ಲಾಕ್‌ಡೌನ್ ಸಂದರ್ಭ ರಸ್ತೆಗಳಿದ ಸಾರ್ವಜನಿಕರಿಗೆ ಲಾಠಿ ಏಟು: ಪೊಲೀಸರ ಅತಿರೇಕಕ್ಕೆ ಭಾರೀ ಆಕ್ರೋಶ

Update: 2021-05-10 19:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 10: ರಾಜ್ಯ ಸರಕಾರ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸಿರುವ ಮೊದಲನೆ ದಿನವಾದ ಸೋಮವಾರವೇ ರಾಜ್ಯದೆಲ್ಲೆಡೆ ಪೊಲೀಸರ ವರ್ತನೆ ಅತಿರೇಕವಾಗಿ ಕಂಡು ಬಂದಿದ್ದು, ಲಾಠಿ ಏಟಿನ ನಡೆಗೆ ಸಾರ್ವಜನಿಕರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಸರಕಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, 10 ಗಂಟೆಯ ಮೇಲೆ ರಸ್ತೆಗೆ ಬರುವವರೆಲ್ಲರೂ ಅನಾವಶ್ಯಕವಾಗಿ ಓಡಾಟ ನಡೆಸುತ್ತಿದ್ದಾರೆಂದು ಭಾವಿಸಿ ಅನೇಕ ಭಾಗಗಳಲ್ಲಿ ಪೊಲೀಸರು ಸಾರ್ವಜನಿಕರನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆಗಳು ವರದಿಯಾಗಿವೆ.

ರಾಜಧಾನಿ ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರ್ಗಿ, ಬೀದರ್ ಸೇರಿದಂತೆ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸರು ಸುಖಾಸುಮ್ಮನೆ ಲಾಠಿ ಬೀಸಿ, ವಾಹನಗಳನ್ನು ಜಪ್ತಿ ಮಾಡಿರುವ ಆರೋಪಗಳು ಕೇಳಿಬಂದಿವೆ. ಜತೆಗೆ ಕೋವಿಡ್ ಕಠಿಣ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನ ಸಾಮಾನ್ಯರನ್ನು ಅಪರಾಧಿಗಳಂತೆ ನಡೆಸಿಕೊಂಡು ಶಿಕ್ಷೆ ಕೊಡಲು ಪೊಲೀಸರಿಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಇಲ್ಲಿನ ಬೆಳಗಾವಿಯ ಗಣಪತಿ ಬೀದಿ, ಶನಿವಾರ ಪೇಟೆ, ತರಕಾರಿ ಮಾರುಕಟ್ಟೆ ಹಾಗೂ ಮುಖ್ಯ ಮಾರ್ಕೆಟ್‍ನಲ್ಲಿ ವ್ಯಾಪಾರ ವಹಿವಾಟಿಗೆ ಮುಂದಾಗುತ್ತಿದ್ದವರ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದರು. ತದನಂತರ ಮನೆಗೆ ತೆರಳುತ್ತಿದ ಕೆಲ ವ್ಯಾಪಾರಿಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ ಎನ್ನುವ ದೂರು ಕೇಳಿಬಂದಿದೆ.

ವ್ಯಾಪಾರ ಮುಗಿಸಿ ಮನೆಗೆ ತೆರಳುವುದಕ್ಕೆ 11ರಿಂದ 12 ಗಂಟೆ ಆಗುತ್ತದೆ. ಆದರೆ, ಆಗ ನಮ್ಮನ್ನು ಅಡ್ಡಗಟ್ಟಿ ಪೊಲೀಸರು ಪ್ರಶ್ನಿಸಿದರೂ, ವ್ಯಾಪಾರ ಮುಗಿಸಿ ಬರುತ್ತಿದ್ದೇವೆ ಎಂದರೂ, ಕೇಳದೆ, ಲಾಠಿ ಏಟು ನೀಡಿದರು ಎಂದು ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತೊಂದರೆಗೆ ಸಿಕ್ಕ ಡಿ ದರ್ಜೆ ನೌಕರರು, ಪೌರಕಾರ್ಮಿಕರು: ಇನ್ನು, ರಾಜಧಾನಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿರುವ ಪೊಲೀಸರು, ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಗುರುತಿನ ಚೀಟಿ ಇಲ್ಲದೆ ಡಿ ದರ್ಜೆ ನೌಕರರು, ಪೌರ ಕಾರ್ಮಿಕರು ತೊಂದರೆಗೆ ಸಿಲುಕಿದರು.

ನಗರವೊಂದರಲ್ಲಿಯೇ 2 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರೆ, ಇನ್ನು ಕೆಲವರಿಗೆ ಲಾಠಿ ಏಟು ಬಿದ್ದವು. ಈ ಸಂದರ್ಭದಲ್ಲಿ ಬೆಸ್ಕಾಂ ಕಾರು ಚಾಲಕನೋರ್ವ ಆಕ್ರೋಶ ಹೊರಹಾಕಿ, ಸಣ್ಣಪುಟ್ಟ ಕೆಲಸ ಮಾಡುವವರಿಗೆ ಯಾವುದೇ ಗುರುತಿನ ಚೀಟಿ ಇರುವುದಿಲ್ಲ. ಅಂತಹವರನ್ನೇ ಪೊಲೀಸರು ಗುರಿಯಾಗಿಸಿಕೊಂಡಿದ್ದಾರೆ ಎಂದು ದೂರಿದರು.

ಪ್ರಮಾಣ ವಚನ ಬೋಧನೆ: ಇಲ್ಲಿನ ಕೃಪಾನಿಧಿ ಸರ್ಕಲ್‍ನಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಇನ್ನು ಮುಂದೆ ಕೋವಿಡ್ ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ವಚನ ಬೋಧಿಸಿದ ಘಟನೆ ನಡೆಯಿತು. ಅದೇ ರೀತಿ, ಅನಗತ್ಯವಾಗಿ ಓಡಾಡುತ್ತಿದ್ದ ಆಟೊ ಚಾಲಕರಿಗೆ ಇಲ್ಲಿನ ಕೆಆರ್ ಮಾರ್ಕೆಟ್ ಠಾಣಾ ಪೊಲೀಸರು ಬಸ್ಕಿ ಹೊಡಿಸಿದರು.

'ಪೊಲೀಸರಿಗೆ ಶಿಕ್ಷಿಸುವ ಅಧಿಕಾರವಿಲ್ಲ'

ಈ ಎರಡನೇ ಅಲೆಯ ಲಾಕ್‍ಡೌನ್ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ನಿಯಮ ಮೀರಿ ಹೊರಗೆ ಓಡಾಡುವ ಸಂದರ್ಭದಲ್ಲಿ ಕರ್ನಾಟಕದ ಪೊಲೀಸರು ಅವರನ್ನು ಸೌಜನ್ಯದಿಂದ ವಿಚಾರಿಸಿ, ಅವರು ನಿಯಮ ಮೀರಿದ್ದ ಪಕ್ಷದಲ್ಲಿ ದಂಡ ವಿಧಿಸಬೇಕು ಅಥವಾ ಪ್ರಕರಣ ದಾಖಲಿಸಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಆದರೆ, ಪೊಲೀಸರಿಗೆ ಶಿಕ್ಷಿಸುವ ಅಧಿಕಾರವಿಲ್ಲ.

-ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

ಜನತೆ ದಂಗೆ ಏಳುವ ಸಂಭವ: ಕಾಂಗ್ರೆಸ್

ಪೊಲೀಸರ ಲಾಠಿ ಏಟು ಕುರಿತು ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಪೊಲೀಸರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆ ಹೊರತು ದೌರ್ಜನ್ಯಕ್ಕೆ ಇಳಿಯಬಾರದು. ಕಳೆದ ವರ್ಷ ಲಾಕ್‍ಡೌನ್ ಮಾಡಿದ ಹಾನಿಯಿಂದ ಇನ್ನೂ ಸುಧಾರಿಸಿಕೊಂಡಿಲ್ಲ. ಈ ಹೊತ್ತಿನಲ್ಲಿ ಪೊಲೀಸರು ಸಂಯಮದಿಂದ ವರ್ತಿಸದೆ ಹೋದರೆ ಜನತೆ ದಂಗೆ ಏಳುವ ಸಂಭವವಿದೆ ಎಂದು ತಿಳಿಸಿದೆ.

ದೂರು ಸಲ್ಲಿಕೆ

ಪೊಲೀಸರು ಸಾರ್ವಜನಿಕರ ಮೇಲೆ ದರ್ಪ ತೋರುತ್ತಿರುವ ಘಟನೆಗಳು ವರದಿಯಾಗಿದ್ದು, ಈ ಸಂಬಂಧ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ, ಜನರೊಂದಿಗೆ ಸೌಮ್ಯವಾಗಿ ವರ್ತಿಸಲು ತಾಕೀತು ಮಾಡುವಂತೆ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಕೀಲೆ ಸುಧಾ ಕಾಟವಾ ದೂರು ಸಲ್ಲಿಕೆ ಮಾಡಿದ್ದಾರೆ.

ಸರಕಾರ, ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ ವಕೀಲ ಉಮಾಪತಿ

ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೆ ತರುವ ನೆಪದಲ್ಲಿ ಪೊಲೀಸರು ಸಾರ್ವಜನಿಕರ ಮೇಲೆ ಲಾಠಿ ಪ್ರಹಾರ ನಡೆಸುತ್ತಿದ್ದು, ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ವಕೀಲರೊಬ್ಬರು ಸರಕಾರ ಹಾಗೂ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ.

ಈ ಕುರಿತು ನಗರದ ವಕೀಲ ಎಸ್.ಉಮಾಪತಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಪತ್ರದಲ್ಲಿ, ಸರಕಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಿಲ್ಲ. ಅಗತ್ಯ ಸೇವೆ ಮತ್ತು ಚಿಕಿತ್ಸೆಗಳಿಗೆ ಸಂಚರಿಸಲು ಅವಕಾಶ ಕೊಟ್ಟಿದೆ. ಹಾಗಿದ್ದೂ ಪೊಲೀಸರು, ಜನರು ಯಾವ ಕಾರಣಕ್ಕೆ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಪಡೆಯುವ ಮುನ್ನವೇ ದಾಳಿ ಮಾಡುತ್ತಿದ್ದಾರೆ. ನಾಗರಿಕರ ವಯಸ್ಸು, ಲಿಂಗ, ಸ್ಥಿತಿ ಯಾವುದನ್ನೂ ಲೆಕ್ಕಿಸದೇ ಹಲ್ಲೆ ಮಾಡುತ್ತಿದ್ದಾರೆ. ಇದನ್ನು ದೃಶ್ಯ ಮಾಧ್ಯಮಗಳು ಯತಾವತ್ತಾಗಿ ಬಿತ್ತರಿಸುತ್ತಿವೆ. ಜನರು ಈಗಾಗಲೇ ಕೋವಿಡ್ ಸೋಂಕಿನಿಂದಾಗಿ ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇದನ್ನು ನಾಗರಿಕರ ಮೇಲೆ ಲಾಠಿ ಬೀಸುವ ಮುನ್ನ ಪೊಲೀಸರು ಅರ್ಥ ಮಾಡಿಕೊಳ್ಳಬೇಕಿದೆ.

ಆದರೆ, ಪೊಲೀಸರು ಮಾತ್ರ ಜನ ಯಾವ ಕಾರಣಕ್ಕಾಗಿ ಹೊರಗೆ ಬಂದಿದ್ದಾರೆ ಎಂಬುದನ್ನು ತಿಳಿಯದೆ ಲಾಠಿ ಪ್ರಹಾರ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವವರ ಮೇಲೆ ದಾಳಿ ಮಾಡುವ ಪೊಲೀಸರು ಕಾರುಗಳಲ್ಲಿ ಸಂಚರಿಸುವವರನ್ನು ಪ್ರಶ್ನಿಸುತ್ತಿಲ್ಲ. ಇಂತಹ ತಾರತಮ್ಯ ತೋರುವ ಪೊಲೀಸರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಅಲ್ಲದೇ, ವಿಪತ್ತು ನಿರ್ವಹಣಾ ಕಾಯ್ದೆಯಡಿ ರೂಪುಗೊಂಡಿರುವ ಸಕ್ಷಮ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಪೊಲೀಸರಿಗೆ ಕೆಲ ಅಧಿಕಾರ ನೀಡಲಾಗಿದೆ. ಐಪಿಸಿ ಸೆಕ್ಷನ್ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 51ರಿಂದ 60 ರ ಅಡಿ ಮಾತ್ರ ಪೊಲೀಸರು ಅಧಿಕಾರ ಚಲಾಯಿಸುವ ಅಧಿಕಾರ ಹೊಂದಿದ್ದಾರೆಯೇ ಹೊರತು, ಮಾರ್ಗಸೂಚಿಗಳನ್ನು ಜಾರಿ ಮಾಡುವ ನೆಪದಲ್ಲಿ ಅನಾಗರಿಕವಾಗಿ ವರ್ತಿಸಲು ಯಾವುದೇ ಅಧಿಕಾರವಿಲ್ಲ. ಸಿಆರ್‍ಪಿಸಿ ಸೆಕ್ಷನ್ 144 ರ ಪ್ರಕಾರ ಲಾಠಿ ಪ್ರಹಾರ ಮಾಡುವ ಮತ್ತು ದೈಹಿಕವಾಗಿ ಹಲ್ಲೆ ನಡೆಸುವ ಯಾವುದೇ ಅಧಿಕಾರವಿಲ್ಲ, ಪೊಲೀಸರ ಈ ನಡೆ ಸಂವಿಧಾನದ ವಿಧಿ 21ರಡಿ ಬರುವ ಜೀವಿಸುವ ಹಕ್ಕಿನ ಮೇಲೆ ಹಾಗೂ ಮಾನವ ಹಕ್ಕುಗಳ ಮೇಲಿನ ದೌರ್ಜನ್ಯವಾಗಿದೆ. ಹೀಗಾಗಿ, ಪೊಲೀಸರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿದ್ದಾರೆ.

ಅಲ್ಲದೇ, ಸರಕಾರ ಸಾರ್ವಜನಿಕರಿಗೆ ಅಗತ್ಯ ಆಶ್ರಯ, ಆಹಾರ, ಕುಡಿಯುವ ನೀರು, ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲು ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಜನರ ಅಗತ್ಯ ಸಂಚಾರಕ್ಕೂ ನಿರ್ಬಂಧ ವಿಧಿಸುವ ಮೂಲಕ, ಹಿಂಸಿಸುವ ಮೂಲಕ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ, ಪೊಲೀಸರ ಅಮಾನವೀಯ ನಡವಳಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ನಿರ್ದೇಶಿಸಬೇಕು. ಒಂದು ವೇಳೆ ಇಂತಹುದೇ ದೌರ್ಜನ್ಯ ಮುಂದುವರಿಸಿದಲ್ಲಿ ಅದನ್ನು ನ್ಯಾಯಾಲಯದ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News