ಕಾಡಾನೆ ದಾಳಿಯಿಂದ ಮೃತಪಟ್ಟ ಅರಣ್ಯ ರಕ್ಷಕ ಪುಟ್ಟರಾಜು ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರಕ್ಕೆ ಆಗ್ರಹ

Update: 2021-05-08 12:52 GMT

ಚಿಕ್ಕಮಗಳೂರು, ಮೇ 8: ಕಾಡಾನೆ ದಾಳಿಯಿಂದ ಮೃತಪಟ್ಟ ಅರಣ್ಯ ರಕ್ಷಕ ಪುಟ್ಟರಾಜು ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮತ್ತು ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಿ ಮೃತರ ಮಕ್ಕಳಿಗೆ ಸರಕಾರ ಉಚಿತ ಶಿಕ್ಷಣ ಕೊಡಿಸಬೇಕು ಎಂದು ಜೆಡಿಎಸ್ ಮತ್ತು ಬಿಎಸ್ಪಿ ಪಕ್ಷಗಳ ಮುಖಂಡರು ಆಗ್ರಹಿದ್ದಾರೆ.

ಶುಕ್ರವಾರ ಆಲ್ದೂರು ಹೋಬಳಿಯ ಚಿತ್ತುವಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಅರಣ್ಯ ರಕ್ಷಕ ಪುಟ್ಟರಾಜು ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸಿದ  ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮತ್ತಿತರ ಮುಖಂಡರು, ಮೃತ ಅರಣ್ಯ ರಕ್ಷಕ ಪುಟ್ಟರಾಜು ನಿಧನದಿಂದ ಅವರ ಕುಟುಂಬ ಕಂಗಾಲಾಗಿದ್ದು, ಕುಟುಂಬದ ಆಧಾರಸ್ಥಂಭವಾಗಿದ್ದ ಪುಟ್ಟರಾಜು ಕುಟುಂಬಸ್ಥರು ದಿಕ್ಕುತೋಚದಂತಾಗಿದ್ದಾರೆ ಎಂದರು.

ಕಾಡಾನೆ ದಾಳಿಯಿಂದ ಮೃತಪಟ್ಟಿರುವ ಪುಟ್ಟರಾಜು ಅವರ ಪತ್ನಿ ವಿದ್ಯಾವಂತರಾಗಿದ್ದು, ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ಸರಕಾರಿ ಉದ್ಯೋಗ ನೀಡುವ ಜೊತೆಗೆ ಕುಟುಂಬ ನಿರ್ವಹಣೆಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ ಮುಖಂಡರು, ಮೃತ ಪುಟ್ಟರಾಜುಗೆ 2 ವರ್ಷ ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದು, ಇವರ ಶೈಕ್ಷಣಿಕ ಏಳಿಗೆಯ  ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಜಾತ್ಯಾತೀತ ಜನತಾದಳದ ಎಸ್ಸಿಎಸ್ಟಿ ವಿಭಾಗದ ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News