ಆಸ್ಪತ್ರೆ ಬೆಡ್‌ನಿಂದಲೇ ಬಡಬಗ್ಗರಿಗೆ ’ಈದ್ ಉಡುಗೊರೆ’ ವ್ಯವಸ್ಥೆ ಮಾಡಿದ ಮಹಿಳೆ!

Update: 2021-05-17 04:54 GMT
ಶಾಹೀನ್ ಜಮಾದಾರ್ (Photo credit: The Times of India)

ಮುಂಬೈ, ಮೇ 17: ಈ ಬಾರಿಯ ಈದುಲ್ ಫಿತ್ರ್ ನ ಕೆಲ ದಿನಗಳ ಮೊದಲು ಶಾಹೀನ್ ಜಮಾದಾರ್ ಅವರ ಫೋನ್ ಒಂದೇ ಸವನೆ ರಿಂಗಣಿಸುತ್ತಿತ್ತಿತ್ತು. ಧಾರಾವಿಯ ಹಲವು ಮಂದಿ ಅವರನ್ನು ಎಲ್ಲಿ ಕಣ್ಮರೆಯಾಗಿದ್ದೀರಿ ಎಂದು ವಿಚಾರಿಸುತ್ತಿದ್ದರು. ಹಬ್ಬದ ಸಮಯದಲ್ಲಿ ಅವರಿಗೆ ಪಡಿತರ ಮತ್ತು ಹೊಸ ಬಟ್ಟೆ ಅಗತ್ಯವಿತ್ತು. ಲಾಕ್‌ಡೌನ್ ಆರಂಭದಿಂದ ಶಾಹೀನ್ ಬಡಕುಟುಂಬಗಳಿಗೆ ಸ್ವಯಂಸೇವಾ ಸಂಸ್ಥೆಯೊಂದರ ಮೂಲಕ ಇವುಗಳನ್ನು ಒದಗಿಸುತ್ತಾ ಬಂದಿದ್ದರು.

ಶಾಹೀನ್(38) ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ 12 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ತಾನು ಆಸ್ಪತ್ರೆಯಲ್ಲಿದ್ದುದರಿಂದ ಬಡಕುಟುಂಬಗಳು ಈದ್ ಆಚರಿಸುವುದು ಅಸಾಧ್ಯ ಎಂಬ ಕಾರಣಕ್ಕೆ ಆಸ್ಪತ್ರೆ ಬೆಡ್‌ನಿಂದಲೇ ಈ ಬಡಕುಟುಂಬಗಳಿಗೆ ಅಗತ್ಯ ಆಹಾರಧಾನ್ಯ ಮತ್ತು ಬಟ್ಟೆ ಬರೆ ವ್ಯವಸ್ಥೆ ಮಾಡುವ ಮೂಲಕ ಶಾಹೀನ್ ತಮ್ಮ ನೋವಿನ ನಡುವೆಯೂ ಬಡಕುಟುಂಬಗಳು ನಲಿಯುವಂತೆ ಮಾಡಿದರು. ಮಂಗಳವಾರ ರಾತ್ರಿ ಚಂದ್ರದರ್ಶನವಾಗುವ ಮುನ್ನ, ಸಹಾಯಹಸ್ತ ಯಾಚಿಸಿದ್ದ 170 ಬಡ ಕುಟುಂಬಗಳಿಗೆ ರಮಝಾನ್ ಉಡುಗೊರೆ ಸೇರಿತ್ತು!

"ನಾನು ಉಳಿದುಕೊಂಡಿದ್ದೇನೆ. ಆದರೆ ಆದರೆ ಇವರು ಅನ್ನ, ನೀರು ಇಲ್ಲದೇ ಹಸಿವಿನಿಂದ ಸಾಯುವ ಸ್ಥಿತಿ ಇತ್ತು" ಎಂದು ಐಸೊಲೇಶನ್ ಕೇಂದ್ರದಿಂದ ದೂರವಾಣಿ ಮೂಲಕ ಮಾತನಾಡಿದ ಶಾಹೀನ್ ವಿವರಿಸಿದರು. ಇವರ ಈ ಪ್ರಯತ್ನ ಧಾರಾವಿಯ ಇತರ ನಿವಾಸಿಗಳಿಗೂ ಸ್ಫೂರ್ತಿಯಾಯಿತು. ಇವರೆಲ್ಲರೂ ಸ್ಥಳೀಯ ಮಸೀದಿಗೆ ಈದ್ ಗಾಗಿ ನೀಡಲು ಸಂಗ್ರಹಿಸಿದ್ದ ಅಲ್ಪಸ್ವಲ್ಪ ಹಣವನ್ನು ಸ್ವಯಂಸೇವಾ ಸಂಸ್ಥೆಗೆ ದಾನ ಮಾಡಿದರು.

ಧಾರಾವಿಯಲ್ಲೇ ವಾಸಿಸುವ ಶಾಹೀನ್ ಕಳೆದ ಆರು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2020ರಲ್ಲಿ ಕ್ರೌಡ್‌ ಫಂಡಿಂಗ್ ಸಂಸ್ಥೆಯಾದ 'ಎನ್‌ರಿಚ್ ಲೈವ್ಸ್ ಫೌಂಡೇಶನ್'ಗೆ ಸೇರಿಕೊಂಡರು. ವಕೀಲೆ, ಐಐಟಿ ಎಂಜಿನಿಯರ್ ಮತ್ತು ಉದ್ಯಮಶೀಲ ಮಹಿಳೆ ಸೇರಿ ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಆರಂಭದಿಂದ ಇದುವರೆಗೆ 8,000 ಕಿಟ್‌ಗಳನ್ನು ಧಾರಾವಿಯಲ್ಲಿ ನೀಡಿದ್ದೇವೆ. ಜತೆಗೆ ಬಟ್ಟೆಬರೆ, ತಿನಿಸುಗಳು ಹಾಗೂ 10 ಸಾವಿರ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿದ್ದೇವೆ ಎಂದು ಸಂಸ್ಥೆಯ ಸಹ ಸಂಸ್ಥಾಪಕಿ ಶಿವಾನಿ ಉಪಾಧ್ಯಾಯ ಹೇಳುತ್ತಾರೆ. ಧಾರಾವಿಯ 300 ಮಕ್ಕಳಿಗೆ ಮೂಲಭೂತ ಇಂಗ್ಲಿಷ್ ಮತ್ತು ಗಣಿತದ ಆನ್‌ಲೈನ್ ಶಿಕ್ಷಣವನ್ನೂ ಈ ಸಂಸ್ಥೆ ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News