ಕೊಡಗು: ಮುಂಗಾರಿನ ಸಿದ್ಧತೆಗಳಿಗೆ ಸೋಂಕು ಅಡ್ಡಿ; ಬೆಳೆಗಾರರಲ್ಲಿ ಆತಂಕ

Update: 2021-05-09 18:37 GMT

ಮಡಿಕೇರಿ, ಮೇ 9: ಮಲೆನಾಡು ಕೊಡಗಿನ ಜನತೆ ಮುಂಗಾರಿನ ಆರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಕೊರೋನ ಜನತಾ ಕರ್ಫ್ಯೂ ತಡೆಯೊಡ್ಡಿತ್ತು. ಆದರೆ, ಇದೀಗ ಎದುರಾಗಲಿರುವ ಲಾಕ್‌ಡೌನ್ ಸಂಕಷ್ಟವನ್ನು ತಂದೊಡ್ಡಲಿದೆ.

ಕೊಡಗು ಜಿಲ್ಲೆಯಲ್ಲಿ ಸರ್ವೇ ಸಾಧಾರಣವಾಗಿ ಮುಂಗಾರು ಜೂನ್ ತಿಂಗಳಿನಿಂದ ಆರಂಭವಾಗುತ್ತದೆ. ಮಹಾ ಮಳೆಗೆ ಮುನ್ನ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಳೆ ನೀರು ಸೋರದಂತೆ ಮನೆಗಳ ದುರಸ್ತಿ ಕಾರ್ಯ, ಮನೆಯನ್ನು ಬೆಚ್ಚಗಿಡಲು ಉರುವಲು ಜೋಡಣೆ, ಮಸಿ ಸಂಗ್ರಹ, ಮನೆಯ ಸುತ್ತಮುತ್ತಲ ಪ್ರದೇಶಗಳ ಸ್ವಚ್ಛತಾ ಕಾರ್ಯಗಳನ್ನು ನಡೆಸುವುದು ಸಾಮಾನ್ಯ. ಆದರೆ, ಈ ಬಾರಿ ಈ ಎಲ್ಲಾ ಕಾರ್ಯಗಳಿಗೆ ಜನತಾ ಕರ್ಫ್ಯೂ, ಮುಂದೆ ಲಾಕ್ ಡೌನ್ ಅಡ್ಡಿಯಾಗಿ ಪಡಿಣಮಿಸಿದೆ ಎಂದು ಜನರು ಆತಂಕ ವ್ಯಕ್ತ ಪಡಿಸಿದ್ದಾರೆ.

ಕಾರ್ಮಿಕರ ಕೊರತೆ: ಕೊಡಗಿನ ಬಹುತೇಕ ಗ್ರಾಮಗಳ ಅಲ್ಲಲ್ಲಿ ಸೀಲ್‌ಡೌನ್, ಹೋಂ ಕ್ವಾರಂಟೈನ್‌ಗಳು ನಿರಂತರವಾಗಿ ನಡೆಯುತ್ತಿದೆ. ಮಹಾಮಾರಿ ಕಾರ್ಮಿಕ ಸಮೂಹವನ್ನೂ ಆವರಿಸಿದೆ. ಇದರಿಂದಾಗಿ ಕಾರ್ಮಿಕರ ಕೊರತೆ ಎದುರಾಗಿದೆ. ಕೃಷಿ ಕೆಲಸಗಳಿಗೆ ಅಗತ್ಯ ಕಾರ್ಮಿಕರು ದೊರಕದೆ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ.

ಜಿಲ್ಲೆಯ ಸಾಕಷ್ಟು ಬೆಳೆಗಾರರು ಮಕ್ಕಳ ಶಿಕ್ಷಣ ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ತಮ್ಮ ಗ್ರಾಮದ ಸಮೀಪದ ಪಟ್ಟಣ ಪ್ರದೇಶಗಳಲ್ಲಿ ನೆಲೆಸಿ, ನಿಯಮಿತವಾಗಿ ತೋಟಗಳಿಗೆ ತೆರಳಿ, ಅಗತ್ಯ ಕೃಷಿ ಚಟುವಟಿ ಕೆಗಳನ್ನು ನಡೆಸಿಕೊಂಡು ಬದುಕು ಕಟ್ಟಿಕೊಂಡಿರುವಂತಹವರು. ಇದೀಗ ಪಟ್ಟಣ ಪ್ರದೇಶ ಬಂದ್ ಆಗುತ್ತಿರುವುದರಿಂದ ನಿಯಮಿತವಾಗಿ ತೋಟಗಳಿಗೆ ತೆರಳುವುದು ಇವರಿಗೆ ಕಷ್ಟಸಾಧ್ಯವಾಗಿ ಪರಿಣಮಿಸಿದೆ ಎಂದು ಕೃಷಿಕರು ತಮ್ಮ ಅಸಹಾಯಕತೆ ಹೇಳುತ್ತಾರೆ.

ನಲುಗುತ್ತಿರುವ ಕಾರ್ಮಿಕರು: ಕೊರೋನ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಾರ್ಮಿಕ ವರ್ಗ ತನ್ನಿಚ್ಛೆಯಂತೆ ಜಿಲ್ಲೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕೆಲಸಕ್ಕೆ ತೆರಳುವುದು ಅಸಾಧ್ಯ ವಾಗಿ ಪರಿಣಮಿಸಿದೆ. ವಾಹನಗಳ ಸಂಚಾರದ ನಿರ್ಬಂಧ ಇದಕ್ಕೆ ತಡೆಯಾಗಿದ್ದು, ಕಾರ್ಮಿಕರು ಅಗತ್ಯ ಕೆಲಸವಿಲ್ಲದೆ ಕೂರುವಂತಾಗಿದೆ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನೋಡ ನೊಡುತ್ತಲೆ ಬಂದು ಬಿಡುವ ಮಳೆಗಾಲ, ಮುಗಿಯದ ಕೊರೋನ ಸೋಂಕು ಜಿಲ್ಲೆಯ ಜನತೆಯ ಬದುಕನ್ನು ಅಕ್ಷರಶಃ ಕಸಿದುಕೊಳ್ಳುವ ನಿಟ್ಟಿನಲ್ಲಿ ದೃಢ ಹೆಜ್ಜೆ ಯನ್ನಿರಿಸಿದಂತೆ ಕಾಣುತ್ತಿದೆ. ಇಂತಹ ಆತಂಕದ ವಾತಾವರಣದಿಂದ ಹೊರಬರುವ ಚಿಕ್ಕ ಬೆಕು ಕಾಣದೆ ಜನಸಾಮಾನ್ಯನ ನೋಟ ಶೂನ್ಯದತ್ತ ನೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News