ಮರು ವ್ಯಾಖ್ಯಾನಿಸಬೇಕಾದ ಶಿಕ್ಷಣ, ಮೌಲ್ಯಮಾಪನ

Update: 2021-05-16 04:36 GMT

ಈ ಬಿಕ್ಕಟ್ಟಿನ ಸಮಯ ಅರ್ಥಪೂರ್ಣ ಶಿಕ್ಷಣ ಎಂದರೇನೆಂಬುದನ್ನು ಮರುವ್ಯಾಖ್ಯಾನಿಸಲು ನಮಗೆ ದೊರೆತ ಒಂದು ಅವಕಾಶವಾಗಿದೆ. ಪುಸ್ತಕದ ಬದನೆಕಾಯಿಯನ್ನಷ್ಟೇ ಕಲಿಯುವ, ಉರುಹೊಡೆಯುವ ಮತ್ತು ಆತಂಕದ ಸದ್ಯದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡು ಚಡಪಡಿಸುವುದನ್ನು ತಡೆಯಲು ಒಂದು ಬದಲಾವಣೆ ತುರ್ತಾಗಿ ತರಬೇಕಾಗಿದೆ. ಕೊರೋನ ಸಾಂಕ್ರಾಮಿಕವು ಭಾರೀ ಪ್ರಮಾಣದಲ್ಲಿ ಹರಡುತ್ತಿರುವಾಗಲೂ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಅಥವಾ ಮುಂದೂಡುವ ಕುರಿತು ಚರ್ಚೆಗಳು ನಡೆದವೇ ಹೊರತು, ಈ ಸಮಸ್ಯೆಗಳಿಗೆ ಪರ್ಯಾಯ ಪರಿಹಾರಗಳೇನು? ಬದಲಿ (ಅಲ್ಟರ್ನೆಟಿವ್)ವ್ಯವಸ್ಥೆಯೇನು? ಎಂಬುದರ ಕುರಿತು ಗಂಭೀರ ಚಿಂತನೆ ನಡೆಯಲಿಲ್ಲ. ಪ್ರಪಂಚ ಈ ಹಿಂದಿನಂತೆ ಇರದೆ ಬದಲಾಗುವುದು ಖಂಡಿತ ಎಂದು ಅನ್ನಿಸುತ್ತಿರುವಾಗ ಇಂದಿನ ಅಭೂತಪೂರ್ವ ಪರಿಸ್ಥಿತಿ ಶೈಕ್ಷಣಿಕ ವ್ಯವಸ್ಥೆ ಹಾಗೂ ಮೌಲ್ಯಮಾಪನಗಳನ್ನು ಮರುವ್ಯಾಖ್ಯಾನಿಸಲು ಒಂದು ವಿಶಿಷ್ಟ ಅವಕಾಶವೆಂದು ಸರಕಾರ ತಿಳಿಯಬೇಕಾಗಿತ್ತು. ಇದಕ್ಕೆ ಬದಲಾಗಿ ಸರಕಾರ ವೈಯಕ್ತಿಕವಾಗಿ ಪರೀಕ್ಷೆ ನಡೆಸುವ, ಆ ಮೂಲಕ ನಮಗೆ ಪ್ರೀತಿಪಾತ್ರರಾದವರ ಜೀವಗಳಿಗೆ ಇನ್ನಷ್ಟು ಬೆದರಿಕೆಯೊಡ್ಡುವ ಬಗ್ಗೆ ಯೋಚಿಸುತ್ತಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶವೂ ಸೇರಿದಂತೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಭವಿಷ್ಯದ ಬಗ್ಗೆ ಆತಂಕಗಳು ಇದ್ದೇ ಇವೆ. ಆದಾಗ್ಯೂ ಇಂದಿನ ಜಾಗತಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಭಾರತ ಚಿಕ್ಕ ಅಥವಾ ದೊಡ್ಡ ಗುಂಪುಗಳಾಗಿ ಜನರು ನೆರೆಯುವುದಕ್ಕೆ ಅವಕಾಶ ನೀಡುವ ಸ್ಥಿತಿಯಲ್ಲಿಲ್ಲ. ಹೀಗಿರುವಾಗ ವರ್ಚುವಲ್ ಶಿಕ್ಷಣ ಸಮಿತಿಗಳೂ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಯೋಚಿಸಲು ಯಾಕೆ ಪ್ರಯತ್ನಿಸುತ್ತಿಲ್ಲ? ಉದಾಹರಣೆಗೆ, ಆನ್‌ಲೈನ್ ಪರೀಕ್ಷೆಗಳನ್ನು ನಡೆಸಿದರೆ ವಿದ್ಯಾರ್ಥಿಗಳು ‘ಚೀಟಿಂಗ್’ ಮಾಡುತ್ತಾರೆ ಎಂಬುದು ಈಗ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಎದುರಾಗಿರುವ ಸವಾಲುಗಳಲ್ಲೊಂದು. ಆದರೆ ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ಸೃಜನಾತ್ಮಕವಾಗಿ, ವಿಮರ್ಶಾತ್ಮಕವಾಗಿ ಯೋಚಿಸಲೇ ಬೇಕಾಗುವ ರೀತಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ವಿನ್ಯಾಸಗೊಳಿಸಿದಲ್ಲಿ ಅವರು ಯಾವುದೇ ಪುಸ್ತಕದಿಂದ ನಕಲು ಹೊಡೆದು ಉತ್ತರಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ.

ಹಾಗೆಯೇ ವಿದ್ಯಾರ್ಥಿಗಳ ಕಲಿಕೆಯ, ಸಾಧನೆಯ ಮೌಲ್ಯಮಾಪನವನ್ನು ಶೈಕ್ಷಣಿಕ ವರ್ಷದ ಉದ್ದಕ್ಕೂ ಮಾಡುವಂತೆ ಶಿಕ್ಷಕರಿಗೆ ಸೂಚಿಸಬಹುದು. ಆಯಾ ಶಾಲೆಗಳು ತಮ್ಮ ವಿದ್ಯಾರ್ಥಿಗಳ ಸಾಧನೆಯನ್ನು ಉತ್ಪ್ರೇಕ್ಷಿಸಿ ದತ್ತಾಂಶಗಳನ್ನು ನೀಡುತ್ತಿವೆ ಎಂದಾದಲ್ಲಿ ಶಾಲೆಗಳ ಒಂದು ಗುಂಪನ್ನು ರಚಿಸಿ ಮೌಲ್ಯಮಾಪನವನ್ನು ಪರಸ್ಪರ ವಿನಿಮಯ ಮಾಡಬಹುದು.

ಇಷ್ಟೇ ಅಲ್ಲದೆ ವಿದ್ಯಾರ್ಥಿಗಳು ಕಾಲೇಜು ಪ್ರವೇಶಕ್ಕೆ ಸಿದ್ಧರಾದಾಗ ಆನ್‌ಲೈನ್ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆಹ್ವಾನಿಸಿ ಅವುಗಳ ನೆರವು ಪಡೆಯಬಹುದು. ವಿದ್ಯಾರ್ಥಿಗಳನ್ನು ಸಹ ಮೌಲ್ಯಮಾಪನ ಹಾಗೂ ಸಹಪಾಠಿಗಳ (ಪಿಯರ್) ಮೌಲ್ಯಮಾಪನದಲ್ಲಿ ತೊಡಗಿಸುವುದು ನಮ್ಮ ಅಂತಿಮ ಗುರಿಯಾಗಬೇಕು.

ಅಕಡಮಿಕ್ ಸಾಧನೆಯೊಂದೇ ವಿದ್ಯಾರ್ಥಿಯ ಬೆಳವಣಿಗೆಯ ಮಾನದಂಡವಾಗಬೇಕೇ ಅಥವಾ ಸಾಮಾಜಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ನೆಲೆಗಳನ್ನು ಆಧರಿಸಿ ವಿದ್ಯಾರ್ಥಿಯ ಯಶಸ್ಸನ್ನು ಮರು ವ್ಯಾಖ್ಯಾನಿಸಲು ಸಾಧ್ಯವೇ ಎಂಬುದು ನಾವು ಪರಿಗಣಿಸಬೇಕಾದ ಪ್ರಶ್ನೆ.

ಈ ಬಿಕ್ಕಟ್ಟಿನ ಸಮಯ ಅರ್ಥಪೂರ್ಣ ಶಿಕ್ಷಣ ಎಂದರೇನೆಂಬುದನ್ನು ಮರುವ್ಯಾಖ್ಯಾನಿಸಲು ನಮಗೆ ದೊರೆತ ಒಂದು ಅವಕಾಶವಾಗಿದೆ. ಪುಸ್ತಕದ ಬದನೆಕಾಯಿಯನ್ನಷ್ಟೇ ಕಲಿಯುವ, ಉರುಹೊಡೆಯುವ ಮತ್ತು ಆತಂಕದ ಸದ್ಯದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡು ಚಡಪಡಿಸುವುದನ್ನು ತಡೆಯಲು ಒಂದು ಬದಲಾವಣೆ ತುರ್ತಾಗಿ ತರಬೇಕಾಗಿದೆ. ಇಂತಹ ಬದಲಾವಣೆಯ ಅವಶ್ಯಕತೆಯನ್ನು ಕೊರೋನ ಬಿಕ್ಕಟ್ಟು ಸೂಚಿಸುತ್ತಿದೆ. ಈ ಬದಲಾವಣೆಯನ್ನು ಪ್ರತಿಪಾದಿಸಿ, ಸಂಘಟಿಸಿ ಅನುಷ್ಠಾನಗೊಳಿಸಲು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ತಜ್ಞರು, ವಿದ್ವಾಂಸರು ಹಾಗೂ ಸಂಶೋಧಕರನ್ನು ಒಳಗೊಂಡ ಶೈಕ್ಷಣಿಕ ಸಮಿತಿಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಬೇಕು. ಉನ್ನತ ಶಿಕ್ಷಣ ಸಂಸ್ಥೆಗಳು ನಡೆಸುವ ಮೌಲ್ಯಮಾಪನಗಳ ಮೂಲಕ ಮೌಲ್ಯಮಾಪನದ ಗುಣಮಟ್ಟವನ್ನು ಹೆಚ್ಚಿಸಿದಾಗ ನಮ್ಮ ಯುವಜನತೆ ಅಂತರ್ ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು. ಈ ಮೂಲಕ ಯುವ ಜನತೆಯನ್ನು ದೇಶಕ್ಕೆ ಎದುರಾಗಿರುವ ಸವಾಲುಗಳನ್ನು ಎದುರಿಸುವ ಕೆಲಸದಲ್ಲಿ ತೊಡಗಿಸಿ ಬಹುತ್ವದ ಹಾಗೂ ಶ್ರೇಣೀಕೃತವಲ್ಲದ ಒಂದು ಭಾರತದ ನಿರ್ಮಾಣವನ್ನು ಸಾಕಾರಗೊಳಿಸಬಹುದು.

ಕೃಪೆ: TheHindu

(ಲೇಖಕರು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿ ಹಾಗೂ ಬ್ಲೂಬೆಲ್ ಸ್ಕೂಲ್ ಇಂಟರ್ ನ್ಯಾಶನಲ್‌ನಲ್ಲಿ ಶಿಕ್ಷಕರಾಗಿದ್ದಾರೆ)

Writer - ಕಾಮಿಯಾ ಕುಮಾರ್

contributor

Editor - ಕಾಮಿಯಾ ಕುಮಾರ್

contributor

Similar News