ಕೋವಿಡ್ 3ನೇ ಅಲೆ ಎದುರಿಸಲು ಗ್ರಾಮೀಣ ಭಾಗದಲ್ಲಿ ಆಕ್ಸಿಜನ್ ಹಾಸಿಗೆ ವ್ಯವಸ್ಥೆ: ಅಶ್ವತ್ಥ ನಾರಾಯಣ

Update: 2021-05-10 17:45 GMT

ಬೆಂಗಳೂರು, ಮೇ 10: ಕೋವಿಡ್‍ನ ಸದ್ಯದ ಪರಿಸ್ಥಿತಿ ಸೇರಿದಂತೆ ಸಂಭನೀಯ ಮೂರನೆ ಅಲೆಯನ್ನೂ ಎದುರಿಸಲು ಸಾಧ್ಯವಾಗುವಂತೆ ಗ್ರಾಮೀಣ ಭಾಗದಲ್ಲೂ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು ಹೆಜ್ಜೆ ಇಟ್ಟಿರುವ ಸರಕಾರ, ತಾಲೂಕು ಆಸ್ಪತ್ರೆಗಳೂ ಸೇರಿ ಹಳ್ಳಿಯ ವಿವಿಧ ಹಂತಗಳಲ್ಲೇ 8,105 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಸೋಮವಾರ ನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದ 146 ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ತಲಾ 4 ರಿಂದ 6 ಐಸಿಯು ಬೆಡ್‍ಗಳಿವೆ. ಇವುಗಳನ್ನು 20ಕ್ಕೆ ಹೆಚ್ಚಿಸಲಾಗುವುದು. ಈ ಮೂಲಕ ಒಟ್ಟು 1,925 ಐಸಿಯು ಬೆಡ್‍ಗಳು ಲಭ್ಯವಾಗುತ್ತವೆ. ಜತೆಗೆ, ರಾಜ್ಯಾದ್ಯಂತ 206 ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ ಈಗ 30 ಸಾಮಾನ್ಯ ಬೆಡ್‍ಗಳಿವೆ. ಅವೆಲ್ಲವನ್ನೂ ಆಕ್ಸಿಜನ್ ಬೆಡ್‍ಗಳನ್ನಾಗಿ ಪರಿವರ್ತಿಸಲಾಗುವುದು. ಆಗ ಒಟ್ಟು 6,180 ಆಕ್ಸಿಜನ್ ಬೆಡ್‍ಗಳು ಸಿಗುತ್ತವೆ ಎಂದು ಅವರು ಹೇಳಿದರು.

ಪ್ರತಿ ಸಮುದಾಯ ಕೇಂದ್ರದ 30 ಬೆಡ್‍ಗಳ ಪೈಕಿ 5 ಬೆಡ್‍ಗಳನ್ನು ಅಧಿಕ ಆಮ್ಲಜನಕ ಸಾಂದ್ರತೆ (ಹೆಡೆನ್ಸಿಟಿ ಆಕ್ಸಿಜನ್)ಯುಳ್ಳ  ಬೆಡ್‍ಗಳನ್ನಾಗಿ ಮಾಡಲಾಗುವುದು. ಜತೆಗೆ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ 50 ಐಸಿಯು ಬೆಡ್‍ಗಳ ವ್ಯವಸ್ಥೆ ಮಾಡಲಾಗುವುದು. ಈ ಎಲ್ಲ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಎರಡನೇ ಅಲೆಯಲ್ಲಿ ನಾವು ತತ್ತರಿಸಿದ್ದೇವೆ. ಮೂರನೆ ಅಲೆಯ ಬಗ್ಗೆ ಅಲಕ್ಷ್ಯ ಮಾಡುವುದು ಬೇಡ. ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡುವುದು ಬೇಡ. ಹಳ್ಳಿ ಮಟ್ಟದಿಂದಲೇ ಆರೋಗ್ಯ ಮೂಲ ಸೌಕರ್ಯವನ್ನು ಹೆಚ್ಚಿಸುತ್ತಾ ಬರಬೇಕು ಎಂದು ಅವರು ಹೇಳಿದರು.

ವಾರ್ ರೂಂಗೆ ವ್ಯಾಕ್ಸಿನೇಷನ್ ಲಿಂಕ್: ಈಗ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ಕಾರ್ಯ ಶುರುವಾಗಿದೆ. ಎಲ್ಲರಿಗೂ ತಪ್ಪದೇ ಲಸಿಕೆ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಕೋವಿಡ್ ವಾರ್ ರೂಂಗೆ ಕೋವಿಡ್ ವ್ಯಾಕ್ಸಿನೇಷನ್ ಮಾಹಿತಿಯನ್ನು ಅಪ್‍ಲೋಡ್ ಮಾಡಲಾಗುವುದು. ಎಲ್ಲ ಮಾಹಿತಿಯೂ ಅಲ್ಲಿ ಸಿಗಬೇಕು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಆಕ್ಸಿಜನ್ ಸಾಂದ್ರಕ ಖರೀದಿ: ಈಗಾಗಲೇ 3,000 ಆಮ್ಲಜನಕ ಸಾಂದ್ರಕಗಳನ್ನು (ಆಕ್ಸಿಜನ್ ಕಾನ್ಸನ್‍ಟ್ರೇಟರ್) ಖರೀದಿಗೆ ಆದೇಶ ಕೊಡಲಾಗಿದೆ. ಇನ್ನು 10,000 ಖರೀದಿಗೆ ಬೇಡಿಕೆ ಸಲ್ಲಿಸುವಂತೆ ಸೂಚಿಸಿದ್ದೇನೆ. ಈಗ ಪ್ರತಿ ದಿನ 40,000 ರಾಟ್ ಕಿಟ್ ದಿನಕ್ಕೆ ಪೂರೈಕೆ ಆಗತ್ತಿವೆ. ಇನ್ನೂ ಹೆಚ್ಚು ಖರೀದಿಗೆ ಟೆಂಡರ್ ಕರೆಯಲಾಗುತ್ತಿದೆ. ಇದೇ ವೇಳೆ 5 ಲಕ್ಷ ಡೋಸ್ ರೆಮಿಡಿಸಿವರ್ ಖರೀದಿಗೆ ಗ್ಲೋಬಲ್ ಟೆಂಡರ್ ಕರೆಯಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ವೈದ್ಯ ವಿದ್ಯಾರ್ಥಿಗಳ ನಿಯೋಜನೆ: ಅಂತಿಮ ವರ್ಷದ ವೈದ್ಯಕೀಯ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಅಗತ್ಯವಿದ್ದು, ಕೂಡಲೇ ವೈದ್ಯಕೀಯ ಶಿಕ್ಷಣ ಇಲಾಖೆ ಜತೆ ಮಾತನಾಡುವಂತೆ ಜಾವೇದ್ ಅಖ್ತರ್ ಅವರಿಗೆ ಸೂಚಿಸಿದ್ದೇನೆ. ಆಸ್ಪತ್ರೆಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ವೈದ್ಯರಿಗೆ ಒತ್ತಡ ಹೆಚ್ಚಾಗಿದ್ದು, ಅದನ್ನು ತಗ್ಗಿಸಲು ವೈದ್ಯ ವಿದ್ಯಾರ್ಥಿಗಳ ಸೇವೆ ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಲ್ಯಾಬ್‍ಗಳಿಗೆ ಸ್ಯಾಂಪಲ್ಸ್ ಕೊಡಬೇಕಾದರೆ 500ಕ್ಕೂ ಸ್ಯಾಂಪಲ್ಸ್ ಗೆ ಒಂದೇ ಮೊಬೈಲ್ ಸಂಖ್ಯೆ ಕೊಟ್ಟಿರುವ ಅಂಶ ಬೆಳಕಿಗೆ ಬಂದಿದೆ. ಇನ್ನು ಮುಂದೆ ಹಾಗೆ ಮಾಡಬಾರದು. ಸಾಸ್ಟ್ ಪೋರ್ಟಲ್‍ನಲ್ಲಿಯೇ ಐದು ಜನಕ್ಕಿಂತ ಹೆಚ್ಚು ಜನರ ಸ್ಯಾಂಪಲ್ ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗದಂತೆ ಬದಲಾವಣೆ ಮಾಡಲಾಗುತ್ತದೆ. ಇನ್ನು, ಟೆಲಿಫೋನಿಕ್ ಟ್ರಾಯಾಜಿಕ್ ಮಾಡಬಹುದು ಅಂತ ಕೆಲವರು ಹೇಳುತ್ತಿದ್ದಾರೆ. ಅದು ಬೇಡವೆಂದು ತಿಳಿಸಿದ್ದೇನೆ. ಭೌತಿಕ ಪರೀಕ್ಷೆಯೇ ಮಾಡಬೇಕು ಎಂದು ಅವರು ವಿವರಿಸಿದರು.

ಚಿಕಿತ್ಸೆ ಮತ್ತು ಕೋವಿಡ್ ನಿರ್ವಹಣೆಯಲ್ಲಿ ಸರಕಾರದ ಮಾರ್ಗಸೂಚಿಯನ್ನೆ ಪಾಲಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಮಾಡುವಂತಿಲ್ಲ. ಐಸಿಎಂಆರ್, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಜಾರಿ ಮಾಡುವ ಮಾರ್ಗಸೂಚಿಯೇ ಅಂತಿಮ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ವೆನ್ಲಾಕ್ ಆಸ್ಪತ್ರೆಗೆ 50 ವೆಂಟಿಲೇಟರ್

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 50 ವೆಂಟಿಲೇಟರ್‍ಗಳನ್ನು ತಕ್ಷಣವೆ ಕೊಡುವಂತೆ ಸೂಚನೆ ಕೊಟ್ಟಿದ್ದೇನೆ. ಆ ಭಾಗದಲ್ಲಿ ಸೋಂಕು ಉಲ್ಬಣವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಒತ್ತಡ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News