2021-05-07 07:04 GMT

ಮೈಸೂರು, ಮೇ 7: ಬೆಡ್ ಬ್ಲಾಕಿಂಗ್ ಹಗರಣ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯನನ್ನು ಸಮರ್ಥಿಸಿಕೊಳ್ಳುವ ಬಿ.ಎಸ್.ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸದ ತೇಜಸ್ವಿ ಸೂರ್ಯ ಬಹಳ ಕಷ್ಟಪಟ್ಟು ಬೆಡ್ ಬ್ಲಾಕಿಂಗ್ ಅವ್ಯವಹಾರ ಬಯಲು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ ಎಂದರೆ ಇವರು ಅಸಮರ್ಥರು ಎಂದರ್ಥ, ಬೆಡ್ ಬ್ಲಾಕಿಂಗ್ ಹಗರಣ ಸಂಸದ  ಬಯಲು ಮಾಡುತ್ತಾರೆ ಎಂದರೆ  ಪೊಲೀಸ್, ಗುಪ್ತಚರ ಇಲಾಖೆ ಏನು ಕತ್ತೆ ಕಾಯುತ್ತಿತ್ತೇ ಎಂದು ಖಾರವಾಗಿ ಪ್ರಶ್ನಿಸಿದರು.

ತೇಜಸ್ವಿ ಸೂರ್ಯನನ್ನು ಸಮರ್ಥಿಸಿಕೊಳ್ಳುವ ಮುಖ್ಯಮಂತ್ರಿಗಳು ಅಸಮರ್ಥರು, ಬಿಬಿಎಂಪಿ, ಪೊಲೀಸ್, ಗುಪ್ತಚರ ಇಲಾಖೆ ಎಲ್ಲವೂ  ಇವರ ಕೈಯಲ್ಲೇ ಇದೆ. ಇದೆಲ್ಲವೂ ಸಿಎಂಗೆ ಗೊತ್ತಾಗಲಿಲ್ಲವೇ ಎಂದು ಹೇಳಿದರು.

ಸಂಸದರು ಮಾಡುವ ಕೆಲಸ ಇದಲ್ಲ, ಕೊರೋನದಿಂದ  ಜನ ಆಕ್ಸಿಜನ್, ಬೆಡ್, ಔಷಧ ಇಲ್ಲದೆ ಸಾಯುತ್ತಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನಗಳನ್ನು ತರುವ ಪ್ರಯತ್ನವನ್ನು ಮಾಡಬೇಕು, ಅದು ಬಿಟ್ಟು ಇಲ್ಲಿ ಮಾಧ್ಯಮಗಳ ಮುಂದೆ ಪೌರುಷ ತೋರುವುದಲ್ಲ, ನಿಮ್ಮ ಪೌರುಷವನ್ನು  ಪ್ರಧಾನಿ ಮುಂದೆ ತೋರಿಸಿ ಎಂದು ಗುಡುಗಿದರು.

ಬೆಡ್ ಬ್ಲಾಕಿಂಗ್ ವಿಚಾರದಲ್ಲಿ ಕೋಮು ಬಣ್ಣ ಕಟ್ಟಿ ಅಶಾಂತಿಗೆ ಕಾರಣರಾಗುತ್ತಿರುವ ನಿಮಗೆ ಮಾನ ಮರ್ಯಾದೆ ಎಂಬುದೇ ಇಲ್ಲ, ಚಾಮರಾಜನಗರ ವಿಚಾರವನ್ನು ಮರೆಮಾಚಲು ಇಂತಹ ವಿಚಾರವನ್ನು ಮುಂದೆ ತಂದಿರಿ ಎಂದು ಹರಿಹಾಯ್ದರು.

ದೇಶಾದ್ಯಂತ 2.5 ಲಕ್ಷ ಮಂದಿ ಕೊರೋನಗೆ ಬಲಿಯಾಗಿದ್ದಾರೆ. ಪ್ರಧಾನಮಂತ್ರಿಗಳು ಒಂದೇ ಒಂದು ವಿಷಾದ  ವ್ಯಕ್ತಪಡಿಸಿಲ್ಲ, ಆದರೆ ಪಶ್ಚಿಮ ಬಂಗಾಳದಲ್ಲಿ ಸೋತ ಬಿಜೆಪಿಯವರು ಅಲ್ಲಿ ನಡೆದ ಸಂಘರ್ಷದಿಂದ ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಬಗ್ಗೆ ಸಹಾನೂಭೂತಿ ತೋರಿಸುತ್ತಾರೆ ಮತ್ತು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಾರೆ. ಈ ಬಗ್ಗೆ ನಿಮಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News