ಜಿಂದಾಲ್ ಆಕ್ಸಿಜನ್ ಘಟಕಗಳ ಉತ್ಪಾದನೆ ಪರಿಶೀಲಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

Update: 2021-05-08 12:24 GMT

ಬಳ್ಳಾರಿ, ಮೇ 8: ಜಿಂದಾಲ್ ಕಾರ್ಖಾನೆ ಆವರಣದಲ್ಲಿರುವ ವಿವಿಧ ಘಟಕಗಳಲ್ಲಿ ಆಕ್ಸಿಜನ್ ಉತ್ಪಾದನೆ ಹಾಗೂ ಟ್ಯಾಂಕರ್‍ಗಳಿಗೆ ಆಕ್ಸಿಜನ್ ಭರ್ತಿ ಮಾಡುವ ಪ್ರಕಿಯೆಯನ್ನು ಪರಿಶೀಲಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಆಕ್ಸಿಜನ್ ಉತ್ಪಾದನೆಯ ಮಾಹಿತಿಯನ್ನು ಪಡೆದುಕೊಂಡು, ಕೈಗಾರಿಕೆಗೆ ಬಳಸಲಾಗುತ್ತಿರುವ ಆಕ್ಸಿಜನ್ ಪ್ರಮಾಣ ಕಡಿತಗೊಳಿಸಿ ವೈದ್ಯಕೀಯ ಕ್ಷೇತ್ರಕ್ಕೆ ಒದಗಿಸುವಂತೆ ಸೂಚನೆ ನೀಡಿದರು.

ಶನಿವಾರ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಜೊತೆಗೆ ಜಿಂದಾಲ್ ಕಾರ್ಖಾನೆಗೆ ಭೇಟಿ ನೀಡಿದ ಅವರು, ಈಗ ಉತ್ಪಾದಿಸಲಾಗುತ್ತಿರುವ ಆಕ್ಸಿಜನ್ ಪ್ರಮಾಣವನ್ನು 1 ಸಾವಿರದಿಂದ 1200 ಮೆಟ್ರಿಕ್ ಟನ್‍ವರೆಗೆ ಹೆಚ್ಚಿಸಲು ಜಿಂದಾಲ್ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್‍ಗಿಂತ ಮುಂಚೆ ನಿತ್ಯ 350 ರಿಂದ 400 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಿ ಕೈಗಾರಿಕೆ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.  ಕೋವಿಡ್ ಹಿನ್ನಲೆಯಲ್ಲಿ ಹಂತಹಂತವಾಗಿ ಆಕ್ಸಿಜನ್ ಉತ್ಪಾದನಾ ಪ್ರಮಾಣ ಹೆಚ್ಚಿಸಿ ಸದ್ಯ 900 ಟನ್‍ವರೆಗೆ ನಿತ್ಯ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ ಎಂದು ಜಿಂದಾಲ್ ಅಧಿಕಾರಿ ಪ್ರಭು ಮಾಹಿತಿ ನೀಡಿದರು.

ರಾಜ್ಯದಲ್ಲಿರುವ ಈಗಿನ ಸೊಂಕಿನ ಲಕ್ಷಣಗಳನ್ನು ಗಮನಿಸಿದರೇ ನಿತ್ಯ 1700 ಮೆಟ್ರಿಕ್ ಟನ್ ಆಕ್ಸಿಜನ್ ಕರ್ನಾಟಕಕ್ಕೆ ಅಗತ್ಯವಿದೆ. ಕೇಂದ್ರ ಸರಕಾರ 1200 ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದು, ಅಷ್ಟು ಪ್ರಮಾಣದಲ್ಲಿ ರಾಜ್ಯಕ್ಕೆ ಸರಬರಾಜದಲ್ಲಿ ಉತ್ತಮ ರೀತಿಯಿಂದ ನಿರ್ವಹಣೆ ಮಾಡಬಹುದಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಜಿಂದಾಲ್ ಸೇರಿದಂತೆ ರಾಜ್ಯದ ಇತರ ಉದ್ದಿಮೆಗಳಿಗೂ ಆಕ್ಸಿಜನ್ ಉತ್ಪಾದನಾ ಪ್ರಮಾಣ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ ಮತ್ತು ಭದ್ರವಾತಿ, ರಾಯಚೂರು, ಕೊಪ್ಪಳದಲ್ಲಿ ಸ್ಥಗಿತವಾಗಿರುವ ಆಕ್ಸಿಜನ್ ಉತ್ಪಾದಿಸುವ ಕೈಗಾರಿಕೆಗಳನ್ನು ಪುನಃ ಆರಂಭಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಜಿಂದಾಲ್ ಕಾರ್ಖಾನೆಯು ಪ್ರತಿನಿತ್ಯ 900 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಅದರಲ್ಲಿ  ರಾಜ್ಯಕ್ಕೆ  ಪ್ರತಿನಿತ್ಯ 650 ಮೆಟ್ರಿಕ್ ಟನ್ ಇಲ್ಲಿಂದ ಸರಬರಾಜಾಗುತ್ತಿದೆ ಎಂದು ತಿಳಿಸಿದ ಜಗದೀಶ್ ಶೆಟ್ಟರ್, ಜಿಂದಾಲ್ ಕಾರ್ಖಾನೆ ಸಂಕಷ್ಟದ ಸಮಯದಲ್ಲಿ ಇಡೀ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದೆ. ಜಿಂದಾಲ್‍ನ ಇತರೆ  ಸ್ಟೀಲ್ ಉತ್ಪಾದನಾ ಕಾರ್ಯಗಳಿಗೆ ಆಕ್ಸಿಜನ್ ಕಡಿಮೆ ಮಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಆಕ್ಸಿಜನ್ ಉತ್ಪಾದನೆ ಮಾಡಿ ನೀಡುವಂತೆ ತಿಳಿಸಲಾಗಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದರು.

ನಮ್ಮ ನಿರೀಕ್ಷೆಗೂ ಮೀರಿ ಕೊರೋನ ವೇಗವಾಗಿ ಹರಡುತ್ತಿದೆ. ಕೋವಿಡ್ ಎರಡನೇ ಅಲೆಯು ಮೊದಲನೆಯ ಅಲೆಗಿಂತ ಎರಡರಿಂದ ಮೂರುಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ವಿವರಿಸಿದ ಅವರು, ಸರಕಾರ ಜನತಾ ಕಫ್ರ್ಯೂಗಿಂತ ಕಠಿಣವಿರುವ ನಿಬರ್ಂಧಗಳನ್ನು ಜಾರಿಗೆ ತಂದಿದೆ ಎಂದರು.

ಯಾವುದೇ ಒಂದು ಕಾರ್ಯ ಯಶಸ್ವಿಯಾಗಬೇಕಾದರೆ ಜನರ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯ. ಸರಕಾರ ಏನೇ ಮಾರ್ಗಸೂಚಿ ಮಾಡಿದ್ರು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವುದು ಸಾರ್ವಜನಿಕರು. ಜನರು ಕೋವಿಡ್ ಬಗ್ಗೆ ಜಾಗೃತರಾಗಿ ಮನೆಯಿಂದ ಹೊರಗಡೆ ಬರದಂತೆ ಇದ್ದರೆ ಕೊರೋನ ಪ್ರಕರಣಗಳನ್ನು ಆದಷ್ಟು ಬೇಗ ಕಡಿಮೆ ಮಾಡಬಹುದು. ಯಾವುದೆ ರೀತಿಯ ರೋಗ ಲಕ್ಷಣಗಳು ಕಂಡ ಬಂದ ಕೂಡಲೇ ನಿರ್ಲಕ್ಷ್ಯವಹಿಸದೆ ಚಿಕಿತ್ಸೆ ಪಡೆದರೆ ಪ್ರಾಥಮಿಕ ಹಂತದಲ್ಲಿಯೇ ಕೋವಿಡ್ ನಿಯಂತ್ರಿಸಬಹುದು ಎಂದು ಅವರು ತಿಳಿಸಿದರು.

ಎಲ್ಲ ಕಡೆ ಹಾಸಿಗೆಗಳು ಭರ್ತಿಯಾಗುತ್ತಿವೆ. ಹಾಸಿಗೆಗಳು ಸಿಗದೆ ಜನರು ಪರದಾಡುತ್ತಿದ್ದಾರೆ. ಆಕ್ಸಿಜನ್ ಪೂರೈಕೆ ಜಾಸ್ತಿಯಾದಂತೆ ಹಾಸಿಗೆಗಳ ಸೃಷ್ಟಿಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಿಂದಾಲ್ ಸಂಸ್ಥೆಯಲ್ಲಿ ಆರು ಕಂಪನಿಗಳು ಆಕ್ಸಿಜನ್ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಇದರ ಜೊತೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಇದರಿಂದ ರಾಜಕ್ಕೆ ಆಕ್ಸಿಜನ್ ಪೂರೈಸಲಾಗುತ್ತದೆ. ನಮ್ಮಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಬಳಸಿಕೊಳ್ಳಲು ಅವಕಾಶ ಕೊಡಿ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಕೇಂದ್ರ ಗ್ರೀನ್ ಸಿಗ್ನಲ್ ನೀಡಿದರೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ಒಂದು ಸಾವಿರ ಹಾಸಿಗೆಯುಳ್ಳ ಆಸ್ಪತ್ರೆ ಕೇವಲ ಅವಳಿ ಜಿಲ್ಲೆಗೆ ಮಾತ್ರ ಸೀಮಿತವಾಗದೆ ಸುತ್ತಮುತ್ತಲ ಜಿಲ್ಲೆಗಳ ಜನರಿಗೂ ಇದರ ಅನುಕೂಲವಾಗಲಿದೆ. ಕೊರೋನ ತೀವ್ರಗೊಂಡ ರೋಗಿಗಳಿಗೆ ಮಾತ್ರ ಆಕ್ಸಿಜನ್ ಪೂರೈಸಲಾಗುತ್ತದೆ. ಯಾರಿಗೆ ಆಕ್ಸಿಜನ್ ನೀಡಬೇಕು. ಯಾರಿಗೆ ಅವಶ್ಯಕತೆ ಇದೆ ಎನ್ನುವುದು ಜಿಲ್ಲಾಡಳಿತ ತೀರ್ಮಾನಿಸಿ ತೀವ್ರ ಸಂಕಷ್ಟದಲ್ಲಿರುವ ರೋಗಿಗಳಿಗೆ ಆಕ್ಸಿಜನ್ ಮತ್ತು ವೆಂಟಿಲೇಟರ್ ಹಾಸಿಗೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

ನಂತರ ಜಿಂದಾಲ್‍ನಲ್ಲಿ ಸಚಿವರು, ಶಾಸಕರು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಜಗದೀಶ್ ಶೆಟ್ಟರ್, ಬಳ್ಳಾರಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಇದಕ್ಕೂ ಮುಂಚೆ ಅವರು ಜಿಂದಾಲ್ ಎದುರುಗಡೆ ನಿರ್ಮಾಣ ಮಾಡಲಾಗುತ್ತಿರುವ ಒಂದು ಸಾವಿರ ಆಕ್ಸಿಜನ್ ಹಾಸಿಗೆಯುಳ್ಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಇ.ತುಕಾರಾಂ, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News