ಈ ಪ್ರಕರಣದಲ್ಲಾದರೂ ಸ್ವಘೋಷಿತ 'ರಾಜಾಹುಲಿ'ಯಂತೆ ನಡೆದುಕೊಳ್ಳಿ: ಬಿಎಸ್‌ವೈಯನ್ನು ಕುಟುಕಿದ ಸಿದ್ದರಾಮಯ್ಯ

Update: 2021-05-07 09:22 GMT

ಬೆಂಗಳೂರು, ಮೇ 7: ಏನಿದು ಯಡಿಯೂರಪ್ಪ ಅವರೇ? ರಾಜ್ಯದಲ್ಲಿರುವುದು ಚುನಾಯಿತ ಸರ್ಕಾರವೇ? ಇಲ್ಲವೇ ನಿಮ್ಮ ಶಾಸಕರು,‌ ಸಂಸದರು ಮತ್ತು ಅವರ ಬೆಂಬಲಿಗರ ಗೂಂಡಾ ರಾಜ್ಯವೇ? ಬೊಮ್ಮನಹಳ್ಳಿ ವಾರ್ ರೂಮ್‌ನಲ್ಲಿ ದುಂಡಾವರ್ತನೆ ನಡೆಸಿದ್ದ ಶಾಸಕರು ಮತ್ತು ಬೆಂಬಲಿಗರನ್ನು ತಕ್ಷಣ ಬಂಧಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕೊರೋನ ವಾರಿಯರ್ಸ್ ಮೇಲಿನ ದೌರ್ಜನ್ಯಕ್ಕೆ ಆರು ತಿಂಗಳಿಂದ ಏಳು ವರ್ಷ ಜೈಲು, ಒಂದು‌ ಲಕ್ಷ ರೂ.ಗಳಿಂದ ಏಳು ಲಕ್ಷ ರೂ ವರೆಗೆ ದಂಡ ವಿಧಿಸಬಹುದು. ಇದೇ ಕಾಯ್ದೆಯಡಿ ಶಾಸಕ ಸತೀಶ್ ರೆಡ್ಡಿ ಮತ್ತು ಬೆಂಬಲಿಗರನ್ನು ತಕ್ಷಣ ಬಂಧಿಸಿ ಎಂದು ತಿಳಿಸಿದ್ದಾರೆ.

ಬಿಜೆಪಿ ಸಂಸದರು/ಶಾಸಕರ ಬೆಡ್ ಬ್ಲಾಕ್ ದಂಧೆ ಕಾರ್ಯಚರಣೆಯ ಉದ್ದೇಶ ಬಿಬಿಎಂಪಿ ಭ್ರಷ್ಟಚಾರ ಬಯಲುಗೊಳಿಸುವುದಲ್ಲ, ಅದರ ದುರುದ್ದೇಶ ತಮ್ಮ ಸ್ವಜನಪಕ್ಷಪಾತ ಮತ್ತು ಗೂಂಡಾಗಿರಿಯನ್ನು ಮುಚ್ಚಿಹಾಕುವುದು ಎನ್ನುವುದು ಜಗಜ್ಜಾಹೀರಾಗಿದೆ. ಮೊದಲು ಇವರನ್ನು ಬಂಧಿಸಿ. ಬಿಜೆಪಿ ಶಾಸಕರು,‌ ಸಂಸದರು ಮತ್ತು ಬೆಂಬಲಿಗರ ದೌರ್ಜನ್ಯ ಮತ್ತು ಬೆದರಿಕೆ ಬಿಬಿಎಂಪಿ ದಕ್ಷಿಣ ವಲಯದ ವಾರ್ ರೂಮ್‌ಗೆ ಸೀಮಿತವಾದುದಲ್ಲ, ಇದು ನಗರದಾದ್ಯಂತ ನಡೆದಿದೆ. ನಗರದಲ್ಲಿ‌ ಕೊರೋನ ಉಲ್ಭಣಿಸಲು ಇವರ ಈ ದುಂಡಾವರ್ತನೆ ಕೂಡಾ ಕಾರಣ. ಈ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.

ಬೆಡ್ ಬ್ಲಾಕ್ ದಂದೆ ವಿರುದ್ಧದ‌ ತೇಜಸ್ವಿ ಸೂರ್ಯ ಮತ್ತು ಶಾಸಕರ ನಕಲಿ ಕಾರ್ಯಾಚರಣೆ ಪರೋಕ್ಷವಾಗಿ‌ ನಿಮ್ಮ ವಿರುದ್ಧದ ಕಾರ್ಯಚಾರಣೆಯೂ ಹೌದು. ಯಡಿಯೂರಪ್ಪ ಅವರೇ, ಈ ಒಂದು ಪ್ರಕರಣದಲ್ಲಿಯಾದರೂ ಸ್ವಘೋಷಿತ 'ರಾಜಾಹುಲಿ'ಯಂತೆ ನಡೆದುಕೊಳ್ಳಿ, 'ರಾಜಾ ಇಲಿ' ಆಗಬೇಡಿ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕೋಮು ಘರ್ಷಣೆಗೆ ಪ್ರಚೋದನೆ ಕೂಡಾ ತೇಜಸ್ವಿ ಸೂರ್ಯ ಮತ್ತು‌ ಸಂಗಡಿಗರ ಕಾರ್ಯಾಚರಣೆಯ ದುರುದ್ದೇಶ ಎನ್ನುವುದು ಬಯಲಾಗಿದೆ. ಐಪಿಸಿ 153ಎ ಅನ್ವಯ ಈ ದುಷ್ಟಕೂಟದ ವಿರುದ್ಧ ಮೊಕದ್ದಮೆ ದಾಖಲಿಸಲು ಯಡಿಯೂರಪ್ಪ ಪೊಲೀಸರಿಗೆ ಮುಕ್ತ ಹಸ್ತ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News