ಖುದ್ಸ್ ದಿನಾಚರಣೆ ಅನ್ಯಾಯದ ವಿರುದ್ಧ ಜಾಗತಿಕ ಪ್ರತಿರೋಧದ ಸಂಕೇತ: ಭಾರತದಲ್ಲಿ ಇರಾನ್ ರಾಯಭಾರಿ ಡಾ.ಅಲಿ ಚೆಗೇನಿ

Update: 2021-05-07 08:36 GMT

ಅಂತರ್‌ರಾಷ್ಟ್ರೀಯ ಖುದ್ಸ್ ದಿನಾಚರಣೆ ಐಕ್ಯತೆ, ಧಾರ್ಮಿಕ ಮೌಲ್ಯಗಳಿಗೆ ಗೌರವ ಹಾಗೂ ಜಾಗತಿಕವಾಗಿ ಮುಸ್ಲಿಮರು ಮತ್ತು ಮುಸ್ಲಿಮೇತರರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಡುವ ಸ್ಫೂರ್ತಿಯ ಆಚರಣೆ ಹಾಗೂ ಸಂಕೇತವಾಗಿದೆ ಎಂದು ಭಾರತದಲ್ಲಿ ಇರಾನ್ ರಾಯಭಾರಿ ಡಾ. ಅಲಿ ಚೆಗೇನಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

1979 ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ ಸ್ಥಾಪಕ ಆಯತುಲ್ಲಾ ಖೊಮೇನಿ ಅವರು ರಮಝಾನ್ ತಿಂಗಳ ಕೊನೆಯ ಶುಕ್ರವಾರನ್ನು ಖುದ್ಸ್ ದಿನವಾಗಿ ಘೋಷಿಸಿದ್ದರು.

‘‘ಫೆಲೆಸ್ತೀನಿಯರು ಹಾಗೂ ವಿಶ್ವಾದ್ಯಂತ ಎಲ್ಲ ದಮನಿತ ಜನರ ಕಾನೂನು ಬದ್ಧ ಹಕ್ಕುಗಳನ್ನು ಸಮಸ್ತ ಮುಸ್ಲಿಮರು ಹಾಗೂ ಎಲ್ಲ ದೇಶಗಳ ಮಾನವ ಹಕ್ಕು ಹೋರಾಟಗಾರರು ಒಂದಾಗಿ ಬೆಂಬಲಿಸುವುದಕ್ಕೆ ಈ ದಿನ ಸ್ಫೂರ್ತಿಯಾಗಿದೆ’’ ಎಂದು ಅಲಿ ಚೆಗೇನಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ದಿನ ವಿಶ್ವದ ಯಾವುದೇ ಭಾಗದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಸುವ ದಮನಕಾರಿ ಶಕ್ತಿಗಳನ್ನು ವಿರೋಧಿಸುವ ದಿನವಾಗಿದೆ. ವಿಶ್ವಾದ್ಯಂತ ರಮಝಾನ್ ಆಚರಿಸುತ್ತಿರುವವರೆಗೂ ಖುದ್ಸ್ ದಿನವನ್ನು ಆಚರಿಸಲಾಗುವುದು. ಇದು ದೌರ್ಜನ್ಯ, ಅಕ್ರಮ ಸ್ವಾಧೀನ, ಭಯೋತ್ಪಾದನೆ, ವರ್ಣಭೇದ ಹಾಗೂ ಅನ್ಯಾಯಗಳ ವಿರುದ್ಧದ ಜಾಗತಿಕ ಪ್ರತಿರೋಧ ಆಂದೋಲನದ ಪ್ರಮುಖ ದಿನವಾಗಿ ಈಗ ಗುರುತಿಸಲ್ಪಟ್ಟಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ವರ್ಷ ಕೊರೊನ ಸೋಂಕು ವ್ಯಾಪಕವಾಗಿರುವುದರಿಂದ ಈ ಮಹತ್ವದ ದಿನವನ್ನು ಎಲ್ಲ ಜಾಗತಿಕ ಮಾನವ ಹಕ್ಕು ಹೋರಾಟಗಾರರು ಆನ್ ಲೈನ್ ನಲ್ಲಿ ಆಚರಿಸಿ ಇದರ ಮಹತ್ವವನ್ನು ಸಾರುತ್ತಿದ್ದಾರೆ. ವಿಶೇಷವಾಗಿ ಫೆಲೆಸ್ತೀನಿಯರ ವಿರುದ್ಧ ದಶಕಗಳ ಕಾಲ ನಡೆದಿರುವ ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ಸ್ಮರಿಸಿ ಅದನ್ನು ಸದಾ ವಿರೋಧಿಸುವ ಜಾಗೃತಿ ಮೂಡಿಸುತ್ತಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲೂ ಇಸ್ರೇಲ್ ತನ್ನ ಹಳೆ ಅಮಾನವೀಯ ಕುತಂತ್ರಗಳ ಮೂಲಕ ಫೆಲೆಸ್ತೀನಿ ಜಾಗಗಳನ್ನು ಆಕ್ರಮಿಸುತ್ತಲೇ ಇದೆ. ಯಾವುದೇ ಅಂತರ್ ರಾಷ್ಟ್ರೀಯ ನೀತಿ ನಿಯಮಗಳನ್ನು ಗೌರವಿಸದ ಇಸ್ರೇಲ್ ಈ ಪಿಡುಗಿನ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಆಕ್ರಮಿತ ಜೋರ್ಡನ್ ಕಣಿವೆ ಹಾಗೂ ಪಶ್ಚಿಮ ದಂಡೆಯ ಭಾಗಗಳನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದೆ.

ಫೆಲೆಸ್ತೀನಿಯರು ಇಂದು ಎದುರಿಸುತ್ತಿರುವ ಸವಾಲು ಇಡೀ ಮನುಕುಲದ ಪಾಲಿನ ಪರೀಕ್ಷೆಯಾಗಿದೆ. ಝಿಯೋನಿಸ್ಟರು ಎಂದಿಗೂ ವಿಶ್ವಾಸಾರ್ಹ ಮಿತ್ರರು ಹಾಗೂ ಭಾಗೀದಾರರು ಆಗಲಾರರು ಎಂಬುದನ್ನು ಜಗತ್ತು ಅಂತಿಮವಾಗಿ ಅರಿತುಕೊಳ್ಳಲಿದೆ ಮತ್ತು ಎಲ್ಲ ದೇಶಗಳು ಫೆಲೆಸ್ತೀನಿಯರ ಕಾನೂನು ಬದ್ಧ ಹಕ್ಕುಗಳಿಗಾಗಿನ ಅವರ ಹೋರಾಟದಲ್ಲಿ ಅವರನ್ನು ಬೆಂಬಲಿಸುತ್ತವೆ ಎಂಬ ಭರವಸೆ ನಮಗಿದೆ. ಫೆಲೆಸ್ತೀನ್ ಮೇಲೆ ಫೆಲೆಸ್ತೀನಿಯರ ಹಕ್ಕುಗಳನ್ನು ಮತ್ತು ಐತಿಹಾಸಿಕ ವಾಸ್ತವಗಳನ್ನು ನಿರ್ಲಕ್ಷಿಸುವ ಯಾವುದೇ ಒಪ್ಪಂದಗಳು ಸಫಲವಾಗುವುದಿಲ್ಲ ಎಂದು ಚೆಗೇನಿ ಅಭಿಪ್ರಾಯ ಪಟ್ಟಿದ್ದಾರೆ.

ಯಾರೂ ನಿಜವಾದ ಶಾಂತಿ ಒಪ್ಪಂದವನ್ನು ವಿರೋಧಿಸುವುದಿಲ್ಲ. ಆದರೆ ಆ ಒಪ್ಪಂದ ಆ ಪ್ರದೇಶದ ಹಾಗೂ ವಿಶ್ವದ ಸ್ಥಿರತೆಗೆ ಪೂರಕವಾಗುವಂತಿರಬೇಕು. ಝಿಯೋನಿಸ್ಟರಿಂದ ಫೆಲೆಸ್ತೀನಿಯರಿಗೆ ನ್ಯಾಯ ನಿರಾಕರಣೆ, ಅವರ ಮನೆಗಳ ನಾಶ, ಲಕ್ಷಾಂತರ ಫೆಲೆಸ್ತೀನಿಯರ ಮಾರಣ ಹೋಮ ಇವುಗಳು ಆ ಸಮಸ್ಯೆಯ ಮೂಲವಾಗಿವೆ. ಹಾಗಾಗಿ ಶಾಂತಿ ಒಪ್ಪಂದ ಅನ್ಯಾಯ ಹಾಗೂ ಮಾನವ ಹಕ್ಕು ಉಲ್ಲಂಘನೆಗಳ ಬುನಾದಿಯಲ್ಲಿ ಅಸಾಧ್ಯ. ಯಾವಾಗ ದ್ವೇಷ, ಆಕ್ರಮಣ, ಹಿಂಸೆ ಹಾಗೂ ನರಮೇಧ ಇಲ್ಲವೋ ಆಗ ಮಾತ್ರ ನಿಜವಾದ ಶಾಂತಿ ಸ್ಥಾಪನೆ ಸಾಧ್ಯ. ಸಾಮ್ರಾಜ್ಯಶಾಹಿಗಳ ಆಕ್ರಮಣ ಹಾಗೂ ಜನಾಂಗೀಯವಾದಕ್ಕೆ ಪ್ರತಿರೋಧ ಒಡ್ಡುವುದನ್ನು ಅಂತರ್ ರಾಷ್ಟ್ರೀಯ ಕಾನೂನುಗಳೇ ಎತ್ತಿ ಹಿಡಿಯುತ್ತವೆ. ಆದರೆ ಇಸ್ರೇಲಿ ಆಡಳಿತ ತನ್ನ ಕುತಂತ್ರದ ಮೂಲಕ ಈ ಪ್ರತಿರೋಧವನ್ನೇ ಉಗ್ರಗಾಮಿ, ಭಯೋತ್ಪಾದನೆ ಎಂಬಂತೆ ಜನಾಭಿಪ್ರಾಯ ರೂಪಿಸಿ ತನ್ನ ಅಪರಾಧಗಳನ್ನು ಮುಚ್ಚಿ ಹಾಕುತ್ತಿದೆ.

ಈ ಮೂಲಕ ಫೆಲೆಸ್ತೀನಿ ಪ್ರದೇಶಗಳ ಮೇಲೆ ತನ್ನ ಅಕ್ರಮ ಸ್ವಾಧೀನವನ್ನು ಇನ್ನಷ್ಟು ಬಲಪಡಿಸಲು ಹಾಗೂ ಇಡೀ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಇದಕ್ಕೆ ಅಮೆರಿಕ ಹಾಗೂ ಅದರ ಯುರೋಪಿಯನ್ ಮಿತ್ರರು ನೀಡುತ್ತಿರುವ ಏಕ ಪಕ್ಷೀಯ ಹಾಗೂ ಸಂಪೂರ್ಣ ಬೆಂಬಲದಿಂದಾಗಿ ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರುಬಲಿಯಾಗಿದ್ದಾರೆ. 4,400 ಕ್ಕೂ ಹೆಚ್ಚು ಫೆಲೆಸ್ತೀನಿಯರು ಜೈಲು ಸೇರಿದ್ದಾರೆ ಹಾಗೂ 72 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಫೆಲೆಸ್ತೀನಿಯರ ಹಕ್ಕು ಮರಳಿಸುವ ಹಾಗೂ ವಿಶ್ವಾದ್ಯಂತ ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿ ದುಡಿಯುವಂತೆ ಪ್ರೇರೇಪಿಸುವಲ್ಲಿ ಖುದ್ಸ್ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಡಾ. ಅಲಿ ಚೆಗೇನಿ ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News