ಜಿಂದಾಲ್ ಕಂಪೆನಿಗೆ ಅಗ್ಗದ ದರಕ್ಕೆ ಭೂಮಿ ನೀಡಿದ ಸರಕಾರದ ಕ್ರಮ ಸರಿಯಲ್ಲ; ಬಿಜೆಪಿ ಶಾಸಕರ ಆಕ್ಷೇಪ

Update: 2021-05-08 11:05 GMT
ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಮೇ 8: ಬಳ್ಳಾರಿಯ ಜಿಂದಾಲ್ ಉಕ್ಕು ಕಂಪೆನಿಗೆ ಅಗ್ಗದ ದರಕ್ಕೆ ಭೂಮಿ ನೀಡಿದ ಸರಕಾರದ ಕ್ರಮ ಸರಿಯಲ್ಲ. ಈ ಹಿಂದೆ ಮೈತ್ರಿ ಸರಕಾರದ ವಿರುದ್ಧ ಇದೇ ವಿಚಾರಕ್ಕೆ ಪ್ರತಿಭಟನೆ ನಡೆಸಿ ಇದೀಗ ನಮ್ಮ ಸರಕಾರವೂ ಅದೇ ತಪ್ಪು ಮಾಡಿರುವುದು ಎಷ್ಟು ಸರಿ ಎಂದು ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಪೂರ್ಣಿಮಾ ಶ್ರೀನಿವಾಸ, ಉದಯ್ ಗರುಡಾಚಾರ್, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಜಿಂದಾಲ್‍ಗೆ 3,667 ಎಕರೆ ಭೂಮಿ ಶುದ್ಧ ಕ್ರಯಪತ್ರ ಮಾಡಿ ಕೊಟ್ಟ ನಿರ್ಧಾರ ಮರು ಪರಿಶೀಲಿಸಬೇಕು. ಸಾವಿರಾರು ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ಕೇವಲ 60 ರಿಂದ 70 ಕೋಟಿ ರೂ.ಗೆ ಶುದ್ಧ ಕ್ರಯಪತ್ರ ಮಾಡಿಕೊಟ್ಡಿದ್ದು ಸರಿಯಲ್ಲ. ಮೈತ್ರಿ ಸರಕಾರದಲ್ಲೂ ಇದೇ ನಿರ್ಧಾರ ಕೈಗೊಂಡಾಗ ನಿಮ್ಮ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ ನಡೆಸಿದ್ದೆವು. ನೀವೇ ಮೈತ್ರಿ ಸರಕಾರದ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ್ದಿರಿ. ಇದೀಗ ನಮ್ಮ ಸರಕಾರದಲ್ಲಿ ಅದೇ ತಪ್ಪು ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂದಾಲ್‍ಗೆ ಭೂಮಿ ಕೊಟ್ಟ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬಹುದಿತ್ತು. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಥವಾ ಬಜೆಟ್ ಅಧಿವೇಶನ ಸಂದರ್ಭದಲ್ಲಾದರೂ ಚರ್ಚಿಸಬಹುದಿತ್ತು. ಮತ್ತೊಮ್ಮೆ ಸಂಪುಟ ಸಭೆಯಲ್ಲಿ ಕೈಗೊಂಡ ಈ ನಿರ್ಧಾರದ ಮರುಪರಿಶೀಲನೆ ಅಗತ್ಯವಿದೆ. ಪಕ್ಷದ ವೇದಿಕೆಯಲ್ಲಿ ಚರ್ಚೆಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಅವರುಗಳು ಮನವಿ ಮಾಡಿದ್ದಾರೆ.

ಸರಕಾರ ಈ ನಿರ್ಧಾರ ತೆಗೆದುಕೊಂಡ ನಂತರ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರಕಾರ ಈ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಇತ್ತೇ? ಪ್ರತಿ ಎಕರೆಗೆ ಎಷ್ಟು ಲಕ್ಷ ರೂ.ನಿಗದಿ ಮಾಡಿ ಮಾರಾಟ ಪ್ರಕ್ರಿಯೆ ನಡೆಸಲಾಗಿದೆ? ಇದೆಲ್ಲವೂ ಅನುಮಾನ ಮೂಡಿಸುವ ವಿಚಾರವಲ್ಲವೇ? ಮೈತ್ರಿ ಸರಕಾರದಲ್ಲಿ ನಡೆದಂತೆ ಈಗಲೂ ಕಿಕ್‍ಬ್ಯಾಕ್ ವ್ಯವಹಾರ ನಡೆದಿದೆಯೇ? ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಜಿಂದಾಲ್‍ಗೆ ಭೂಮಿ ನೀಡುವ ನಿರ್ಧಾರದ ಬಗ್ಗೆ ಪುನರ್ ಪರಿಶೀಲನೆ ನಡೆಸುವುದು ಅತ್ಯಂತ ಸೂಕ್ತ ಹಾಗೂ ಅನಿವಾರ್ಯ. ಹೀಗಾಗಿ ಹಿಂದಿನ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಈ ನಿರ್ಧಾರಕ್ಕೆ ಘಟನೋತ್ತರ ಅನುಮೋದನೆ ನೀಡದೇ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕೈ ಬಿಡುವುದು ಸೂಕ್ತ ಎಂದು ಒತ್ತಾಯಿಸುತ್ತೇವೆ. ಜತೆಗೆ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮತ್ತೊಮ್ಮೆ ಚರ್ಚೆ ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕೆಂದು ನಾಲ್ವರು ಶಾಸಕರು ಪತ್ರ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News