ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆ: ಸಚಿವ ಡಾ.ಕೆ.ಸುಧಾಕರ್

Update: 2021-05-12 14:31 GMT

ಬೆಂಗಳೂರು, ಮೇ 12: ರಾಜಧಾನಿ ಬೆಂಗಳೂರಿನಲ್ಲಿ ಇನ್ನೆರಡು, ಮೂರು ವಾರಗಳಲ್ಲಿ ಕೋವಿಡ್ ಪರಿಸ್ಥಿತಿ ಹತೋಟಿಗೆ ಬರಬಹುದು. ಆದರೆ, ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೆ ಸೋಂಕು, ಅಲೆ ಇದ್ದರೂ ಮೊದಲು ರಾಜಧಾನಿಗಳಲ್ಲಿ ಕಾಣಿಸುತ್ತದೆ. ನಂತರ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದರು.

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಮೊದಲು ಕಾಣಿಸಿಕೊಂಡವು. ಈಗ ಅಲ್ಲಿ ಕಡಿಮೆಯಾಗುತ್ತಿದೆ. ಆದರೆ, ಇತರ ಜಿಲ್ಲೆಗಳಲ್ಲಿ ಹಬ್ಬುತ್ತಿದೆ. ಅದೇ ರೀತಿ, ನಮ್ಮ ರಾಜ್ಯದಲ್ಲಿಯೂ ಆಗಬಹುದು. ಆದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಒಂದು ವೇಳೆ ಕೋವಿಡ್ ಸೋಂಕು ಏರಿಕೆಯಾದರೆ, ಯಾವ ರೀತಿ ನಮ್ಮ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಬೇಕು ಎಂಬುದರ ಬಗ್ಗೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸುಧಾಕರ್ ತಿಳಿಸಿದರು.

ನಗರ ಪ್ರದೇಶಗಳಲ್ಲಿ ಇಷ್ಟೊಂದು ಆಸ್ಪತ್ರೆಗಳು ಇದ್ದರೂ, ವೆಂಟಿಲೇಟರ್, ಆಕ್ಸಿಜನ್, ಹಾಸಿಗೆಗಳ ಕೊರತೆಯನ್ನು ನಾವು ಎದುರಿಸಿದ್ದೇವೆ. ಗ್ರಾಮೀಣ ಮಟ್ಟದಲ್ಲಿ ಇರುವ ಮೂಲಭೂತ ವ್ಯವಸ್ಥೆಯಲ್ಲಿ ನಾವು ಚಿಕಿತ್ಸೆ ನೀಡಬೇಕಾಗುತ್ತದೆ. ಆದುದರಿಂದ, ಕೋವಿಡ್ ಕೇರ್ ಸೆಂಟರ್, ಸ್ಟೆಪ್‍ಡೌನ್ ಆಸ್ಪತ್ರೆಗಳನ್ನು ಸಾಮರ್ಥ್ಯಕ್ಕೆ ಅನುಗುಣವಾಗಿ ಸಿದ್ಧಪಡಿಸಿಟ್ಟುಕೊಳ್ಳುವಂತೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.

ಕೆ.ಆರ್.ಪುರ, ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ಸಿಗುತ್ತಿದೆ ಎಂದು ನೋಡಲು ಆಯಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲು ಪ್ರವಾಸ ಕೈಗೊಳ್ಳಲಾಗಿದೆ. ಈಗಾಗಲೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅಧ್ಯಯನ ನಡೆಸಲಾಗಿದೆ. ಇದೀಗ ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ಭೇಟಿ ನೀಡುವ ಪ್ರವಾಸ ಹಮ್ಮಿಕೊಂಡಿದ್ದೇನೆ ಎಂದು ಸುಧಾಕರ್ ಹೇಳಿದರು.

ಕಳೆದ 6-7 ತಿಂಗಳಲ್ಲಿ ಪ್ರತಿ ತಾಲೂಕುಗಳಲ್ಲಿ 50 ಆಕ್ಸಿಜನ್ ಹಾಸಿಗೆ ಹಾಗೂ 6 ವೆಂಟಿಲೇಟರ್ ಗಳನ್ನು ಕಳುಹಿಸಿಕೊಟ್ಟಿದ್ದೇವೆ. ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಸಿಗೆಗಳು ಹಾಗೂ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸುತ್ತಿವೆ. ಯಾವ ಆಸ್ಪತ್ರೆಗಳಲ್ಲಿ ಇನ್ನೂ ಇವುಗಳನ್ನು ಅಳವಡಿಸಿಕೊಂಡಿಲ್ಲವೋ ಅವರಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಸುಧಾಕರ್ ಹೇಳಿದರು.

ಕಳೆದ ಮೂರ್ನಾಲ್ಕು ತಿಂಗಳಲ್ಲಿ 780 ಜನ ತಜ್ಞರು ಹಾಗೂ 1400 ಜನ ಜನರಲ್ ಡ್ಯೂಟಿ ಡಾಕ್ಟರ್ ಗಳನ್ನು ನೇರ ನೇಮಕಾತಿ ಮಾಡುವ ಪ್ರಯತ್ನ ನಡೆಸಲಾಗಿತ್ತು. ಇದೀಗ ಈ ಪ್ರಕ್ರಿಯೆ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಒಂದೆರೆಡು ದಿನಗಳಲ್ಲಿ ತಜ್ಞರು ಹಾಗೂ ವೈದ್ಯರ ನೇಮಕಕ್ಕೆ ಸಂಬಂಧಿಸಿದಂತೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.

ಬ್ಲಾಕ್ ಫಂಗಸ್ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆ ನಿನ್ನೆಯೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಎರಡು ದಿನಗಳಲ್ಲಿ ಅವರು ಈ ಬಗ್ಗೆ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಆನಂತರ, ಸರಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದು ಸುಧಾಕರ್ ಹೇಳಿದರು.

ಇಡೀ ದೇಶದಲ್ಲಿ ಮೊದಲು ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ನಿರ್ಧಾರ ಕೈಗೊಂಡಿದ್ದು ನಮ್ಮ ರಾಜ್ಯ. ಕಳೆದ ವರ್ಷ 350 ಕೋಟಿ ರೂ.ಗಳನ್ನು ಇದಕ್ಕಾಗಿ ಖರ್ಚು ಮಾಡಿದ್ದೇವೆ. ಉಚಿತ ಟೆಸ್ಟಿಂಗ್, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಉಚಿತ ಆರೈಕೆ, ಉಚಿತ ಔಷಧ, ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಆಸ್ಟ್ರೇಲಿಯ ದೇಶಕ್ಕೆ ಅಲ್ಲಿನ ಪ್ರಜೆ ಹೊರಗಡೆಯಿಂದ ಬಂದರೆ 10-12 ದಿನ ಕ್ವಾರಂಟೈನ್ ಆಗಿರಬೇಕು. ಅದರ ಶುಲ್ಕ 1.80 ಲಕ್ಷ ರೂ.ಗಳನ್ನು ಪಾವತಿಸಬೇಕಿದೆ. ಬೇರೆ ಬೇರೆ ದೇಶಗಳಲ್ಲಿ ಏನಾಗುತ್ತಿದೆ ಅನ್ನೋದನ್ನು ನಾವು ಗಮನ ಹರಿಸಬೇಕು ಎಂದು ಸುಧಾಕರ್ ಹೇಳಿದರು.

ಕೋವಿಡ್ ಲಸಿಕೆ ಬಗ್ಗೆ ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಲಸಿಕೆ ನೀಡಬೇಕು ಅನ್ನೋದು ನಮ್ಮ ಉದ್ದೇಶ. ಕೇಂದ್ರ ಸರಕಾರದಿಂದ ಏನು ಪಡೆಯಬೇಕೋ ಅದನ್ನು ಪಡೆಯುತ್ತಿದ್ದೇವೆ. ಅಲ್ಲದೆ, ಕೇಂದ್ರದ ಸಹಕಾರದಿಂದ ವಿದೇಶಗಳಿಂದಲೂ ಲಸಿಕೆ ತರಿಸಿಕೊಳ್ಳಲು ಪ್ರಯತ್ನ ನಡೆಸಲಾಗಿದೆ ಎಂದು ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News