ಕೋವಿಡ್‌ ನಿರ್ವಹಣೆ: ʼಗಾರ್ಡಿಯನ್‌ʼ ಛೀಮಾರಿ ಬಳಿಕ ಮೋದಿಗೆ ʼದಿ ಡೈಲಿ ಗಾರ್ಡಿಯನ್‌ʼ ಪ್ರಶಂಸೆ

Update: 2021-05-12 05:38 GMT

ಹೊಸದಿಲ್ಲಿ: ಭಾರತದಲ್ಲಿನ ಕೋವಿಡ್‌ ಪರಿಸ್ಥಿತಿಯನ್ನು ನಿಯಂತ್ರಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ವಿಫಲವಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ತೀವ್ರ ಟೀಕೆಯನ್ನು ಎದುರಿಸುತ್ತಿದೆ. ಈ ನಡುವೆ ಕೇಂದ್ರ ಸರಕಾರದ ಕೆಲ ಪ್ರಭಾವಿ ಮುಖಂಡರು ಟ್ವಿಟರ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವ ʼಸುದ್ದಿʼಯೊಂದನ್ನು ಪ್ರಕಟಿಸಿರುವುದು ಸದ್ಯ ವ್ಯಂಗ್ಯಭರಿತ ಚರ್ಚೆಗೆ ಕಾರಣವಾಗಿದೆ.

ʼthe daily guardian' ಎಂಬ ವೆಬ್‌ ಸೈಟ್‌ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯು 'ಅವಿರತ ಶ್ರಮʼ ನಡೆಸುತ್ತಿದ್ದಾರೆ ಮತ್ತು ವಿರೋಧ ಪಕ್ಷಗಳು ಅವರ ಕಾರ್ಯ ವೈಖರಿಯ ಕುರಿತು ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಹಿನ್ನೆಲೆಯಿರುವ ಸುದ್ದಿ ಪ್ರಕಟಿಸಿದೆ. ಆದರೆ ಈ ಸುದ್ದಿಯನ್ನು ಕ್ಲಿಕ್‌ ಮಾಡುವಾಗ ಖಾಲಿ ಪುಟ ತೆರೆದಿದ್ದು ಜನರಲ್ಲಿ ಗೊಂದಲ ಉಂಟು ಮಾಡಿ ವ್ಯಂಗ್ಯಕ್ಕೆ ಕಾರಣವಾಗಿದೆ. ಆದರೆ ಬಳಿಕ ಅದನ್ನು ಸರಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.‌

ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮ 'the guardian' ಪ್ರಧಾನಿ ಮೋದಿ ಸರಕಾರದ ವೈಫಲ್ಯವನ್ನು ಬೆಟ್ಟು ಮಾಡಿ ವರದಿ ಮಾಡಿತ್ತು. ಈ ವರದಿಗಳಿಗೆ ಸೆಡ್ಡು ಹೊಡೆಯುವಂತೆ ʼthe daily guardian' ಎಂಬ ವೆಬ್‌ ಸೈಟ್‌ ನಲ್ಲಿ ಈ ಸುದ್ದಿಯನ್ನು ತಯಾರಿಸಿ ಜನರ ನಡುವೆ ಹಂಚಲಾಗಿದೆ ಎಂದು ಸಾಮಾಜಿಕ ತಾಣ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಲೇಖನವನ್ನು ಸುದೇಶ್‌ ವರ್ಮಾ ಎಂಬ ವ್ಯಕ್ತಿಯು ಬರೆದಿದ್ದು, ಅವರು ತಮ್ಮನ್ನು ಬಿಜೆಪಿ ಮಾಧ್ಯಮ ವಿಭಾಗದ ಕನ್ವೀನರ್‌ ಎಂದು ಗುರುತಿಸಿಕೊಂಡಿದ್ದಾರೆ. ದಿ ಡೈಲಿ ಗಾರ್ಡಿಯನ್‌ ಎಂಬ ಈ ವೆಬ್‌ ಸೈಟ್‌ ನ ಟ್ವಿಟರ್‌ ನಲ್ಲಿ ʼದೈನಂದಿನ ಪತ್ರಿಕೆʼ ಎಂದು ಹೇಳಿಕೊಂಡಿದ್ದರೂ ಆ ಹೆಸರಿನಲ್ಲಿ ಯಾವುದೇ ಪತ್ರಿಕೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು the wire ಸುದ್ದಿ ತಾಣ ವರದಿಯಲ್ಲಿ ತಿಳಿಸಿದೆ. ಇದೊಂದು ಫೇಕ್‌ ವೆಬ್‌ ಸೈಟ್‌ ಎಂದು ಹಲವರು ಹೇಳಿಕೆ ನೀಡಿದ್ದರೂ, ಬಿಜೆಪಿಯ ಕೇಂದ್ರ ಸಚಿವ ಎಂ.ಜೆ ಅಕ್ಬರ್‌ ಸ್ಥಾಪಿಸಿದ್ದ ಐಟಿವಿ ನೆಟ್‌ ವರ್ಕ್‌ ನ ಸಂಡೇ ಗಾರ್ಡಿಯನ್‌ ಪತ್ರಿಕೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.

"ಆಸ್ಪತ್ರೆಗೆ ತೆರಳದೆಯೇ 85% ಶೇಖಡಾ ಜನರು ಗುಣಮುಖರಾಗಿದ್ದು, ಕೇವಲ 5% ಜನರು ಮಾತ್ರ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ" ಎಂಬ ಹಲವು ದಾರಿ ತಪ್ಪಿಸುವ ಹೇಳಿಕೆಗಳನ್ನು ಈ ಲೇಖನ ಒಳಗೊಂಡಿದೆ. ಇದಲ್ಲದೇ, ಹಲವು ನಕಲಿ ಮಾಹಿತಿಗಳು ಹಾಗೂ ವಿರೋದ ಪಕ್ಷದ ನಾಯಕರ ಕೈವಾಡದಿಂದಾಗಿ ಪ್ರಧಾನಿ ವಿರುದ್ಧ ಅಪಪ್ರಚಾರಗಳು ನಡೆಯುತ್ತಿವೆ ಎಂದೂ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

"ಯಾರೂ ಕೂಡಾ ಈ ವೈರಸ್‌ ಅನ್ನು ನಿರ್ಮಿಸಿರುವ ಚೈನಾದ ಕುರಿತು ಮಾತನಾಡುತ್ತಿಲ್ಲ. ಇದು ಭಾರತವನ್ನು ದುರ್ಬಲಗೊಳಿಸುವ ಸಲುವಾಗಿ ಚೈನಾ ತಯಾರಿಸಿದ ವೈರಸ್‌ ಆಗಿದೆ. ದುರ್ಬಲ ದೇಶಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಯಾಕೆ ಕೋವಿಡ್‌ ತೀವ್ರತೆ ಹೊಂದಿಲ್ಲ? ಅಲ್ಲಿನ ಜನರೇನು ಶಿಸ್ತುಬದ್ಧರಾಗಿದ್ದಾರೆಯೇ? ಅಥವಾ ಅಲ್ಲಿನ ಆರೋಗ್ಯ ಮೂಲ ಸೌಕರ್ಯಗಳು ಭಾರತಕ್ಕಿಂತ ಉತ್ತಮವಾಗಿದೆಯೇ? ಇದೊಂದು ವಿವರಿಸಲಾಗದ ಸಂಗತಿಯಾಗಿದೆ." ಎಂದೂ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್‌ ಎರಡನೇ ಅಲೆ ಎನ್ನುವುದನ್ನು ನರೇಂದ್ರ ಮೋದಿಯವರನ್ನು ಅಪಮಾನ ಮಾಡುವ ಉದ್ದೇಶದಿಂದಲೇ ತಯಾರಿಸಲಾಗಿದೆ. ಇದು ಜಿಹಾದಿಗಳು ಮತ್ತು ಮಾವೋಯಿಸ್ಟ್‌ ಗಳು ಸೇರಿ  ಭಾರತದ ವಿರುದ್ಧ ನಡೆಸುತ್ತಿರುವ ಒಂದು ಬಯೋಲಾಜಿಕಲ್ ಯುದ್ಧವಾಗಿದೆ. ಇದು ಭಾರತವನ್ನು ನಾಶ ಮಾಡುವ ಉದ್ದೇಶವಾಗಿದೆ ಎಂಬ ವಾಟ್ಸಪ್‌ ನಲ್ಲಿ ಹರಿದಾಡುತ್ತಿರುವ ನಕಲಿ ಸುದ್ದಿಯನ್ನೂ ಈ ಲೇಖನಲ್ಲಿ ಸೇರಿಸಲಾಗಿದೆ.

ವಾಶಿಂಗ್ಟನ್‌ ಪೋಸ್ಟ್‌ ನ , "ಕೋವಿಡ್‌ ಸಾಂಕ್ರಾಮಿಕದ ಕುರಿತಾದಂತೆ ಭಾರತದ ಮಾನವನ್ನು ಉಳಿಸಬೇಕೆ ಅಥವಾ ತನ್ನ ಇಮೇಜ್‌ ಕಾಪಾಡಿಕೊಳ್ಳಬೇಕೆ? ಎಂಬ ಪ್ರಶ್ನೆ ಬಂದಾಗ ಪ್ರಧಾನಿ ಮೋದಿ ತನ್ನ ಇಮೇಜ್‌ ಉಳಿಸಿಕೊಳ್ಳುವುದನ್ನು ಆಯ್ಕೆ ಮಾಡಿಕೊಂಡರು" ಎಂಬ ಸುದ್ದಿ ತುಣುಕನ್ನು ಹಂಚಿಕೊಂಡಿರುವ ಆಲ್ಟ್ ನ್ಯೂಸ್‌ ಮುಖ್ಯಸ್ಥ ಝುಬೈರ್‌, ಪ್ರಧಾನಿ ಮೋದಿಯ ಮಾನ ಕಾಪಾಡಿಕೊಳ್ಳಲು ಬಿಜೆಪಿ ನಾಯಕರು ಪಡುತ್ತಿರುವ ಪಾಡಿನ ಕುರಿತಾದಂತೆ ಟ್ವಿಟರ್‌ ನಲ್ಲಿ ಬೆಳಕು ಚೆಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News