ಐಎಂಎ, ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಭೆ

Update: 2021-05-08 12:19 GMT

ರಾಯಚೂರು, ಮೇ 8: ಸಂಕಷ್ಟದ ಸಂದರ್ಭದಲ್ಲಿ ಕೊರೋನ ಚಿಕಿತ್ಸೆಗೆ ಸರಕಾರ ನಿಗದಿ ಪಡಿಸಿದ ದರವನ್ನೆ ಖಾಸಗಿ ಆಸ್ಪತ್ರೆಗಳು ಪಡೆಯುವ ಮೂಲಕ ಜನರು ಹಾಗೂ ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕರೆ ನೀಡಿದರು.

ಶನಿವಾರ ನಗರದ ಐಎಂಎ ಸಭಾಂಗಣದಲ್ಲಿ ಖಾಸಗಿ ವೈದ್ಯರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯಕ್ಕೆ ವೈದ್ಯಕೀಯ ತುರ್ತಿನ ಸಂಕಷ್ಟದ ಕಾಲ ಎದುರಾಗಿದೆ, ಇಂತಹ ಸನ್ನಿವೇಶದಲ್ಲಿ ಜನ ಸಾಮಾನ್ಯರ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ಕೋವಿಡ್-19ಗೆ ಚಿಕಿತ್ಸೆ ನೀಡಲು ದರ ನಿಗದಿ ಪಡಿಸಿದೆ, ಕೆಲವು ಖಾಸಗಿ ಆಸ್ಪತ್ರೆಗಳು ಅದೇ ದರವನ್ನೇ ಪಡೆಯುತ್ತಿವೆ, ಉತ್ತಮ ಚಿಕಿತ್ಸೆ ನಿಡುತ್ತಿವೆ ಎಂದರು.

ಆದರೆ ಕೆಲವು ಖಾಸಗಿ ಆಸ್ಪತ್ರೆಗಳು ಈ ಸಂದಿಗ್ಧ ಪರಿಸ್ಥಿತಿಯ ಲಾಭ ಪಡೆಯುತ್ತಿವೆ ಎನ್ನುವುದು ಕೇಳಿಬಂದಿದ್ದು, ಕೊರೋನ ಸೋಂಕಿಗೆ ಚಿಕಿತ್ಸೆ ನೀಡುವ ಎಲ್ಲ ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿ ಪಡಿಸಿದ ಮೊತ್ತವನ್ನೆ ಪಡೆಯಬೇಕು, ಜನ ಜೀವ ಉಳಿಸುವ ವೈದ್ಯರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದಾರೆ, ಅದಕ್ಕೆ ಚ್ಯುತಿ ಬರಬಾರದು ಎಂದು ಲಕ್ಷ್ಮಣ ಸವದಿ ಹೇಳಿದರು.

ಕೊರೋನ ನಿಯಂತ್ರಣಕ್ಕೆ ಇಂಜೆಕ್ಷನ್, ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುವುದು. ರಾತ್ರಿ 12 ಗಂಟೆಯಾದರೂ ಖಾಸಗಿ ಆಸ್ಪತ್ರೆಗಳ ಅಗತ್ಯತೆಗಳನ್ನು ಈಡೇರಿಸಲು ಸರಕಾರ ಹಾಗೂ ಜಿಲ್ಲಾಡಳಿತ ಸಿದ್ದವಿದೆ, ಈ ವಿಷಮ ಸನ್ನಿವೇಶದಲ್ಲಿ ಯುದ್ದೋಪಾದಿಯಲ್ಲಿ ರೋಗಿಗಳನ್ನು ಉಪಚರಿಸಿ, ರೋಗದಿಂದ ಗುಣಪಡಿಸಬೇಕು ಎಂದು ಅವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಈ ಸಂದರ್ಭದಲ್ಲಿ ಜನರ ವಿಶ್ವಾಸ ಹಾಗೂ ಪ್ರೀತಿ ಗಳಿಸಬೇಕು, ಸರಕಾರ ನಿಗಧಿ ಪಡಿಸಿದ ದರದಂತೆ ರೋಗಿಗಳಿಂದ ಚಿಕಿತ್ಸೆಯ ವೆಚ್ಚ ಪಡೆಯಬೇಕು, ಮಾನವೀಯತೆಯೂ ಮುಖ್ಯ, ದಯಾಳುಗಳಾದ ವೈದ್ಯರು ಯಾರೇ ಬಡವರು ಬಂದರೂ ಅವರಿಗೆ ಚಿಕಿತ್ಸೆ ನೀಡಿದಲ್ಲೀ, ಜೀವನಪರ್ಯಂತ ಸ್ಮರಿಸುವರು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನ ವೈದ್ಯರು, ರೋಗಿಗಳಿಗೆ ಉಪಚರಿಸುವ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ, ಅವರು ರಾಜ್ಯದ ಜನರ ಅಭಿನಂದನೆಗೆ ಪಾತ್ರರಾಗಿದ್ದಾರೆ, ಜಿಲ್ಲೆಯ ವೈದ್ಯರು ಕೂಡ ಅದೇ ಸಾಲಿಗೆ ಸೇರಬೇಕು ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಮುಂದಿನ ಒಂದು ತಿಂಗಳು ಕಷ್ಟದಾಯಕವಾಗಲಿದ್ದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಹಕರಿಸಬೇಕು, ಅದರಲ್ಲಿ ಯಶಸ್ವಿಯಾಗೋಣ, ಶ್ರದ್ದೆಯಿಂದ ಸೇವೆ ಮಾಡುತ್ತಿದ್ದೀರಿ, ಇನ್ನೂ ಹೆಚ್ಚಿನ ಸೇವೆ ಮಾಡಿ. ಸಹಕಾರ ನೀಡಿ. ಜನರಿಗೆ ಸಕಾಲ ಚಿಕಿತ್ಸೆ ನೀಡಿ ಮಾದರಿಯಾಗುವಂತೆ ಅವರು ಮನವಿ ಮಾಡಿದರು.

ಕೊರೋನ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕಾಗಿದೆ. ಬೇರೆ ಜಿಲ್ಲೆಗಳನ್ನು ಗಣನೆಗೆ ಪರಿಗಣಿಸಿದರೆ, ಇಲ್ಲಿನ ವೈದ್ಯರ ಸೇವೆ ಶ್ಲಾಘನೀಯವಾಗಿದೆ, ಬೇರೆ ಜಿಲ್ಲೆಗಳಲ್ಲಿಯೂ ಇಲ್ಲಿನ ಉತ್ತಮ ಚಿಕಿತ್ಸೆಯ ಕುರಿತು ಮಾತುಗಳು ಕೇಳಿಬಂದಿದ್ದು, ಆ ಬಗ್ಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹಾಸಿಗೆಗಳ ಕೊರತೆಯಿಲ್ಲ. ಬೇಡಿಕೆ ಹೆಚ್ಚಾದರೂ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ದವಿದೆ. ರೆಮ್‍ಡೆಸಿವಿರ್ ಚುಚ್ಚುಮದ್ದಿನ ಕೊರತೆಯಿಲ್ಲ. ನಿತ್ಯವೂ ಪೂರೈಕೆಯಾಗುತ್ತಿದೆ. ಯಾರಿಗೆ ಅವಶ್ಯಕತೆಯಿದೆ ಎಂಬದನ್ನು ವೈದ್ಯರೇ ನಿರ್ಧರಿಸಿ ಬಳಕೆ ಮಾಡಿಕೊಳ್ಳಬೇಕು ಎಂದರು.

ಸರಕಾರ ಸಿಟಿ ಸ್ಕ್ಯಾನ್‍ಗೆ-1500 ರೂ.ಗಳನ್ನು, ಎಕ್ಸ್ರೇಗೆ-150 ರೂ.ಗಳನ್ನು ನಿಗದಿ ಪಡಿಸಿದೆ, ಅದೇ ದರವನ್ನೇ ಪಡೆಯಬೇಕು, ಆ ಮೂಲಕ ಜನರಿಗೆ ಸಹಕಾರ ನೀಡಿ, ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಕೇವಲ ನಾಲ್ಕು ಆಸ್ಪತ್ರೆಗಳ ಸಹಕಾರ ಪಡೆಯಲಾಗಿತ್ತು, ಇದೀಗ ಯಾರು ಬೇಡಿಕೆ ಸಲ್ಲಿಸಿದರು ಅನುಮತಿ ನೀಡಲಾಗುತ್ತದೆ. ಯಾವುದೇ ಸಮಸ್ಯೆಗಳಾಗದಂತೆ ಎಚ್ಚರ ವಹಿಸಬೇಕು, ಯಾವುದೇ ಕೊರತೆಗಳಿದ್ದರೂ ಜಿಲ್ಲಾಡಳಿತದಿಂದ ಚರ್ಚಿಸಬೇಕು, ಎಲ್ಲ ರೀತಿಯ ನೆರವು ನೀಡಲು ಜಿಲ್ಲಾಡಳಿತ ಸಿದ್ದವಿದೆ ಎಂದು ಅವರು ಹೇಳಿದರು.

ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್, ಮುಂದಿನ ಎರಡು ದಿನಕ್ಕೆ ಆಗುವ 24 ಟನ್ ಆಕ್ಸಿಜಿನ್ ನಮ್ಮಲ್ಲಿ ಲಭ್ಯವಿದೆ. ಆಕ್ಸಿಜಿನ್, ಬೆಡ್, ರೆಮ್ಮಡಿಸಿವಿರ್ ಕೊರತೆಯಿಲ್ಲ. ಜಿಲ್ಲೆಯಲ್ಲಿ 26 ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡಲು ಮುಂದೇ ಬಂದಿರುವುದು ಶ್ಲಾಘನೀಯ ಎಂದರು.

ರಾಯಚೂರು ನಗರವೊಂದರಲ್ಲಿಯೇ 17 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಇಷ್ಟು ಸಂಖ್ಯೆಯ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಮುಂದೆ ಬಂದಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಐಎಂಎ ಅಧ್ಯಕ್ಷ ಡಾ.ರಾಮಪ್ಪ, ಡಾ. ನಾಗರಾಜ ಬಾಲ್ಕಿ ಹಾಗೂ ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News