ಸಂಕಷ್ಟ ಕಾಲದಲ್ಲಿ ಸೇನಾನಿಗಳಾಗಿ ಕೆಲಸ ಮಾಡಿ: ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಕರೆ

Update: 2021-05-08 16:06 GMT

ಬೆಂಗಳೂರು, ಮೇ 8: ರಾಜ್ಯದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ತೀವ್ರಗೊಂಡಿದ್ದು, ಸೋಂಕು ನಿಯಂತ್ರಣ, ರೋಗಿಗಳ ರಕ್ಷಣೆ, ಜನ ಸಾಮಾನ್ಯರಿಗೆ ಪ್ರದೇಶ ಯುವ ಕಾಂಗ್ರೆಸ್ ತಂಡ ನೆರವು ನೀಡಲು ಸದಾ ಸಜ್ಜಾಗಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಶನಿವಾರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಮತ್ತು ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಝೂಮ್ ಮೂಲಕ ಸಂವಾದ ನಡೆಸಿದ ಶಿವಕುಮಾರ್, ಕೋವಿಡ್ ಕಾಲದಲ್ಲಿ ಪಕ್ಷದ ವಿವಿಧ ಘಟಕಗಳು ನಡೆಸುತ್ತಿರುವ ಚಟುವಟಿಕೆಗಳು, ಜನ ಸಾಮಾನ್ಯರಿಗೆ ನೆರವಾಗುತ್ತಿರುವ ಕುರಿತು ಮಾಹಿತಿ ಪಡೆದರು.

ಸಭೆಯಲ್ಲಿ ಮಾತನಾಡಿದ ರಕ್ಷಾ ರಾಮಯ್ಯ, ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರಿಗೆ ಹೋಂ ಐಸೋಲೇಷನ್ ಕಿಟ್‍ಗಳನ್ನು ಅವರ ಮನೆಗಳಿಗೆ ತಲುಪಿಸುತ್ತಿದ್ದೇವೆ. ಅತಿ ಅವಶ್ಯಕತೆ ಇರುವವರಿಗೆ ಆಮ್ಲಜನಕ ಸಿಲಿಂಡರ್‍ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಸಹಸ್ರಾರು ಜನರಿಗೆ ಆಹಾರ ಒದಗಿಸುತ್ತಿದ್ದು, ಕೋವಿಡ್ ಲಸಿಕೆಗೆ ನೋಂದಣಿ ಮಾಡಿಕೊಳ್ಳುವುದು ಸೇರಿ ಎಲ್ಲ ರೀತಿಯಲ್ಲೂ ಯುವ ಕಾಂಗ್ರೆಸ್ ನೆರವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯ ನಂತರ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಎಂ.ಎಸ್.ರಕ್ಷಾ ರಾಮಯ್ಯ, ಸಭೆ ಅತ್ಯಂತ ಫಲಪ್ರದವಾಗಿತ್ತು. ಕೆಪಿಸಿಸಿ ಅಧ್ಯಕ್ಷರು ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಎಲ್ಲರೂ ಸೇನಾನಿಗಳಾಗಿ ಕೆಲಸ ಮಾಡಬೇಕು. ಜನರಿಗೆ ಕೋವಿಡ್ ಕುರಿತ ಮಾಹಿತಿ ಮತ್ತು ಸರಕಾರದ ಮಟ್ಟದಲ್ಲಿ ಇರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಬೇಕು. ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಆರಂಭಿಸಿರುವ ಪ್ರದೇಶ ಕಾಂಗ್ರೆಸ್ ಕೇರ್ ಕೇಂದ್ರಗಳಿಗೆ ಯುವ ಕಾಂಗ್ರೆಸ್ ಸೂಕ್ತ ರೀತಿಯಲ್ಲಿ ಸಹಾಯ ಮಾಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.

ಕೊರೋನ ಸಮಸ್ಯೆ ನಿವಾರಿಸಲು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು, ಸರಕಾರದ ವೈಫಲ್ಯಗಳನ್ನು ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಕು. ಎಲ್ಲ ಹಂತಗಳಲ್ಲಿ ಮಾಧ್ಯಮಗಳಿಗೆ ಬೆಂಬಲವಾಗಿ ನಿಲ್ಲಬೇಕು. ಮಾಧ್ಯಮಗಳಲ್ಲಿ ವರದಿಯಾಗುವ ಸಮಸ್ಯೆಗಳು, ವೈಫಲ್ಯಗಳ ವಿರುದ್ಧ ಜನ ಜಾಗೃತಿ ಮೂಡಿಸಬೇಕು. ಸರಕಾರದ ಸೌಲಭ್ಯಗಳು ಜನರಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಸಲಹೆ ಮಾಡಿದ್ದಾರೆ ಎಂದು ರಕ್ಷಾ ರಾಮಯ್ಯ ತಿಳಿಸಿದರು.

ಕೋವಿಡ್ ಸೋಂಕಿತರಿಗೆ ಹಾಸಿಗೆ ಸೌಲಭ್ಯ, ಆಮ್ಲಜನಕ, ಇತರೆ ಔಷಧಿಗಳನ್ನು ಒದಗಿಸಬೇಕು. ಕೊರೋನದಿಂದ ಮರಣ ಹೊಂದಿದವರಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ನೆರವಾಗಬೇಕು. ಸ್ಮಶಾನಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ನಮಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು. 

ಪ್ರಮುಖ ಕಾಂಗ್ರೆಸ್ ನಾಯಕರು ಮರಣ ಹೊಂದಿದಾಗ ಅವರನ್ನು ಸ್ಮರಿಸುವ ಕೆಲಸ ಆಗಬೇಕು. ಸ್ಥಳೀಯವಾಗಿ ಸಂತಾಪ ಸೂಚಿಸಿ ಗೌರವ ಸಲ್ಲಿಸಬೇಕು.  ಕೊರೋನ ಸಂಕಷ್ಟ ಸಮಯದಲ್ಲಿ ಪಕ್ಷದ ಸೇನಾನಿಗಳು ಮಾಡಿದ ಕೆಲಸ ಮಾಧ್ಯಮಗಳ ಮೂಲಕ ಜನ ಸಾಮಾನ್ಯರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಪ್ರತಿವಾರ ತಪ್ಪದೇ ಕೆಪಿಸಿಸಿಗೆ ವರದಿ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News