ಕೋವಿಡ್ ಲಸಿಕೆ ಅಭಾವ: ತುರ್ತು ಕ್ರಮ ಕೈಗೊಳ್ಳಲು ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2021-05-11 11:52 GMT

ಬೆಂಗಳೂರು, ಮೇ 11: ಒಂದು ಕಡೆ ಕೊರೋನ ಸೋಂಕು ಉಲ್ಬಣಿಸುತ್ತಿದೆ. ಮತ್ತೊಂದು ಕಡೆ 26 ಲಕ್ಷ ಜನರಿಗೆ ಎರಡನೆ ಡೋಸ್ ನೀಡಲು ಔಷಧಿಯೇ ಇಲ್ಲ ಎಂಬ ರಾಜ್ಯ ಸರಕಾರದ ಹೇಳಿಕೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಕೂಡಲೇ ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಲಸಿಕೆ ಹಾಕಲು ರಾಜ್ಯದಲ್ಲಿ ನೀಲನಕ್ಷೆ ರೂಪಿಸಬೇಕು ಎಂದು ನಿರ್ದೇಶಿಸಿದೆ.

ಕೊರೋನ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ರಾಜ್ಯ ಸರಕಾರದ ಪರ ವಾದಿಸಿದ ವಕೀಲರು, ರಾಜ್ಯದಲ್ಲಿ 65 ಲಕ್ಷ ಜನರಿಗೆ 2ನೆ ಬಾರಿ ಕೋವಿಡ್ ಲಸಿಕೆ ನೀಡಬೇಕು. ಇವರಲ್ಲಿ 26 ಲಕ್ಷ ಜನರಿಗೆ ತಕ್ಷಣವೇ ಲಸಿಕೆ ನೀಡಬೇಕಿದೆ. ಆದರೆ, ವ್ಯಾಕ್ಸಿನ್ ಕೊರತೆ ಇದ್ದು, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು 18-44 ವರ್ಷದವರಿಗೆ ಲಸಿಕೆ ನೀಡಲು ರಾಜ್ಯ ಸರಕಾರ 2 ಕೋಟಿ ಕೋವಿಶೀಲ್ಡ್ ಹಾಗೂ 1 ಕೋಟಿ ಕೊವ್ಯಾಕ್ಸಿನ್‍ಗೆ ಬೇಡಿಕೆ ಸಲ್ಲಿಸಿದೆ. ಆದರೆ, 6.50 ಲಕ್ಷ ಡೋಸ್ ಅಷ್ಟೇ ಪೂರೈಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ಸರಕಾರದ ಮಾಹಿತಿಯಂತೆ ರಾಜ್ಯದಲ್ಲಿ 1.72 ಕೋಟಿ ಮಂದಿ 44 ವಯಸ್ಸಿಗಿಂತ ಮೇಲಿನವರಿದ್ದು, ಇವರಲ್ಲಿ 65 ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕಿದ್ದು, ಎರಡನೇ ಬಾರಿ ಲಸಿಕೆ ಹಾಕಲು ಔಷಧಿ ಲಭ್ಯವಿಲ್ಲ. ಮೊದಲನೇ ಡೋಸ್ ತೆಗೆದುಕೊಂಡ ತಿಂಗಳಲ್ಲಿ 2ನೆ ಡೋಸ್ ಕೊಡಬೇಕೆಂದು ಸಲಹೆ ನೀಡಲಾಗಿದೆ. ಆದರೆ, ಮೊದಲ ಡೋಸ್ ತೆಗೆದುಕೊಂಡ 1.60 ಲಕ್ಷ ಮಂದಿಗೆ 8 ವಾರ ಕಳೆದರೂ 2ನೆ ಡೋಸ್ ಸಿಕ್ಕಿಲ್ಲ. 16.63 ಲಕ್ಷ ಜನರಿಗೆ 6 ವಾರ ಕಳೆದರೂ 2ನೆ ಲಸಿಕೆ ನೀಡಿಲ್ಲ. ಒಟ್ಟಾರೆ 26 ಲಕ್ಷ ಮಂದಿಗೆ ತುರ್ತಾಗಿ ಲಸಿಕೆ ನೀಡಬೇಕಿದೆ ಎಂದು ಪೀಠಕ್ಕೆ ತಿಳಿಸಿದರು.

ಕೋವಿಡ್ ಲಸಿಕೆ ಲಭ್ಯವಿಲ್ಲದಿರುವ ವಿಚಾರಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಪೀಠ, 18 ರಿಂದ 44 ವರ್ಷದವರಿರಲಿ, 45 ವರ್ಷ ದಾಟಿದವರಿಗೂ ಲಸಿಕೆ ಸಿಗುತ್ತಿಲ್ಲ. ಹೀಗಾದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮವೇ ವಿಫಲವಾಗಲಿದೆ ಎಂದು ಅಭಿಪ್ರಾಯಪಟ್ಟಿತು. ಇದಕ್ಕೆ ಸಮರ್ಥನೆ ನೀಡಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಎರಡನೇ ಡೋಸ್ ವಿಳಂಬವಾದರೆ ಮೊದಲನೇ ಡೋಸ್ ನಿಷ್ಕ್ರಿಯವಾಗುತ್ತದೆ ಎಂಬುದರ ಬಗ್ಗೆ ವೈಜ್ಞಾನಿಕ ವರದಿಯಿಲ್ಲ. ಲಸಿಕೆ ಒದಗಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.

ರಾಜ್ಯ ಸರಕಾರದ ಸಮರ್ಥನೆಗೆ ತೃಪ್ತವಾಗದ ಪೀಠ, ಕೋವಿಡ್ ಲಸಿಕೆ ಕೊರತೆ ಗಂಭೀರ ಸಮಸ್ಯೆ ಸೃಷ್ಟಿಸಿದೆ. ಹೀಗಾಗಿ 26 ಲಕ್ಷ ಮಂದಿಗೆ ಕೂಡಲೇ 2ನೇ ಡೋಸ್ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಸಿಕೆ ನೀಡುವ ನಿಟ್ಟಿನಲ್ಲಿ ಎಲ್ಲ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ವ್ಯಾಕ್ಸಿನ್ ಕೊರತೆ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಕೋವಿಡ್ ಲಸಿಕೆ ನೀಡಲು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ನೀಲನಕ್ಷೆ ರೂಪಿಸಬೇಕು. ಈ ಸಂಬಂಧ ಕೈಗೊಂಡ ಕ್ರಮಗಳ ವರದಿಯನ್ನು ಮೇ 13ರಂದು ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News