ಭಾರತ ವಿದೇಶ ಮಾಧ್ಯಮಗಳ ಮುಂದೆ ಬೆತ್ತಲಾಗಿದೆ: ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್

Update: 2021-05-07 15:41 GMT

ಮೈಸೂರು,ಮೇ.7: ಪುತ್ರ ವಾತ್ಸಲ್ಯ ಬಿಡಿ. ಶಕುನಿಗಳನು, ಮೆಚ್ಚಿಸುವವರನ್ನು ನಂಬಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಧುರನ ಸ್ಥಾನದಲ್ಲಿ ನಿಂತು ಬುದ್ಧಿ ಹೇಳಿದ್ದೇನೆಯೇ ಹೊರತು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು. 

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾನಾಡಿದ ಅವರು, ವಿಧಾನಸೌಧ/ ಶಕ್ತಿಕೇಂದ್ರದಲ್ಲಿನ ಪೀಠದ ಜವಾಬ್ದಾರಿಯನ್ನು ಎಚ್ಚರಿಸಿದ್ದೇನೆಯೇ ಹೊರತು ವೈಯುಕ್ತಿಕ ಟೀಕೆ ಮಾಡಿಲ್ಲ. ಸಚಿವ ಸೋಮಶೇಖರ್ ಗೆ ಇದೆಲ್ಲ ಗೊತ್ತಿಲ್ವಾ. ಎಂಎಲ್‍ಸಿ ಮಾಡಿದ್ದೇ ದೊಡ್ಡದು ಎನ್ನುವುದಾದರೆ ಸರಕಾರ ತಂದವರು ಯಾರು. ನನ್ನ ತ್ಯಾಗ ಏಕೆ ನೆನಪಿಸಲ್ಲ ಎಂದು ಪ್ರಶ್ನಿಸಿದರು.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಒಬ್ಬ ನೆಲಗಳ್ಳ. ಸರ್ಕಾರಿ ಜಾಗಕ್ಕೆ ಬೇಲಿ ಹಾಕುವ ಭೂಗಳ್ಳ. ನನ್ನ ರಾಜಕೀಯ ಚರಿತ್ರೆ ಏನು, ನೆಲಗಳ್ಳನ ಚರಿತ್ರೆ ಏನು ಎಂದು ಗರಂ ಆದರು.

ಚಾಮರಾಜನಗರ ದುರಂತ ಒಂದು ಕೊಲೆ. ಇಬ್ಬರು ಡಿಸಿಗಳಿಗೆ ಶಟ್‍ಅಪ್ ಅಂತಾ ಹೇಳುವ ಧೈರ್ಯ ಸಿಎಂಗೆ ಇಲ್ಲ. ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಹೋಗಿದೆ ಎಂದರು.

ಸಿಎಂಗೆ ಖಂಡಾತುಂಡವಾಗಿ ಅಧಿಕಾರ ನಡೆಸಿ ಎಂದು ಹೇಳಿದ್ದೇ ತಪ್ಪಾ? ಮಠಮಾನ್ಯಗಳಿಗೆ ನೂರಾರು ಕೋಟಿ ರೂ. ಕೊಟ್ಟಿದ್ದಾರೆ. ಈಗ ಜನರಿಗೆ ಅನ್ನ ನೀರು ಕೊಡಿ ಅಂತ ಯಾಕೆ ಕೇಳುತ್ತಿಲ್ಲ. ಸಿಎಂ ಸರ್ಕಾರದ ಖಜಾನೆಯಿಂದ ಧರ್ಮಪೀಠಗಳಿಗೆ ಮಾತ್ರ ಹಣ ಕೊಟ್ಟಿದ್ದು ಎಂದು ಟೀಕಿಸಿದರು.

ಭಾರತ ಇಂದು ವಿದೇಶದ ಮಾಧ್ಯಮಗಳ ಮುಂದೆ ಬೆತ್ತಲಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿವೆ. ಬೆಳಗಾವಿ ಶಾಸಕರ ಒತ್ತಾಯದಂತೆ ಸುವರ್ಣಸೌಧವನ್ನು ಕೋವಿಡ್ ಕೇರ್ ಗೆ ಬಳಸಿಕೊಳ್ಳಿ. ಸುವರ್ಣ ಸೌಧದಲ್ಲಿ ಎರಡು ಸಾವಿರ ಬೆಡ್ ಹಾಕಬಹುದು. ತಾತ್ಕಾಲಿಕ ಬೆಡ್‍ಗಳ ವ್ಯವಸ್ಥೆ ಮಾಡಿ, ಅಗತ್ಯ ಬಿದ್ದರೆ ಮುಂದುವರಿಸಿ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಯಾರ ನಿಯಂತ್ರಣದಲ್ಲಿಲ್ಲ. ಸರ್ಕಾರಕ್ಕೆ ಗರ ಬಡಿದಿದೆಯೇ ? ಆಂಧ್ರ, ತೆಲಂಗಾಣ ಮಾದರಿಯಲ್ಲಿ ಕೋವಿಡ್ ಚಿಕಿತ್ಸೆ ಕೊಡಿ. ಸರ್ಕಾರವೇ ಚಿಕಿತ್ಸಾ ದರ ನಿಗದಿ ಮಾಡಲಿ. ಸಿಎಂ ಧೈರ್ಯವಾಗಿ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಎಚ್.ವಿಶ್ವನಾಥ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News