ತರೀಕೆರೆ: ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದ ಕೋವಿಡ್ ಸೋಂಕಿತ ನಿವೃತ್ತ ಉಪ ತಹಶೀಲ್ದಾರ್

Update: 2021-05-10 14:09 GMT

ಚಿಕ್ಕಮಗಳೂರು, ಮೇ 10: ಕೊರೋನ ಸೋಂಕಿಗೆ ತುತ್ತಾಗಿ ಹೋಮ್ ಐಸೋಲೇಶನ್‍ನಲ್ಲಿದ್ದ ನಿವೃತ್ತ ಉಪತಹಶೀಲ್ದಾರ್ ಒಬ್ಬರು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ವರದಿಯಾಗಿದೆ.

ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ತರೀಕೆರೆ ತಾಲೂಕಿನ ಬೇಲೇನಹಳ್ಳಿ ತಾಂಡ್ಯದ ನಿವಾಸಿ ಸೋಮನಾಯ್ಕ್(69) ಬಂದೂಕಿನಿಂದ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿಟ್ಟಿದ್ದ ಸೋಮನಾಯ್ಕ್ ನಂತರ ಕಾರಿನಲ್ಲಿ ತನ್ನ ತೋಟಕ್ಕೆ ತೆರಳಿ ಅಲ್ಲಿ ಕಾರಿನಲ್ಲಿ ಕುಳಿತುಕೊಂಡು ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. 

ಸೋಮನಾಯ್ಕ್ ಅವರಿಗೆ ಇತ್ತೀಚೆಗೆ ಕೊರೋನ ಸೋಂಕು ತಗಲಿದ್ದು, ಹೋಮ್ ಐಸೋಲೇಶನ್‍ನಲ್ಲಿದ್ದ ಅವರು ಸೋಂಕಿನಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರೆಂದು ತಿಳಿದು ಬಂದಿದೆ. ತನ್ನಿಂದಾಗಿ ತನ್ನ ಮಕ್ಕಳು, ಮೊಮ್ಮಕ್ಕಳಿಗೂ ಕೊರೋನ ಸೋಂಕು ತಗಲುವಂತಾಗಿದೆ, ನನಗೆ ವಯಸ್ಸಾಗಿದ್ದು, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರಿಗೆ ಏನಾದರು ಆದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕೆ ಈ ತೀರ್ಮಾನಕ್ಕೆ ಬಂದಿದ್ದು, ನನ್ನ ಸಾವಿಗೆ ನಾನೇ ಕಾರಣ. ಕುಟುಂಬಸ್ಥರು ಯಾರೂ ನೊಂದು ಕೊಳ್ಳಬೇಡಿ. ನನ್ನ ಈ ಕೃತ್ಯಕ್ಕಾಗಿ ಹೆಂಡತಿ ಮಕ್ಕಳು, ಅಳಿಯನಲ್ಲಿ ಕ್ಷಮೆಯಾಚಿಸುತ್ತೇನೆಂದು ಸೋಮನಾಯ್ಕ್ ಡೆತ್‍ನೋಟ್‍ನಲ್ಲಿ ಬರೆದಿಟ್ಟಿದ್ದಾರೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತ ವ್ಯಕ್ತಿ ಕೊರೋನ ಸೋಂಕಿಗೆ ತುತ್ತಾಗಿದ್ದರಿಂದ ಮೃತನ ಸಂಬಂಧಿಕರು ಶವಸಂಸ್ಕಾರಕ್ಕೆ ಮುಂದಾಗದ ಪರಿಣಾಮ ಚಿಕ್ಕಮಗಳೂರು ನಗರದ ಮುಸ್ಲಿಮ್ ಜಮಾಅತ್ ಸಂಘದ ಕಾರ್ಯಕರ್ತರು ಸದಸ್ಯರು ಸೋಮನಾಯ್ಕ್ ತೋಟದಲ್ಲಿಯೇ ಹಿಂದೂ ಧಾರ್ಮಿಕ ವಿಧಿಗಳಂತೆ ಶವಸಂಸ್ಕಾರ ನೆರವೇರಿಸಿದರು.

ತರೀಕೆರೆಯ ಬೇಲೇನಹಳ್ಳಿ ನಿವಾಸಿ ಸೋಮನಾಯಕ್ ನಿವೃತ್ತ ತಹಶೀಲ್ದಾರ್ ಆಗಿದ್ದಾರೆ. ಸೋಮವಾರ ಬೆಳಗ್ಗೆ ತಮ್ಮ ತೋಟದಲ್ಲಿ ಪರವಾನಿಗೆ ಇದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಡೆತ್‍ನೋಟ್ ಬರೆದಿದ್ದಾರೆ. ಮೃತ ವ್ಯಕ್ತಿ ಕೋವಿಡ್ ಪಾಸಿಟಿವ್ ಆಗಿದ್ದರು. ಸೋಂಕಿನ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- ಅಕ್ಷಯ್ ಎಂ.ಎಚ್., ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News