ಜೈಲಿನಲ್ಲಿರುವ ಹೋರಾಟಗಾರ್ತಿ ನತಾಶಾ ನರ್ವಾಲ್ ತಂದೆ ಕೋವಿಡ್‍ ಗೆ ಬಲಿ

Update: 2021-05-10 06:54 GMT
photo: twitter

ಹೊಸದಿಲ್ಲಿ: ಕಳೆದೊಂದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ್ತಿ ನತಾಶಾ ನರ್ವಾಲ್ ಅವರ ತಂದೆ, ಹಿರಿಯ ವಿಜ್ಞಾನಿ ಹಾಗೂ ಕಮ್ಯುನಿಸ್ಟ್ ಮಹಾವೀರ್ ನರ್ವಾಲ್ ರವಿವಾರ ರೋಹ್ಟಕ್‍ನ ಆಸ್ಪತ್ರೆಯೊಂದರಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು ಹಾಗೂ ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮಹಿಳಾ ಸಂಘಟನೆ ಪಿಂಜ್ರಾ ತೋಡ್ ಕಾರ್ಯಕರ್ತೆಯಾಗಿರುವ ನತಾಶಾ, ದಿಲ್ಲಿಯ ಜವಾರಹಲಾಲ್ ನೆಹರೂ ವಿವಿಯ ವಿದ್ಯಾರ್ಥಿನಿಯಾಗಿದ್ದು ದಿಲ್ಲಿ ಹಿಂಸಾಚಾರದಲ್ಲಿ ಆಕೆಯ ಪಾತ್ರವಿದೆಯೆಂದು ಆರೋಪಿಸಿ ಕಳೆದ ವರ್ಷದ ಮೇ 23ರಂದು  ಸಹ ಕಾರ್ಯಕರ್ತರಾದ ದೇವಾಂಗನಾ ಕಲಿತಾ ಅವರ ಜತೆಗೆ ಆಕೆಯ ಮನೆಯಿಂದ ಬಂಧಿಸಲಾಗಿತ್ತು. ನ್ಯಾಯಾಲಯ ಈ ಪ್ರಕರಣದಲ್ಲಿ ಜಾಮೀನು ನೀಡಿದ್ದರೂ  ಮೇ 30ರಂದು ಆಕೆಯ ವಿರುದ್ಧ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆ ಹೇರಲಾಗಿತ್ತು.

ಪ್ರಸಕ್ತ ತಿಹಾರ್ ಜೈಲಿನಲ್ಲಿರುವ ನತಾಶಾ ಅವರಿಗೆ ತಮ್ಮ ತಂದೆಯ ಜತೆಗೆ ಕೊನೆಯ ಬಾರಿ ಮಾತನಾಡುವ ಅವಕಾಶವೂ  ದೊರಕಿರಲಿಲ್ಲ, ಆಕೆಯ ಸೋದರ ಆಕಾಶ್ ಕೂಡ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ. ತಂದೆಯನ್ನು ನೋಡುವ ಅವಕಾಶ ಕೋರಿ ನತಾಶಾ ಸಲ್ಲಿಸಿದ್ದ ಜಾಮೀನು ಅಪೀಲು ಇಂದು ವಿಚಾರಣೆಗೆ ಬರಲಿತ್ತು.

ಕಳೆದ ವರ್ಷ ನತಾಶಾ ಅವರನ್ನು ಬಂಧಿಸಿದ ನಂತರವೂ ಮಹಾವೀರ್ ಅವರು ತಮ್ಮ ಪುತ್ರಿಯ ಬಗ್ಗೆ ಹಾಗೂ ಆಕೆ ಹೋರಾಡುತ್ತಿರುವ ವಿಚಾರಗಳ ಕುರಿತು ತಮಗೆ ಹೆಮ್ಮೆಯಿದೆಯೆಂದು ಹೇಳಿಕೊಂಡಿದ್ದರು.

ಕಳೆದ ವರ್ಷದ ನವೆಂಬರಿನಲ್ಲಿ ರಾಜಕೀಯ ಖೈದಿಗಳಿಗೆ ಬೆಂಬಲ ಸೂಚಿಸಿ ನಡೆದ ಸಭೆಯಲ್ಲಿ ಮಾತನಾಡಿದ್ದ ಅವರು ತಮಗೆ ತಮ್ಮ ಪುತ್ರಿಯಿಂದ ಕಲಿಯಲು ಬಹಳಷ್ಟಿದೆ ಎಂದು ಹೇಳಿಕೊಂಡಿದ್ದರು. "ಆಕೆಗೆ ತಾನು ಜೈಲಿನಲ್ಲಿದ್ದೇನೆ ಎಂದು ಅನಿಸುತ್ತಿಲ್ಲ. ಜೈಲಿನೊಳಗಿನವರಂತೆ ಹೊರಗಿನವರೂ ಕಷ್ಟ ಪಡುತ್ತಿದ್ದಾರೆ" ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News