ತೇಜಸ್ವಿ ಸೂರ್ಯರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ: ಬಿಜೆಪಿ ಶಾಸಕ ಉದಯ್ ಗರುಡಾಚಾರ್

Update: 2021-05-07 13:12 GMT
File Photo

ಬೆಂಗಳೂರು, ಮೇ 7: ಕೋವಿಡ್ ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಯಾವ ಹಿನ್ನೆಲೆಯಲ್ಲಿ ಒಂದು ಕೋಮಿನ ಸದಸ್ಯರ ಹೆಸರು ಉಲ್ಲೇಖಿಸಿದರೋ ನನಗೆ ಗೊತ್ತಿಲ್ಲ. ಸಂಸದರು ಕರೆದಿದ್ದಕ್ಕೆ ನಾನು ಅವರೊಂದಿಗೆ ಹೋಗಿದ್ದೆ. ಚಿಕ್ಕ ವಯಸ್ಸಿನಿಂದ ನಾನು ತೇಜಸ್ವಿಯನ್ನು ನೋಡಿದ್ದೇನೆ. ಸಂಸದರಿಗೆ ತಪ್ಪು ಮಾಹಿತಿ ಬಂದಿರಬಹುದು ಎಂದು ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ಸಮುದಾಯವನ್ನು ಪರಿಗಣಿಸಿ ಅವರು ಮಾತನಾಡಿಲ್ಲ. ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ನಾನು ಪ್ರತಿನಿಧಿಸುವ ಚಿಕ್ಕಪೇಟೆ ಕ್ಷೇತ್ರದಲ್ಲಿ 60 ಸಾವಿರ ಮುಸ್ಲಿಮರಿದ್ದಾರೆ, 32 ಮಸೀದಿಗಳಿವೆ. ನಮ್ಮ ಕ್ಷೇತ್ರದಲ್ಲಿ ಹಿಂದೂ-ಮುಸ್ಲಿಮ್ ಎಂಬ ಭೇದ-ಭಾವ ಇಲ್ಲ. ಈ ಬಗ್ಗೆ ಅನಂತರ ತೇಜಸ್ವಿ ಜೊತೆ ಮಾತಾಡಿದ್ದೇನೆ. ಒಂದು ಕೋಮಿನ ವಿರುದ್ಧ ಬೇಕೆಂದು ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ನನಗೆ ಸ್ನೇಹಿತರು. ಅವರಿಗೆ ತುಂಬಾ ಜನ ಮುಸ್ಲಿಮ್ ಗೆಳೆಯರಿದ್ದಾರೆ. ಐಎಎಸ್ ಅಧಿಕಾರಿಗಳನ್ನು ನಾವು ಗೌರವಿಸುತ್ತೇವೆ. ಸತೀಶ್ ರೆಡ್ಡಿ ಅವರ ಬೆಂಬಲಿಗರು ಗಲಾಟೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನನಗೆ ಸರಿಯಾಗಿ ಮಾಹಿತಿ ಇಲ್ಲ. ಅದನ್ನು ನಾನು ನೋಡಿಲ್ಲ. ಸತೀಶ್ ರೆಡ್ಡಿ ಅಂತಹವರಲ್ಲ ಎಂದು ಉದಯ್ ಗರುಡಾಚಾರ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News