ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್: ಸಚಿವ ಆರ್.ಅಶೋಕ್ ಎಚ್ಚರಿಕೆ

Update: 2021-05-07 15:42 GMT

ಬೆಂಗಳೂರು, ಮೇ 7: ಇನ್ನೂ ಎರಡು ದಿನಗಳೊಳಗೆ ಖಾಸಗಿ ಆಸ್ಪತ್ರೆಗಳು ಸರಕಾರದ ಆದೇಶದಂತೆ ಕೋವಿಡ್ ಸೋಂಕಿತರಿಗೆ ಅಗತ್ಯದಷ್ಟು ಬೆಡ್ ಕೊಡದೇ ಇದ್ದರೆ ಒಪಿಡಿ ಬಂದ್ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಖಾಸಗಿ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಕ್ಕೂ ಹೆಚ್ಚಿನ ಹಾಸಿಗೆಯುಳ್ಳ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿದ್ದೇವೆ. ಆಸ್ಪತ್ರೆಗಳು ಕಣ್ಣಾಮುಚ್ಚಾಲೆ ಆಟ ಬಿಟ್ಟು ಸರಕಾರಕ್ಕೆ ನೀಡಬೇಕಾದ ಬೆಡ್ ನೀಡಬೇಕು. ಇಲ್ಲವಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸೆ ವ್ಯವಸ್ಥೆಯನ್ನು ಬಂದ್ ಮಾಡಿಸಬೇಕಾಗುತ್ತದೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಬಿಬಿಎಂಪಿಯಿಂದ ಕೋವಿಡ್ ಸೋಂಕಿತರಿಗೆ ಬಿಯೂ ನಂಬರ್ ನೀಡಿದರೂ ಅವರನ್ನು ಇನ್ನು ಬೆಡ್ ಖಾಲಿ ಆಗಿಲ್ಲ ಎಂದು ಹೊರಗೆ ನಿಲ್ಲಿಸುವ ಕೆಲಸ ಮಾಡಲಾಗುತ್ತಿದೆ. ಅವರನ್ನು ಆಸ್ಪತ್ರೆಯ ಒಳಗೆ ಇರಿಸಬೇಕು. ತಪಾಸಣೆಗಾಗಿ ಯಾವುದೇ ಆಸ್ಪತ್ರೆಗಳಯ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡಬಾರದು ಎಂದ ಅವರು, ಬೆಡ್ ಹಂಚಿಕೆ ವಿಷಯವಾಗಿ ಸರಕಾರ ಉಸ್ತುವಾರಿಗಳನ್ನು ನೇಮಿಸಲಾಗಿದೆ ಎಂದರು.

ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರಿಗೆ ಬೆಂಗಳೂರಿನ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆ ಬೆಡ್ ಹಂಚಿಕೆ ಉಸ್ತುವಾರಿ ನೀಡಲಾಗಿದೆ. ತುಷಾರ್ ಗಿರಿನಾಥ್ ಅವರನ್ನು ರಾಜ್ಯ ವ್ಯಾಪಿ ಬೆಡ್ ಹಂಚಿಕೆ ಜವಾಬ್ದಾರಿ ವಹಿಸಲಾಗಿದೆ. ಅತ್ಯಂತ ಪಾರದರ್ಶಕವಾಗಿ ಬೆಡ್ ಹಂಚಿಕೆ ಮಾಡಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.

ಚಿಕಿತ್ಸೆ ಮುಂದುವರಿಸಲು ಅನುಮತಿ ಅಗತ್ಯ: ಚಿಕಿತ್ಸೆ ಮುಗಿದಿದ್ದರೂ ಅವರನ್ನು ಮುಂದುವರಿಸುತ್ತಿರುವ ಕೆಲಸವನ್ನು ಖಾಸಗಿ ಆಸ್ಪತ್ರೆಗಳು ಮಾಡುತ್ತಿವೆ. 10 ದಿನ ಕಳೆದ ಬಳಿಕ ಚಿಕಿತ್ಸೆ ಮುಂದುವರೆಸಬೇಕಾದರೆ ಬಿಬಿಎಂಪಿಯ ಅನುಮತಿ ಪಡೆಯಬೇಕು. ನಾವು ಬದಲಾವಣೆ ತರಲು ಹೊರಟ್ಟಿದ್ದೇವೆ. ಹಾಸಿಗೆ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಕೆಲ ಆಸ್ಪತ್ರೆಗಳು ಮೃತ ವ್ಯಕ್ತಿಗಳ ಹೆಸರಿನಲ್ಲಿ ಬೆಡ್ ಮುಂದುವರಿಸುತ್ತಿರುವವರ ಬಗ್ಗೆ ಪರಿಶೀಲನೆ ನಡೆಸಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಂತಹ ಆಸ್ಪತ್ರೆಗಳ ಹೆಸರನ್ನು ನಾಳೆ ಬಹಿರಂಗಪಡಿಸಲಾಗುವುದು ಎಂದು ಅಶೋಕ್ ಹೇಳಿದರು.

ರಾಜ್ಯದಲ್ಲಿ 18ರಿಂದ 45 ವರ್ಷದೊಳಗಿನವರಿಗೆ ಕೋವಿಡ್ ವ್ಯಾಕ್ಸಿನ್ ವಿಳಂಬಕ್ಕೆ ಕೇಂದ್ರ ಸರಕಾರವನ್ನು ದೂರುವುದು ಸರಿಯಲ್ಲ. ಲಸಿಕೆ ಉತ್ಪಾದನೆ ಮಾಡುವ ಕಂಪೆನಿಗಳು ಲಸಿಕೆ ಪೂರೈಕೆಗೆ ವಿಳಂಬ ಮಾಡುತ್ತಿವೆ. ಒಂದು ವಾರದಲ್ಲಿ 12ಲಕ್ಷ ಡೋಸ್ ಪಡೆದುಕೊಂಡಿದ್ದಾರೆ. ಎರಡನೆ ಡೋಸ್ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್ ವಿತರಣೆ ಸಂಬಂಧ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಸ್ವಾಗತಿಸುತ್ತೇನೆ. ಪ್ರಸ್ತುತ ಆಮ್ಲಜನಕ ತುಂಬಾ ಅಗತ್ಯ. ಈ ಬಗ್ಗೆ ನಾವು ಕೇಂದ್ರ ಸರಕಾರಕ್ಕೂ ಮನವಿ ಮಾಡುತ್ತೇವೆ'

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News