ಬಿಪಿಎಲ್ ಕುಟುಂಬಗಳಿಗೆ ಕೂಡಲೇ 10 ಸಾವಿರ ರೂ.ನೆರವು ನೀಡಲು 'ಮೂಲ ನಿವಾಸಿಗಳ ಒಕ್ಕೂಟ' ಒತ್ತಾಯ

Update: 2021-05-17 12:46 GMT

ಬೆಂಗಳೂರು, ಮೇ 17: ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಹೇರಿರುವ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಿಪಿಎಲ್ ಕುಟುಂಬಗಳಿಗೆ ತಲಾ 10 ಸಾವಿರ ರೂಗಳನ್ನು ಕೂಡಲೇ ನೀಡಬೇಕು. ಪ್ರತಿ ಕುಟುಂಬಕ್ಕೂ ತಿಂಗಳಿಗೆ 10 ಕೆಜಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ದಿನಸಿ ಪದಾರ್ಥದ ನೀಡಬೇಕು. ನಿರುದ್ಯೋಗಿ ವಲಸಿಗರಿಗೆ ಸಹಾಯಮಾಡಲು ನರೇಗಾ ಕನಿಷ್ಠ ಕೂಲಿ ಮತ್ತು ಕೆಲಸದ ದಿನಗಳನ್ನು ಹೆಚ್ಚಿಸಬೇಕು ಎಂದು ಮೂಲನಿವಾಸಿ ಮಹಾ ಒಕ್ಕೂಟ ಆಗ್ರಹಿಸಿದೆ.

ಸೋಮವಾರ ಆನ್‍ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡರು, ಕೂಲಿ ಕಾರ್ಮಿಕರು, ಕುಶಲಕರ್ಮಿಗಳು ಟ್ಯಾಕ್ಸಿ, ರಿಕ್ಷಾ ಡ್ರೈವರ್‍ಗಳು ಸೇರಿ ದುಡಿಯುವ ವರ್ಗದವರಿಗೂ ನೆರವು ಒದಗಿಸಬೇಕು. ಸಣ್ಣ, ಅತಿಸಣ್ಣ, ಸೂಕ್ಷ್ಮ ಗೃಹ ಕೈಗಾರಿಕೆಯ, ವಾಹನ ಮಾಲಕರ ಸಭೆ ನಡೆಸಿ ಸೂಕ್ತ ಪ್ಯಾಕೇಜ್ ನೀಡಬೇಕು. ವಿದ್ಯುತ್, ಗ್ಯಾಸ್, ನೀರಿನ ಬಿಲ್ಲನ್ನು ಉಚಿತ ಮಾಡಬೇಕು. ಎಲ್ಲ ವರ್ಗದವರ ಸಾಲದ ಕನಿಷ್ಠ ಮೂರು ಕಂತುಗಳನ್ನು ಮನ್ನಾ ಮಾಡಬೇಕು. ದೇಶದ ಎಲ್ಲರಿಗೂ ನೀಡಲು ಹಂಚಿಕೆ ಮಾಡಿರುವ 35 ಸಾವಿರ ಕೋಟಿ ರೂ.ಗಳನ್ನು ಸದ್ಬಳಕೆ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ರಾಜ್ಯದ ಆಮ್ಲಜನಕ ಉತ್ಪಾದನೆಯನ್ನು ರಾಜ್ಯಕ್ಕೆ ಮೀಸಲಿಡಬೇಕು. ರೆಮ್‍ಡೆಸಿವಿರ್ ಕಾಳಸಂತೆ ಮಾರಾಟ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೊರೋನ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು. ವೈದ್ಯರು, ನರ್ಸುಗಳು, ಪೊಲೀಸ್, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಇವರ ಜೊತೆಗೆ ಅಂಬುಲೆನ್ಸ್ ಡ್ರೈವರ್, ಕೋರೋನ ಸ್ಮಶಾನ ಕೆಲಸಗಾರರು, ಕೆಇಬಿ ಲೈನ್‍ಮ್ಯಾನ್‍ಗಳನ್ನು ವಾರಿಯರ್ ಎಂದು ಪರಿಗಣಿಸಿ ಅವರು ಕೋವಿಡ್-19 ಸೋಂಕಿನಿಂದ ಮೃತರಾದರೆ ತಕ್ಷಣ 50ಲಕ್ಷ ರೂ.ಪರಿಹಾರ ಹಣವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಬೇಕು.

ಕೋವಿಡ್‍ನಿಂದ ವ್ಯಕ್ತಿ ಸಾವಾದರೆ ಆಸ್ಪತ್ರೆಯವರಿಗೆ ಸರಕಾರದಿಂದ ಯಾವುದೇ ರೀತಿಯ ಬಿಲ್ ಪಾವತಿ ಮಾಡಬಾರದು ಬದಲಿಗೆ ಹಣವನ್ನು ಸತ್ತ ವ್ಯಕ್ತಿಯ ಕುಟುಂಬ ಖಾತೆಗೆ ನೇರವಾಗಿ ವರ್ಗಾಯಿಸಬೇಕು. ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ರೋಗಿಗೆ ತಕ್ಷಣವೇ ಗ್ಲೂಕೋಸ್ ಹಾಗೂ ನೆಬ್ಲೈಸೇಶನನ್ನು ಪ್ರಥಮ ಚಿಕಿತ್ಸೆಯಾಗಿ ನೀಡಬೇಕೆಂದು ಸರಕಾರ ಘೋಷಿಸಬೇಕು. ರೋಗಿಗಳಿಗೆ ಬೇಕಾದ ಹೆಚ್ಚುವರಿ ದುಬಾರಿ ಔಷಧಿ ಸಾಮಗ್ರಿಗಳನ್ನು ಸರಕಾರವೇ ತ್ವರಿತ ಗತಿಯಲ್ಲಿ ಕ್ರಮ ವಹಿಸಿ ಸೋಂಕಿತರ ಪ್ರಾಣ ಉಳಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಸುಳ್ಳು ಸಂಖ್ಯೆ ಹಗರಣ ತನಿಖೆ ನಡೆಸಿ ಆರೋಪಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ. ಮುಖಂಡರಾದ ಜಿಗಣಿ ಶಂಕರ್, ಹೆಬ್ಬಾಳ ವೆಂಕಟೇಶ್, ಲೋಕೇಶ್ಚಂದ್ರ, ಆರ್.ಕೇಶವಮೂರ್ತಿ, ಭೀಮಪುತ್ರಿ ರೇವತಿರಾಜ್, ಮುನಿ ಆಂಜಿನಪ್ಪ, ಕನ್ನಡ ನಝೀರ್, ಡಾ.ಭಾನುಪ್ರಕಾಶ್ ಸೇರಿದಂತೆ ಇನ್ನಿತರರು  ಹಾಜರಿದ್ದರು.

'ಕೊರೋನ ಸೋಂಕಿಗಿಂತಲೂ ಭೀಕರ ಬಡಜನರ ಹಸಿವು. ರಾಜ್ಯ ಸರಕಾರ ಏಕಾಏಕಿ ಕಫ್ರ್ಯೂ, ಲಾಕ್‍ಡೌನ್ ಘೋಷಣೆ ಮಾಡಿದ್ದು, ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ದುಡಿದೆ ಅಂದಿನ ಅನ್ನವನ್ನು ಅಂದೇ ಸಂಪಾದಿಸಿ ಉಣ್ಣುತ್ತಿದ್ದ ಲಕ್ಷಾಂತರ ಜನತೆ ಹಸಿವಿನಿಂದ ಬಳಲುತ್ತಿದ್ದಾರೆ. ಅಸಮರ್ಥರು, ಅನರ್ಹರು ಸೇರಿ ಮಾಡಿಕೊಂಡಿರುವ ಈ ಸರಕಾರದಿಂದ ಹೆಚ್ಚಿನ ನಿರೀಕ್ಷೆಗಳಿಲ್ಲ. ಆದರೆ, ಕನಿಷ್ಟ ಮಾನವೀಯತೆ ಈ ಸರಕಾರಕ್ಕಿದ್ದರೆ ಕೂಡಲೇ ಬಡವರಿಗೆ ಪರಿಹಾರ ಪ್ಯಾಕೇಜ್ ಮತ್ತು ಸೋಕಿತರಿಗೆ ಉಚಿತ ಚಿಕಿತ್ಸೆ ಘೋಷಿಸಬೇಕು'
-ಜಿಗಣಿ ಶಂಕರ್, ಅಧ್ಯಕ್ಷ ಮೂಲನಿವಾಸಿಗಳ ಒಕ್ಕೂಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News