ಕೋಮುದ್ವೇಷ ಹರಡುವ ಹೇಳಿಕೆ ಆರೋಪ: ತೇಜಸ್ವಿ ಸೂರ್ಯ ವಿರುದ್ಧ ಮೊಕದ್ದಮೆ ದಾಖಲಿಸಲು ಕಾಂಗ್ರೆಸ್ ಪಟ್ಟು

Update: 2021-05-07 15:48 GMT

ಬೆಂಗಳೂರು, ಮೇ 7: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ಒಂದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಕೋಮುದ್ವೇಷ ಹರಡುವ ಪ್ರಯತ್ನ ಹೇಳಿಕೆ ಆರೋಪ ಸಂಬಂಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಮೂವರು ಶಾಸಕರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ಸಲ್ಲಿಸಿದರು.

ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದ ನಿಯೋಗ, ಪಾಲಿಕೆ ವ್ಯಾಪ್ತಿಯ ಬೆಡ್ ಬ್ಲಾಕಿಂಗ್ ಹಗರಣ ವಿಚಾರವಾಗಿ ಒಂದು ಕೋಮಿನವರ ಮೇಲೆ ಆಪಾದನೆ ಹೊರಿಸಿದ ತೇಜಸ್ವಿ ಸೂರ್ಯ ಹಾಗೂ ಶಾಸಕರ ಮೇಲೆ ಮೊಕದ್ದಮೆ ದಾಖಲಿಸಿ ಎಂದು ಒತ್ತಾಯ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಲೀಂ ಅಹ್ಮದ್, ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕರಾದ ಸತೀಶ್ ರೆಡ್ಡಿ, ಎಲ್.ಎ.ರವಿಸುಬ್ರಹ್ಮಣ್ಯ ಹಾಗೂ ಉದಯ್ ಗರುಡಾಚಾರ್ ಅವರು ವಾರ್ ರೂಂನಲ್ಲಿ ಕೋಮುಭಾವನೆ ಕೆರಳುವಂತೆ ಹೇಳಿಕೆ ನೀಡಿದ್ದು, ಈ ಸಂಬಂಧ ಕಟ್ಟುನಿಟ್ಟಿನ  ಕ್ರಮ ಕೈಗೊಳ್ಳಬೇಕು ಎಂದರು.

ನೂರಾರು ಉದ್ಯೋಗಿಗಳಿದ್ದರೂ, ಮುಸ್ಲಿಮ್ ಸಮುದಾಯದ ಕೆಲವು ಸದಸ್ಯರು ಹೆಸರುಗಳನ್ನ ಮಾತ್ರ ಉಲ್ಲೇಖಿಸಿ ಕೆಲಸದಿಂದ ತೆಗೆದಿದ್ದಾರೆ. ಅಲ್ಲದೆ, ಮದರಸಾ ಮಾಡಲು ಹೊರಟಿದ್ದೀರಾ ಎಂದು ಹೇಳುವ ಮೂಲಕ ಕೋಮು ಭಾವನೆಗಳನ್ನ ಕೆರಳಿಸಿದ್ದಾರೆ. ಯಾವುದೇ ಹಗರಣ ನಡೆಯಲಿ, ಕೋವಿಡ್ ಸಂದರ್ಭದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕೆ ವಿನಃ ಕೋಮು ಭಾವನಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಝಮೀರ್ ಅಹ್ಮದ್‍ಖಾನ್, ನಝೀರ್ ಅಹ್ಮದ್, ಶಾಸಕರಾದ ಎನ್.ಎ.ಹಾರೀಸ್, ರಿಝ್ವಾನ್ ಆರ್ಶದ್, ಬಿಬಿಎಂಪಿ ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಪ್ರಮುಖರಿದ್ದರು.

ವಿವಿಧೆಡೆ ದೂರುಗಳು ಸಲ್ಲಿಕೆ

ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ಒಂದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಕೋಮುದ್ವೇಷ ಹರಡುವ ಪ್ರಯತ್ನ ಹೇಳಿಕೆ ಆರೋಪ ಸಂಬಂಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಬಿಜೆಪಿ ಶಾಸಕರ ವಿರುದ್ಧ ವಿವಿಧೆಡೆ ದೂರುಗಳು ಸಲ್ಲಿಕೆಯಾಗಿವೆ.

ಶುಕ್ರವಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ ನ್ಯಾಯವಾದಿಗಳಾದ ಎಸ್.ಬಾಲನ್, ವರದರಾಜೇಂದ್ರ ನೇತೃತ್ವದ ನಿಯೋಗ, ಸಂಸದ ತೇಜಸ್ವಿ ಸೂರ್ಯ, ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಸತೀಶ್ ರೆಡ್ಡಿ, ಎಲ್.ಎ.ರವಿಸುಬ್ರಹ್ಮಣ್ಯ ಹಾಗೂ ಉದಯ್ ಗರುಡಾಚಾರ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆಗ್ರಹಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಬಾಲನ್, ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ ಎಂದು ಹೇಳಿಕೊಂಡು ಸಂಸದರು ಹಾಗೂ ಶಾಸಕರು ವಾರ್ ರೂಂಗೆ ಹೋಗಿ ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ 17 ಜನರ ಮುಸ್ಲಿಮ್ ಹೆಸರು ಹೇಳಿ ಒಂದು ಕೋಮಿನ ವಿರುದ್ಧ ಗುರಿಯಾಗಿಸಿದ್ದಾರೆ ಎಂದರು.

ವಾರ್ ರೂಂಗೆ ತೆರಳುವ ಅಧಿಕಾರ ಯಾರಿಗೂ ಇಲ್ಲ. ಹೀಗಿದ್ದರೂ ಸಂಸದರು, ಶಾಸಕರು ವಾರ್ ರೂಂಗೆ ಹೋಗಿದ್ದು, ಗಲಾಟೆ ಮಾಡಿದ್ದು ಅಪರಾಧ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸುವಂತೆ ಹೇಳಿದರು.

ಡಿಜಿಪಿಗೆ ದೂರು

ಸಂಸದ ತೇಜಸ್ವಿ ಸೂರ್ಯ ಹಾಗೂ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಮತ್ತು ಬೆಂಬಲಿಗರ ವಿರುದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ದೂರು ನೀಡಿದೆ.

ನಗರದ ನೃಪತುಂಗ ರಸ್ತೆಯಲ್ಲಿರುವ ಡಿಜಿ ಮತ್ತು ಐಜಿ ಕಚೇರಿಗೆ ದೂರು ನೀಡಿದ ಬಳಿಕ ಕಾಂಗ್ರೆಸ್ ಮುಖಂಡ ಮನೋಹರ್, ಬೊಮ್ಮನಹಳ್ಳಿ ವಾರ್ ರೂಂ ಬಳಿ ಶಾಸಕ ಸತೀಶ್ ರೆಡ್ಡಿ ಬೆಂಬಲಿಗರಿಂದ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದ್ದು, ಈ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News