ಲಸಿಕೆಯ ಅಂತರ ನಿಗದಿ, 30 ಲಕ್ಷ ಸೋಂಕಿತರಿಗೆ ಮೆಡಿಕಲ್ ಕಿಟ್: ಡಾ.ಅಶ್ವತ್ಥ ನಾರಾಯಣ

Update: 2021-05-15 14:50 GMT

ಬೆಂಗಳೂರು, ಮೇ 15: ಕೋವಿಡ್ ವ್ಯಾಕ್ಸಿನ್ 45 ವರ್ಷ ಮೇಲ್ಪಟ್ಟವರಿಗೆ ಎರಡನೆ ಡೋಸ್ ಮಾತ್ರ ನೀಡಲಾಗುವುದು. ಈಗಾಗಲೇ ಮೊದಲನೇ ಡೋಸ್ ಪಡೆದು ಆರು ವಾರ ಆಗಿರುವವರಿಗಷ್ಟೇ ಎರಡನೇ ಡೋಸ್ ಲಸಿಕೆ ಪಡೆಯಲು ಅರ್ಹರು ಎಂದು ರಾಜ್ಯ ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಪಡೆ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಶೀಲ್ಡ್ ವಿಚಾರಕ್ಕೆ ಬಂದರೆ, 45 ವರ್ಷ ಮೇಲ್ಪಟ ವಯೋಮಿತಿಯವರಿಗೆ ಮೊದಲನೇ ಡೋಸ್ ನೀಡಲು ಆದ್ಯತೆ ಕೊಡಲಾಗುತ್ತದೆ. ಮೊದಲ ಡೋಸ್ ಪಡೆದು 12 ವಾರ ಆದವರಿಗೆ ಮಾತ್ರ 2ನೆ ಡೋಸ್ ಪಡೆಯಲು ಅವಕಾಶ ಇರುತ್ತದೆ. ಅದಕ್ಕೂ ಮೊದಲು ಯಾರಿಗೂ ಎರಡನೇ ಡೋಸ್ ಕೊಡುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಯಾರಿಗೆ ಆದ್ಯತೆ ಮೇಲೆ ಲಸಿಕೆ ಕೊಡಬೇಕು ಎಂಬುದನ್ನು ನಿರ್ಧರಿಸಲು ಮೊದಲು ಪಟ್ಟಿ ಸಿದ್ಧ ಮಾಡಲಾಗುವುದು. ಅಂಚೆ ಇಲಾಖೆ, ಕೃಷಿ ಇಲಾಖೆ, ಡೆಲಿವರಿ ಬಾಯ್ಸ್, ಬ್ಯಾಂಕ್ ಸಿಬ್ಬಂದಿ, ಇಂಟರ್‍ನೆಟ್ ಪ್ರೊವೈಡರ್ಸ್ ಸೇರಿ ಅತ್ಯಗತ್ಯ ವಲಯಗಳಲ್ಲಿ ಕೆಲಸ ಮಾಡುವವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಲಸಿಕೆಯ ದಾಸ್ತಾನು ನೋಡಿಕೊಂಡು 18-44 ವರ್ಷ ವಯೋಮಿತಿಯವರಿಗೆ ಯಾವ ದಿನಾಂಕದಿಂದ ಲಸಿಕೆ ಕೊಡಬೇಕು ಎಂಬುದನ್ನು ಕಾರ್ಯಪಡೆ ನಿರ್ಧರಿಸುತ್ತದೆ ಎಂದು ಅವರು ತಿಳಿಸಿದರು.

ಕೋವಿಡ್ ಲಸಿಕೆಗಾಗಿ ಪ್ರತ್ಯೇಕ ಆಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಆ ಆಪ್‍ಅನ್ನು ಕೋವಿನ್ ಪೋರ್ಟಲ್‍ಗೆ ಅನುಸಂಧಾನವಾದ ಮೇಲೆ ಈ ವಯೋಮಿತಿಯವರಿಗೆ ಲಸಿಕೆ ಕೊಡುವುದನ್ನು ಆರಂಭಿಸಲಾಗುವುದು. ಇನ್ನು ಲಸಿಕೆ ಕೊಡುವುದನ್ನು ಆಸ್ಪತ್ರೆಯ ಬದಲಾಗಿ ಆಸ್ಪತ್ರೆಗಳಿಂದ ಹೊರಗೆ ನೀಡಲು ನಿರ್ಧರಿಸಲಾಗಿದೆ. ವಿಶಾಲವಾದ ಶಾಲಾ ಕಟ್ಟಡ, ಶಾಲಾ ಮೈದಾನ, ಕ್ರೀಡಾಂಗಣ ಇತ್ಯಾದಿ ಕಡೆಗಳಲ್ಲಿ ಲಸಿಕೆ ಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದರು.

ರಾಜ್ಯದ 207 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 30 `ಬೆಡ್'ಗಳಿವೆ. ಇದರಲ್ಲಿ 10 `ಬೆಡ್'ಗಳನ್ನು ಐಸಿಯು ಬೆಡ್‍ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಇನ್ನು, ತಾಲೂಕು ಆಸ್ಪತ್ರೆಗಳಲ್ಲಿ 50 ಬೆಡ್ ಐಸಿಯು ಬೆಡ್‍ಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರಲ್ಲಿ 15 ಬೆಡ್‍ಗಳಿಗೆ ವಂಟಿಲೇಟರ್ ಸೌಲಭ್ಯ ಇರುತ್ತದೆ. ಇನ್ನು 6 ಬೆಡ್‍ಗಳನ್ನು ತಾಯಿ-ಮಕ್ಕಳಿಗೆ ಮೀಸಲಿಡಲಾಗುವುದು. ಮೆಡಿಕಲ್ ಕಾಲೇಜು ಇಲ್ಲದ ಜಿಲ್ಲಾ ಕೇಂದ್ರಗಳಲ್ಲಿ ತಲಾ 100 ಬೆಡ್ ಐಸಿಯು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು.

ಕೋವಿಡ್ ಮೆಡಿಕಲ್ ತ್ಯಾಜ್ಯ ವಿಲೇವಾರಿ- ಪ್ರತಿ ಬೆಡ್‍ಗೆ ಗರಿಷ್ಠ 10 ರೂಪಾಯಿ ನೀಡಲು ತೀರ್ಮಾನ ಮಾಡಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಇಷ್ಟು ದಿನ ಇದಕ್ಕೆ ದರ ನಿಗದಿ ಮಾಡಿರಲಿಲ್ಲ ಎಂದ ಅವರು, ವೈದ್ಯಕೀಯ ಬಳಕೆ ಸಾಮಗ್ರಿ ಕೊರತೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಮುಂದಿನ 90 ದಿನಗಳಿಗೆ ಅಗತ್ಯ ಇರುವ ಔಷಧ ಮತ್ತು ಪರಿಕರಗಳನ್ನು ಹಂತ ಹಂತವಾಗಿ 260 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಕಾರ್ಯಪಡೆ ಸಭೆ ಒಪ್ಪಿಗೆ ನೀಡಿದೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಟೆಂಡರ್ ಮೂಲಕ ಇವುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಖಾಸಗಿ ವೈದ್ಯರು ಸಲಹೆ ನೀಡಿದ ಸೋಂಕಿತರಿಗೂ ಸರಕಾರಿ ಮೆಡಿಕಲ್ ಕಿಟ್ ಕೊಡಲಾಗುವುದು ಎಂದು ತಿಳಿಸಿದರು.

'ವೈರಸ್'ನ ಜೆನೆಟಿಕ್ಸ್ ಬದಲಾವಣೆ ಬಗ್ಗೆ ಅಧ್ಯಯನ ನಡೆಸುವ ಜೆನ್ಮಿ ಲ್ಯಾಬ್‍ಗಳನ್ನು ರಾಜ್ಯದ ಆರು ಕಡೆ ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ನಾಲ್ಕು ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಎರಡು, ಆರೋಗ್ಯ ಇಲಾಖೆ ವತಿಯಿಂದ ಈ ಲ್ಯಾಬ್‍ಗಳನ್ನು ತೆರೆಯಲಾಗುವುದು ಎಂದ ಅವರು, ವೈರಸ್ ವರ್ತನೆಯ ಮೇಲೆ ನಿರಂತರ ನಿಗಾ ಇಡಲಾಗಿದೆ ಎಂದರು.

ಕೋವಿಡ್ ಕಾರ್ಯಪಡೆ ಸದಸ್ಯರೂ ಆಗಿರುವ ಸಚಿವರಾದ ಡಾ.ಕೆ.ಸುಧಾಕರ್, ಎಸ್.ಸುರೇಶ್ ಕುಮಾರ್, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಲಸಿಕೆಗೆ ಜಾಗತಿಕ ಟೆಂಡರ್ ಅಂತಿಮ: 2 ಕೋಟಿ ಡೋಸ್ ಲಸಿಕೆ ಖರೀದಿ ಮಾಡುವ ಜಾಗತಿಕ ಟೆಂಡರ್ ಅನ್ನು ಇಂದೇ ಅಂತಿಮಗೊಳಿಸಲಾಗಿದೆ. ತಲಾ 50 ಲಕ್ಷ ಡೋಸ್‍ನಂತೆ ನಾಲ್ಕು ಕಂಪೆನಿಗಳಿಂದ ಖರೀದಿ ಮಾಡಲಾಗುವುದು. ಒಂದೇ ಕಂಪೆನಿಗೆ 2 ಕೋಟಿ ಡೋಸ್ ಪೂರೈಕೆ ಮಾಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ 843 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು, ಇದಕ್ಕೆ ಕಾರ್ಯಪಡೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ಮುಖ್ಯವಾಗಿ ರೆಮ್‍ಡೆಸಿವಿರ್ ನ 5 ಲಕ್ಷ ಡೋಸ್ ಇಂಜೆಕ್ಷನ್ ಖರೀದಿಗೂ ಜಾಗತಿಕ ಟೆಂಡರ್ ಕರೆಯಲು ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಇದಕ್ಕೆ 75 ಕೋಟಿ ರೂ.ಮೀಸಲು ಇಡಲು ಕಾರ್ಯಪಡೆ ಒಪ್ಪಿಗೆ ನೀಡಿದೆ. ಅಲ್ಲದೆ, ಮುಂದಿನ ಮೂರು ತಿಂಗಳಿಗೆ ಅಗತ್ಯವಾದ ಎಲ್ಲ ಔಷಧಿ, 30 ಲಕ್ಷ ಸೋಂಕಿತರಿಗೆ ಮೆಡಿಕಲ್ ಕಿಟ್ ಒದಗಿಸುವುದು, ಮುಂದಿನ 90 ದಿನಗಳಿಗೆ ಬೇಕಾಗಿರುವ 1 ಕೋಟಿ ಆರ್‍ಟಿಪಿಸಿಆರ್ ಕಿಟ್‍ಗಳ ಖರೀದಿ, ಹಾಗೆಯೇ 1 ಕೋಟಿ ಆರ್‍ಎಟಿ ಟೆಸ್ಟ್ ಕಿಟ್ ಹಾಗೂ 1 ಲಕ್ಷ ಪಲ್ಸ್ ಆಕ್ಸಿ ಮೀಟರ್ ಖರೀದಿಗೂ ಕಾರ್ಯಪಡೆ ಒಪ್ಪಿಗೆ ಕೊಟ್ಟಿದೆ ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದರು.

ಬ್ಲ್ಯಾಕ್ ಫಂಗಸ್ ಔಷಧಿಗೆ ಬೇಡಿಕೆ: ಕೋವಿಡ್‍ನಿಂದ ಗುಣಮುಖರಾದವರಲ್ಲಿ ಅದರಲ್ಲೂ ಮುಖ್ಯವಾಗಿ ಮಧುಮೇಹಿಗಳಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮ ವಹಿಸಲಾಗಿದೆ. ಪ್ರತಿ ವಾರ 400 ರೋಗಿಗಳಿಗೆ ಈ ರೀತಿ ಬ್ಲಾಕ್ ಫಂಗಸ್ ಬರುವ ನಿರೀಕ್ಷೆ ಇದೆ ಎಂದು ತಾಂತ್ರಿಕ ಸಮಿತಿ ಅಂದಾಜು ಮಾಡಿದೆ. ಹೀಗಾಗಿ ವಾರಕ್ಕೆ `ಆಂಪ್ಕೋಟೆರಿಸಿನ್' ಔಷಧಿಯ 20,000 ವೈಲ್ಸ್ ಪೂರೈಕೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಬೇಡಿಕೆ ಹೆಚ್ಚಾದ ಕಾರಣಕ್ಕೆ ಈ ಔಷಧಿಯ ಕೊರತೆ ಉಂಟಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News