ಕೇಂದ್ರ ಸರಕಾರದಿಂದ ರಾಜ್ಯದಲ್ಲಿ 28 ಆಸ್ಪತ್ರೆಗಳಿಗೆ ಆಕ್ಸಿಜನ್ ಉತ್ಪಾದನಾ ಘಟಕ: ಪ್ರಹ್ಲಾದ್ ಜೋಶಿ

Update: 2021-05-08 13:47 GMT

ಹೊಸದಿಲ್ಲಿ, ಮೇ 8: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಆಮ್ಲಜನಕದ ಕೊರತೆ ನೀಗಿಸುವುದರ ಅವಶ್ಯಕತೆಗೆ ಅನುಗುಣವಾಗಿ ಕೇಂದ್ರ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳಿಂದ ರಾಜ್ಯದ 28 ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಕೇಂದ್ರ ಇಂಧನ ಇಲಾಖೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಅಂದಾಜು 34 ಕೋಟಿ ರೂ.ವೆಚ್ಚದಲ್ಲಿ ಕರ್ನಾಟಕದ ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ತಲಾ ಒಂದರಂತೆ ಪಿಎಸ್‍ಒ ಮಾದರಿ ಆಕ್ಸಿಜನ್ ಉತ್ಪಾದಕ ಘಟಕಗಳನ್ನು ಸ್ಥಾಪಿಸುವಂತೆ ಕೋರಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮೇ 4ರಂದು ಪತ್ರ ಬರೆಯಲಾಗಿತ್ತು ಎಂದು ಅವರು ಹೇಳಿದ್ದಾರೆ.

ಅದರ ಫಲವಾಗಿ ಕೇಂದ್ರ ಸರಕಾರದ ಸ್ವಾಮ್ಯದ ಎಂ.ಆರ್.ಪಿ.ಎಲ್, ಓಎನ್‍ಜಿಸಿ ಹಾಗೂ ಎಂಡಿಸಿ ಕಂಪನಿಗಳಿಗೆ ತಕ್ಷಣ ಆದೇಶಿಸಿ ರಾಜ್ಯದಲ್ಲಿ 32 ಆಕ್ಸಿಜನ್ ಉತ್ಪಾದಕಾ ಘಟಕಗಳನ್ನು ಸ್ಥಾಪಿಸಲು ಧರ್ಮೇಂದ್ರ ಪ್ರಧಾನ್ ಆದೇಶಿಸಿದ್ದಾರೆ. ಪ್ರತಿ ಘಟಕವು ಪ್ರತಿ ನಿಮಿಷಕ್ಕೆ 1000 ಲೀಟರ್ ಆಮ್ಲಜನಕ ಉತ್ಪಾದಿಸಲಿದೆ. ಇದರಿಂದ ಕೋವಿಡ್ ಸೋಂಕಿತರ ಚಿಕಿತ್ಸೆಗೆ ದಿನದ 24 ಗಂಟೆಗಳೂ ಸತತ ಆಮ್ಲಜನಕ ಲಭ್ಯವಾಗಲಿದೆ. ಅಲ್ಲದೆ, ಸಾಗಾಣಿಕಾ ವೆಚ್ಚ ಸಮಯವೂ ಉಳಿಯಲಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಈ ಪೈಕಿ 11 ಘಟಕಗಳನ್ನು ಮೇ 15 ಹಾಗೂ ಇನ್ನುಳಿದ ಎಲ್ಲ ಘಟಕಗಳನ್ನು ಜೂ.30ರೊಳಗೆ ಪೂರ್ಣಗೊಳಿಸಬೇಕೆಂದು ತಾತ್ಕಾಲಿಕ ಗಡುವು ವಿಧಿಸಿದೆ. ತಲಾ ಒಮದು ಘಟಕ ಸ್ಥಾಪನೆಗೆ ಪ್ಲಾಂಟ್, ಸಿವಿಲ್ ಹಾಗೂ ಎಲೆಕ್ಟ್ರಿಕಲ್ ಕಾಮಗಾರಿ ಸಹಿತ ಅಂದಾಜು 82 ಲಕ್ಷ ರೂ.ವೆಚ್ಚವಾಗಲಿದೆ ಎಂದು ಅವರು ಹೇಳಿದ್ದಾರೆ.

ಎಲ್ಲ 32 ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಸಿವಿಲ್ ಹಾಗೂ ವಿದ್ಯುತ್ ಕಾಮಗಾರಿಗಳನ್ನು ತಕ್ಷಣವೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನುರಿತ ಅರ್ಹ ಗುತ್ತಿಗೆದಾರರಿಂದ ಅನುಷ್ಠಾನಗೊಳಿಸಲು ನಿರ್ದೇಶಿಸಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ 500 ಎಲ್‍ಪಿಎಂ(ವಿಎಸ್‍ಎ ತಂತ್ರಜ್ಞಾನ) ಹಾಗೂ 1000 ಎಲ್‍ಪಿಎಂ ಸಾಮಥ್ರ್ಯದ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಶೀಘ್ರವೇ ಸ್ಥಾಪಿಸಲು ಆದೇಶಿಸಲಾಗಿದೆ. ರಾಜ್ಯಕ್ಕೆ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮೋದನೆ ನೀಡಿರುವ ಪ್ರಧಾನಿ ನರೇಂದ್ರಮೋದಿ ಹಾಗೂ  ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪ್ರಹ್ಲಾದ್ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.

ಆಸ್ಪತ್ರೆಗಳ ವಿವರ: ತುಮಕೂರು ಜಿಲ್ಲಾ ಆಸ್ಪತ್ರೆ, ಕಲಬುರಗಿ ಜಿಲ್ಲೆಯ ಜೇವರ್ಗಿ ಸಾರ್ವಜನಿಕ ಆಸ್ಪತ್ರೆ, ಚಾಮರಾಜನಗರ ಜಿಲ್ಲಾ ಆಸ್ಪತ್ರೆ, ಬೀದರ್ ಜಿಲ್ಲೆಯ ಬಾಲ್ಕಿ ಸಾರ್ವಜನಿಕ ಆಸ್ಪತ್ರೆ, ಯಾದಗಿರಿ ಜಿಲ್ಲಾ ಆಸ್ಪತ್ರೆ, ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ, ರಾಮನಗರ ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆ, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ, ನೆಲಮಂಗಲ ಸಾರ್ವಜನಿಕ ಆಸ್ಪತ್ರೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಾರ್ವಜನಿಕ ಆಸ್ಪತ್ರೆ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಸಾರ್ವಜನಿಕ ಆಸ್ಪತ್ರೆ.

ಉಡುಪಿ ಜಿಲ್ಲೆಯ ಕುಂದಾಪುರ ಸಾರ್ವಜನಿಕ ಆಸ್ಪತ್ರೆ, ಬೀದರ್ ಜಿಲ್ಲೆಯ ಬಸವಕಲ್ಯಾಣ ಸಾರ್ವಜನಿಕ ಆಸ್ಪತ್ರೆ, ಹಾವೇರಿ ಜಿಲ್ಲಾ ಆಸ್ಪತ್ರೆ, ಬೆಳಗಾವಿ ಜಿಲ್ಲೆಯ ಗೋಕಾಕ್ ಸಾರ್ವಜನಿಕ ಆಸ್ಪತ್ರೆ, ಕೊಪ್ಪಳ ಜಿಲ್ಲೆಯ ಗಂಗಾವತಿ ಸಾರ್ವಜನಿಕ ಆಸ್ಪತ್ರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಾರ್ವಜನಿಕ ಆಸ್ಪತ್ರೆ, ಭಟ್ಕಳ ಸಾರ್ವಜನಿಕ ಆಸ್ಪತ್ರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡ ಸಾರ್ವಜನಿಕ ಆಸ್ಪತ್ರೆ.

ಕೋಲಾರ ಜಿಲ್ಲಾ ಆಸ್ಪತ್ರೆ, ವಿಜಯಪುರ ಜಿಲ್ಲಾ ಆಸ್ಪತ್ರೆ, ಕಲಬುರಗಿ ಜಿಲ್ಲೆಯ ಸೇಡಂ ಸಾರ್ವಜನಿಕ ಆಸ್ಪತ್ರೆ, ಬೀದರ್ ಜಿಲ್ಲೆಯ ಔರಾದ್ ಸಾರ್ವಜನಿಕ ಆಸ್ಪತ್ರೆ, ಕೊಡಗು ಜಿಲ್ಲೆಯ ಕೊಡಲು ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದು ಪ್ರಹ್ಲಾದ್ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News