ಹಾಸಿಗೆ ಇಲ್ಲ, ಆಮ್ಲಜನಕವಿಲ್ಲ, ಸಾವಿಗೀಡಾದವರಿಗೆ ಸ್ಮಶಾನದಲ್ಲಿ ಜಾಗವೂ ಇಲ್ಲ..!

Update: 2021-05-07 19:30 GMT

ಕೊರೋನ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಾಸಿಗೆಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ನೂರಾರು ಸೋಂಕಿತರು ಆಸ್ಪತ್ರೆಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಸಿಗೆಗಳ ಸಿಗದೇ ಆಸ್ಪತ್ರೆಗಳ ಮುಂದೆ, ವಾಹನಗಳಲ್ಲಿ ಪ್ರಾಣ ಬಿಡುತ್ತಿದ್ದಾರೆ. ಕೊರೋನ ಬರುವುದಕ್ಕಿಂತ ಮುಂಚಿತವಾಗಿಯೂ ದೇಶದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಹಾಸಿಗೆಗಳು ಸಂಖ್ಯೆ ಸಂಪೂರ್ಣವಾಗಿ ಕಡಿಮೆ ಇರುವುದು ಬಹಳ ವರ್ಷಗಳಿಂದ ಗೊತ್ತಿದ್ದರೂ ಸರಕಾರಗಳು ಸರಿಯಾದ ಕ್ರಮವನ್ನು ಕೈಗೊಂಡಿಲ್ಲ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಸರಕಾರ ಹೇಳಿದಷ್ಟು ಕೊರೋನ ರೋಗಿಗಳಿಗೆ ಹಾಸಿಗೆಗಳನ್ನು ಕೊಟ್ಟಂತೆ ಮಾಡಿ, ಕೊಡುತ್ತಿಲ!್ಲ.

ಸರಕಾರಕ್ಕೆ ಇವುಗಳ ಮೇಲೆ ನಿಯಂತ್ರಣವೇ ಇಲ್ಲ. ಇನ್ನು ಕೆಲವು ಖಾಸಗಿ ಆಸ್ಪತ್ರೆಗಳು ಹಾಸಿಗೆ ನೀಡಲು ದುಬಾರಿ ಹಣವನ್ನು ರೋಗಿಗಳಿಂದ ಕೇಳುತ್ತಿವೆ. ಪ್ರತಿದಿನ ರೋಗಿಗಳ ಸಂಬಂಧಿಕರು ರೋಗಿಗಳನ್ನು ಕೂರಿಸಿಕೊಂಡು ವಾಹನಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆ ಹುಡುಕುವುದೇ ಕೆಲಸವಾಗಿದೆ. ಅಲೆದಾಟದಲ್ಲಿ ನೂರಾರು ರೋಗಿಗಳು ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂದಿಗೂ ಸಹ ಕರ್ನಾಟಕದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕೇವಲ 384 ಹಾಸಿಗೆಗಳು ಲಭ್ಯವಿವೆ ಎನ್ನುವ ವರದಿ ಇದೆ. ಇದು ಎಲ್ಲಿಗೂ ಸಾಲದು. ಇನ್ನು ಕೆಲವು ಜನರು ಸಾವಿನ ಸೂತಕದಲ್ಲೂ ಲಾಭ ಮಾಡಿಕೊಳ್ಳುವುದರ ಕಡೆ ನೋಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಮತ್ತು ಸರಕಾರಿ ಅಧಿಕಾರಿಗಳು ರೋಗಿಗಳೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಜನಪ್ರತಿನಿಧಿಗಳೇ ಭ್ರಷ್ಟರೊಂದಿಗೆ ಕೈಜೋಡಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.

ರಾಜ್ಯದ ಸರಕಾರಿ ಆಸ್ಪತ್ರೆಗಳ ಸ್ಥಿತಿಯಂತೂ ಗಂಭೀರವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಸರಕಾರಿ ಆಸ್ಪತ್ರೆಗಳು ನಿಜವಾಗಿಯೂ ಚಿಂತಾಜನಕ ಸ್ಥಿತಿಯಲ್ಲಿವೆ. ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯವಿಲ್ಲ. ಬೇಕಾದಷ್ಟು ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಯೂ ಕೊರತೆ. ಆಧುನಿಕ ವೈದ್ಯಕೀಯ ಉಪಕರಣಗಳು ಇಲ್ಲವೇ ಇಲ್ಲ. ಕೆಲವೆಡೆ ಉಪಕರಣಗಳು ಇದ್ದರೂ ತಜ್ಞರು ಲಭ್ಯವಿಲ್ಲ. ಕೆಲವೆಡೆ ತಜ್ಞರಿದ್ದರೂ ಉಪಕರಣಗಳ ಲಭ್ಯತೆ ಇಲ್ಲ. ದೇಶದಲ್ಲಿ ಕೆಲವೇ ಕೆಲವು ಸರಕಾರಿ ಆಸ್ಪತ್ರೆಗಳು ಮಾತ್ರ ತಮ್ಮದೇ ಆದ ಆಮ್ಲಜನಕ ಪೂರೈಕೆ ಘಟಕಗಳನ್ನು ಹೊಂದಿವೆ. ಹೀಗಾಗಿ ಪ್ರತಿಬಾರಿಯೂ ರೋಗಿಗಳು ಖಾಸಗಿಯವರನ್ನು ಆಶ್ರಯಿಸಬೇಕಾಗಿದೆ. ಇದು ಒಂದು ರೀತಿಯ ವಿಷವರ್ತುಲ ಎಂದರೂ ತಪ್ಪಲ್ಲ.

 ಇಷ್ಟೆಲ್ಲದರ ಮಧ್ಯೆ ಈಗ ಕೊರೋನ ಸೋಂಕಿತರು ಆಕ್ಸಿಜನ್ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಆಮ್ಲಜನಕ ಪೂರೈಸುವ ಸೌಲಭ್ಯ ಇರುವ ಆಸ್ಪತ್ರೆಗಳ ಸಂಖ್ಯೆ ದೇಶದಲ್ಲಿ ಅತ್ಯಂತ ಕಡಿಮೆ ಇದೆ. ಆಮ್ಲಜನಕದ ಕೊರತೆಯಿಂದ ಪ್ರತಿ ಹತ್ತು ನಿಮಿಷಕ್ಕೆ ಒಬ್ಬ ರೋಗಿ ಸಾಯುತ್ತಿರುವುದನ್ನು ಆಸ್ಪತ್ರೆಗಳು ದೃಢಪಡಿಸಿವೆ. ಕೊರೋನ ಮನುಷ್ಯನ ಶ್ವಾಸಕೋಶದ ಮೇಲೆ ದಾಳಿ ಮಾಡುವುದರಿಂದ ಮೂರನೇ ಹಂತದ ರೋಗಿಗಳಿಗೆ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಬೇಕಾಗುತ್ತದೆ. ಆದರೆ ದೇಶದಲ್ಲಿ ಕೆಲ ದಿನಗಳಿಂದ ಆಕ್ಸಿಜನ್ ಕೊರತೆ ಕಾಡುತ್ತಿದ್ದು, ಇದರಿಂದ ಸಾವಿರಾರು ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ದೇಶದಲ್ಲಿ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಆಮ್ಲಜನಕ ತಯಾರಿಕೆ ನಡೆಯುತ್ತಿಲ್ಲ. ಕಳೆದ ಬಾರಿಯೇ ತಜ್ಞರು ಈ ಕುರಿತು ಸರಕಾರವನ್ನು ಎಚ್ಚರಿಸಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಬೇರೆ ದೇಶಗಳಿಗೆ ಆಮ್ಲಜನಕ ಸಾಗಾಟ ನಡೆಯುತ್ತಲೇ ಇತ್ತು. ಈಗ ನಿದ್ದೆಯಿಂದ ಎದ್ದಿರುವ ಭಾರತವು ಸಿಂಗಾಪುರ, ಜರ್ಮನಿ, ಸೌದಿ ಅರೇಬಿಯಾದಿಂದ ದ್ರವೀಕೃತ ಅಮ್ಲಜನಕವನ್ನು ತರಿಸಿಕೊಳ್ಳಲು ಹೆಣಗಾಡುತ್ತಿದೆ.

ಸರಕಾರಗಳಿಗೆ ಸರಿಯಾದ ದೂರದೃಷ್ಟಿ ಇಲ್ಲದಿದ್ದರೆ ಇಂತಹ ಪರಿಸ್ಥಿತಿಗಳಿಗೆ ಬೆಲೆ ತೆರುವುದು ಜನಸಾಮಾನ್ಯರು. ಇಂದು ಕೇವಲ 33 ಆಕ್ಸಿಜನ್ ತಯಾರಿಸುವ ಸ್ಥಾವರಗಳನ್ನು ದೇಶಾದ್ಯಂತ ಸ್ಥಾಪಿಸಲಾಗಿದೆ. ಅಲ್ಲದೆ ವೈದ್ಯಕೀಯ ಸಂಬಂಧಿತ ಆಮ್ಲಜನಕ ತಯಾರಿಕಾ ಕಂಪೆನಿಗಳು ದೇಶದಲ್ಲಿ ಬಹಳ ಕಡಿಮೆ ಮತ್ತು ವೈದ್ಯಕೀಯ ಆಮ್ಲಜನಕ ತಯಾರಿಕೆ ಹಾಗೂ ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಎಲ್ಲದಕ್ಕಿಂತ ಮುಖ್ಯ ಸಮಸ್ಯೆಯೆಂದರೆ ವೈದ್ಯಕೀಯ ಆಮ್ಲಜನಕವನ್ನು ಧಿಡೀರ್ ಎಂದು ಉತ್ಪಾದಿಸಲು ಸಾಧ್ಯವಿಲ್ಲ ಅದು ತುಂಬಾ ಸಂಕೀರ್ಣ ಪ್ರಕ್ರಿಯೆ. ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ ಎರಡು ವೈದ್ಯಕೀಯ ಆಮ್ಲಜನಕ ತಯಾರಿಕ ಘಟಕಗಳನ್ನು ಹೊಂದಿರಬೇಕು ಎಂದು ಆರೋಗ್ಯ ಸಂಬಂಧಿತ ಅಧ್ಯಯನ ಆಯೋಗಗಳು ಸರಕಾರಕ್ಕೆ ಶಿಫಾರಸು ಮಾಡಿವೆ. ಆದರೆ ಅದು ಇನ್ನೂ ಕೈಗೂಡಿಲ್ಲ. ಕೆಲವು ಜಿಲ್ಲೆಗಳಲ್ಲಿ ಆಮ್ಲಜನಕ ತಯಾರಿಕಾ ಘಟಕಗಳು ಇದ್ದರೂ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ರೋಗಿಯ ಸಂಬಂಧಿಕರು ಆಕ್ಸಿಜನ್ ಸಿಲಿಂಡರ್‌ಗಳನ್ನು ಲೂಟಿ ಮಾಡುತ್ತಿದ್ದಾರೆ.

ಈ ನಡುವೆ ಸಾಮಾಜಿಕ ಮಾಧ್ಯಮಗಳಿಂದ ಸುಳ್ಳು ಸುದ್ದಿಗಳನ್ನು ನಂಬಿರುವ ಜನರು ತಮ್ಮ ಮನೆಗಳಲ್ಲಿ ಆಮ್ಲಜನಕದ ಸಿಲಿಂಡರ್‌ಗಳನ್ನು ಸಂಗ್ರಹಿಸಲು ಶುರುಮಾಡಿದ್ದಾರೆ. ಇದು ಮಾರುಕಟ್ಟೆಯಲ್ಲಿ ಕೃತಕ ಅಭಾವಕ್ಕೆ ಕಾರಣವಾಗುತ್ತಿದೆ. ಕಾಳಸಂತೆಯಲ್ಲಿ ಆಮ್ಲಜನಕ ಮಾರಾಟವನ್ನು ತಡೆಯಲು ಸರಕಾರ ಗಂಭೀರ ಪ್ರಯತ್ನವನ್ನೇ ಮಾಡಲಿಲ್ಲ. ಈ ಕಾರಣದಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಬೇಕಾದ ಆಮ್ಲಜನಕ ಸಿಗುತ್ತಿಲ್ಲ. ಅಧಿಕಾರಿಗಳ ನಡುವಿನ ಸಮಸ್ಯೆಯಿಂದಾಗಿ ಕರ್ನಾಟಕದ ಚಾಮರಾಜನಗರದಲ್ಲಿ 24 ಅಮೂಲ್ಯ ಜೀವಗಳು ಆಮ್ಲಜನಕದ ಕೊರತೆಯಿಂದ ಆರಿ ಹೋದವು. ಇತ್ತೀಚಿನ ವರದಿಗಳ ಪ್ರಕಾರ ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ಆಮ್ಲಜನಕವನ್ನು ತಯಾರಿಸುವ ದುಸ್ಸಾಹಸವನ್ನು ಮಾಡುತ್ತಿದ್ದಾರೆ. ಇದು ಇನ್ನಷ್ಟು ಆಪತ್ತನ್ನು ತಂದೊಡ್ಡಬಹುದು. ಈ ಎಲ್ಲಾ ಸಮಸ್ಯೆಗಳನ್ನು ನಿಯಂತ್ರಿಸಬೇಕಾದ ಕೇಂದ್ರ ಸರಕಾರ ಆಮ್ಲಜನಕ ವಿಚಾರದಲ್ಲಿ ಸಂಪೂರ್ಣವಾಗಿ ಎಡವಿದಂತೆ ಕಾಣುತ್ತದೆ. ಕೆಲವು ವರದಿಗಳ ಪ್ರಕಾರ ಕೇಂದ್ರ ಸರಕಾರವು ತನಗೆ ಬೇಕಾದ ರಾಜ್ಯಗಳಿಗೆ ಮಾತ್ರ ಆಮ್ಲಜನಕದ ಪೂರೈಕೆ ನಿರಂತರವಾಗಿ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಯಾರು ಕೇಂದ್ರ ಮಟ್ಟದಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾರೋ ಅವರಿಗೆ ಮಾತ್ರ ಆಮ್ಲಜನಕ ನಿರಂತರವಾಗಿ ಸಿಗುತ್ತಿದೆ. ಕರ್ನಾಟಕದ ಸಂಸದರು ಧ್ವನಿ ಕಳೆದುಕೊಂಡಿದ್ದಾರೆ. ಯಾರೂ ದಿಲ್ಲಿಯ ನಾಯಕರೊಂದಿಗೆ ಮಾತನಾಡಲು ಧೈರ್ಯ ವಹಿಸದಿರುವುದರಿಂದ ಕರ್ನಾಟಕವು ಮಲತಾಯಿ ಧೋರಣೆಯನ್ನು ಅನುಭವಿಸಬೇಕಾಗಿ ಬಂದಿದೆ. ಸರಕಾರವು ಲಸಿಕೆಯ ವಿಚಾರದಲ್ಲಿ ಬಹಳಷ್ಟು ತಪ್ಪುಗಳನ್ನು ಮಾಡಿದೆ. ಕೊರೋನ ಲಸಿಕೆ ಪಡೆಯುವ ಆರಂಭಿಕ ಹಂತದಲ್ಲಿ ಭಯದಿಂದಾಗಿ ಲಸಿಕೆಯನ್ನು ಪಡೆಯಲು ದೇಶವಾಸಿಗಳು ಹಿಂದೆ ಮುಂದೆ ನೋಡಿದ್ದು ನಿಜ. ಕೊರೋನ ವಾರಿಯರ್‌ಗಳಾದ ವೈದ್ಯರು, ದಾದಿಯರೇ ಲಸಿಕೆ ಪಡೆಯಲು ಹಿಂದೇಟು ಹಾಕಿದಾಗ ಜನಸಾಮಾನ್ಯರು ಹೆದರುವುದು ಸಹಜವೇ. ಇನ್ನು ಕೆಲವು ರಾಜ್ಯಗಳಲ್ಲಿ ಅವೈಜ್ಞಾನಿಕ ನಿರ್ವಹಣೆಯಿಂದ ಕೋಟಿಗಟ್ಟಲೆ ಲಸಿಕೆಗಳು ಹಾಳಾದವು. ಮುಂದಿನ ದಿನಗಳಿಗೆ ಲಸಿಕೆ ಉಳಿಸಿಕೊಳ್ಳುವ ಮುಂದಾಲೋಚನೆಯಿಲ್ಲದೆ ಆಫ್ರಿಕಾದ ಕೆಲವು ದೇಶಗಳಿಗೆ ಲಸಿಕೆಯನ್ನು ಕಳಿಸುವ ವ್ಯವಸ್ಥೆ ಮಾಡಲಾಯಿತು. ಇದರಿಂದ ಈಗ ಲಸಿಕೆಯನ್ನು ಜರೂರಾಗಿ ಮತ್ತು ಬೇಕಾದಷ್ಟು ಸಂಖ್ಯೆಯಲ್ಲಿ ಉತ್ಪಾದಿಸಲು ಕಂಪೆನಿಗಳ ಬಳಿ ಕಚ್ಚಾವಸ್ತುಗಳ ದಾಸ್ತಾನು ಇಲ್ಲ. ಹಾಗಾಗಿ 18ರ ಮೇಲಿನ ವಯಸ್ಸಿನವರ ಲಸಿಕಾ ಕಾರ್ಯಕ್ರಮ ನಿಂತುಹೋಗಿದೆ. ಇದು ಹೀಗೆ ಮುಂದುವರಿದರೆ ಮೊದಲ ಹಂತದಲ್ಲಿ ಲಸಿಕೆ ಪಡೆದವರಿಗೆ ಎರಡನೇ ಹಂತದ ಲಸಿಕೆ ಸಿಗುವ ಅನುಮಾನ ಹೆಚ್ಚಾಗುತ್ತಿದೆ. ಒಂದೊಮ್ಮೆ ಇದು ನಿಜವಾದರೆ ಲಸಿಕೆ ಅಭಿಯಾನ ಸಂಪೂರ್ಣ ವೈಫಲ್ಯ ಕಾಣುತ್ತದೆ.

ಈ ಮಧ್ಯೆ ರೆಮ್‌ಡೆಸಿವಿರ್ ಎಂಬ ತುಂಬಾ ಅವಶ್ಯಕತೆಯ ಚುಚ್ಚುಮದ್ದನ್ನು ಸಕಾಲದಲ್ಲಿ ಪೂರೈಸಲು ಸಾಧ್ಯವಾಗಲಿಲ್ಲ. ಈ ಚುಚ್ಚುಮದ್ದಿನ ಕೊರತೆ ಸಂಬಂಧಪಟ್ಟ ಅಧಿಕಾರಿಗಳ ಅರಿವಿಗೆ ಬರಲಿಲ್ಲ. ಆಸ್ಪತ್ರೆಯ ವೈದ್ಯರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈ ಚುಚ್ಚುಮದ್ದಿನ ಕೊರತೆಯ ಕಾರಣದಿಂದಲೇ ಹಲವಾರು ಕೊರೋನ ರೋಗಿಗಳು ಪ್ರಾಣ ಕಳೆದುಕೊಂಡರೆಂದು ವೈದ್ಯಕೀಯ ಮೂಲಗಳು ಹೇಳುತ್ತಿವೆ. ಈ ಮಧ್ಯೆ ವೈದ್ಯಕೀಯ ಜ್ಞಾನದ ಅರಿವಿಲ್ಲದ ಮಂತ್ರಿಗಳೂ ತಮ್ಮ ಮನಸ್ಸಿಗೆ ಬಂದಂತೆ ಔಷಧಿಗಳ ಬಗ್ಗೆ ಹೇಳಿಕೆ ಕೊಡತೊಡಗಿದರು. ಇದು ಇನ್ನಷ್ಟು ಗೊಂದಲವನ್ನು ಉಂಟು ಮಾಡಿತು. ಸದ್ಯ ಈ ಔಷಧಿ ಈಗ ಕಾಳಸಂತೆಯಲ್ಲಿ ಒಂದಕ್ಕೆ ಹತ್ತರಷ್ಟು ಬೆಲೆಯಲ್ಲಿ ಮಾರಾಟವಾಗುತ್ತಿದೆ ಎಂಬ ವರದಿಯಿದೆ. ಇದನ್ನೆಲ್ಲ ಸರಿಮಾಡಲು ಕೊನೆಗೆ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಾಯಿತು.

ಆಸ್ಪತ್ರೆಗಳು ಹೇಗೆ ತುಂಬಿ ತುಳುಕುತ್ತಿವೆಯೋ ರಾಜ್ಯದ ಚಿತಾಗಾರಗಳು ಸಹ ತುಂಬಿತುಳುಕುತ್ತಿರುವ ಚಿತ್ರಣ ಕಣ್ಮುಂದೆ ಬರುತ್ತಿದೆ. ಮೆಟ್ರೋಪಾಲಿಟನ್ ಸಿಟಿ ಎಂಬ ಹಣೆಪಟ್ಟಿ ಹೊತ್ತಿರುವ ರಾಜ್ಯದ ರಾಜಧಾನಿ ಬೆಂಗಳೂರಿನ ಚಿತಾಗಾರಗಳ ಸ್ಥಿತಿ ಅತ್ಯಂತ ಭೀಕರವಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಬೇರೆ ಜಿಲ್ಲೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಈಗಾಗಲೇ ಅಭಿವೃದ್ಧಿಯಿಂದ ಅತ್ಯಂತ ದೂರವುಳಿದಿರುವ ಉತ್ತರಕರ್ನಾಟಕದ ಜಿಲ್ಲೆಗಳ ಚಿತಾಗಾರಗಳ ಸ್ಥಿತಿಯಂತೂ ಹೇಳಲು ಆಸಾಧ್ಯವಾದ ಸ್ಥಿತಿಯಲ್ಲಿವೆ ಎನ್ನುವ ಅಂಶಗಳು ದಿನನಿತ್ಯ ಮಾಧ್ಯಮಗಳಲ್ಲಿ ಬರುತ್ತಿದೆ. ಹೊಸ ಹೊಸ ಬಡಾವಣೆಗಳನ್ನು ನಿರ್ಮಿಸುವಾಗ ಸ್ಥಳೀಯ ಸರಕಾರಗಳು ಪಾರ್ಕ್, ಈಜುಕೊಳ, ಮಾಲ್‌ಗಳಿಗೆ ಸ್ಥಳ ನೀಡುವಂತೆ ಚಿತಾಗಾರಗಳಿಗೂ ಸ್ಥಳ ನೀಡಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದಿರುವಂತೆ ಕಾಣುತ್ತಿದೆ. ಕೊರೋನ 2ನೇ ಅಲೆಗೆ ಪ್ರಾಣಗಳು ಗಾಳಿಪಟದಂತೆ ಹಾರಿ ಹೋಗುತ್ತಿರುವ ಸಂದರ್ಭದಲ್ಲಿ ಶವಗಳನ್ನು ವಿಲೇವಾರಿ ಮಾಡುವುದಕ್ಕೆ ರಾಜ್ಯದ ಚಿತಾಗಾರಗಳು ಹರಸಾಹಸ ಪಡುತ್ತಿವೆ.

ಬೆಂಗಳೂರಿನ ಏಳು ಚಿತಾಗಾರಗಳಲ್ಲಿ ಕಿಲೋಮೀಟರ್‌ಗಟ್ಟಲೆ ಶವಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳು ಕಾಯುತ್ತಿವೆ. ಇದನ್ನು ನೋಡಿದರೆ ಎಂತಹವರಿಗಾದರೂ ಎದೆ ಬಿರಿಯುತ್ತದೆ. ಶವಗಳ ಸಂಬಂಧಿಗಳ ಸ್ಥಿತಿಯನ್ನು ನೆನೆದರೆ ಅಂತಹ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ ಅನ್ನಿಸುತ್ತದೆ. ಮೃತರ ಅಂತ್ಯಕಾಲದಲ್ಲಿ ನೆಮ್ಮದಿಯಾಗಿ ಅಂತ್ಯಸಂಸ್ಕಾರ ಮಾಡಲೂ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಚಿತಾಗಾರಗಳು ದಿನದ 24 ಗಂಟೆಯೂ ಹೆಣಗಳನ್ನು ಸುಡುವುದರಲ್ಲಿ ಮಗ್ನವಾಗಿವೆ. ಆದರೂ ಒಂದೇ ದಿನದಲ್ಲಿ ಎಲ್ಲಾ ಹೆಣಗಳನ್ನು ಸುಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಚಿತಾಗಾರಗಳಿಗೆ ಸರಿಯಾದ ಮೂಲಭೂತ ಸೌಕರ್ಯಗಳೇ ಇಲ್ಲ. ಬೆಂಗಳೂರಿನ ಪರಿಸ್ಥಿತಿ ಈ ರೀತಿಯಾದರೆ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಶವಗಳನ್ನು ಸುಡಲು ಸೌದೆ ಬಳಸಲಾಗುತ್ತಿದೆ. ಆಧುನಿಕ ವ್ಯವಸ್ಥೆ ಇರುವ ಚಿತಾಗಾರಗಳಲ್ಲಿ ಗ್ಯಾಸ್‌ನ್ನು ಬಳಸುವುದರಿಂದ ಶವಗಳನ್ನು ಸರಿಸುಮಾರು ಎರಡು ಗಂಟೆಯಲ್ಲಿ ಸಂಪೂರ್ಣ ಸುಟ್ಟು ಹಾಕಬಹುದು. ಬೆಂಗಳೂರು ವ್ಯಾಪ್ತಿಯ ಏಳು ಚಿತಾಗಾರಗಳಲ್ಲಿ ಎರಡು ಚಿತಾಗಾರಗಳು ಈಗಾಗಲೇ ರಿಪೇರಿಯಲ್ಲಿ ಇವೆ ಎನ್ನುವ ಸುದ್ದಿ ಸಹ ಇದೆ. ಈ ಕಾರಣದಿಂದ ಚಿತಾಗಾರಗಳ ಮುಂದೆ ಶವಗಳನ್ನು ಇಟ್ಟುಕೊಂಡು ಸಂಬಂಧಿಕರು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.

ಒಟ್ಟಿನಲ್ಲಿ ಕೊರೋನ ಎರಡನೇ ಅಲೆಯು ದೇಶವಾಸಿಗಳನ್ನು ಹಿಂಡಿಹಿಪ್ಪೆಯಾಗಿಸುತ್ತಿದೆ. ಎರಡನೇ ಅಲೆಯನ್ನು ಎದುರಿಸುವುದಕ್ಕೆ ಯಾವ ಸಿದ್ಧತೆಯೂ ನಡೆದಿಲ್ಲದ ಪರಿಣಾಮ ಇಂತಹ ಭೀಕರ ಸ್ಥಿತಿ ದೇಶವಾಸಿಗಳಿಗೆ ಬಂದೊದಗಿದೆ. ಇದೆಲ್ಲವನ್ನು ಗಮನಿಸಿದರೆ ದೇಶದ ಮತ್ತು ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಗೆ ಕೂಡಲೇ ಸಂಪೂರ್ಣ ಕಾಯಕಲ್ಪ ಕೊಡುವುದು ಅನಿವಾರ್ಯ.

Writer - ಡಾ. ಡಿ. ಸಿ ನಂಜುಂಡ

contributor

Editor - ಡಾ. ಡಿ. ಸಿ ನಂಜುಂಡ

contributor

Similar News