ಲಾಕ್‍ಡೌನ್ ವಿಸ್ತರಣೆ, ಪರಿಹಾರದ ಪ್ಯಾಕೇಜ್ ಘೋಷಣೆ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ: ಸಿಎಂ ಯಡಿಯೂರಪ್ಪ

Update: 2021-05-17 14:29 GMT

ಬೆಂಗಳೂರು, ಮೇ 17: `ಕೊರೋನ ಎರಡನೆ ಅಲೆ ನಿಯಂತ್ರಣಕ್ಕೆ ಹೇರಿರುವ ಲಾಕ್‍ಡೌನ್ ವಿಸ್ತರಣೆ ಹಾಗೂ ಜನರಿಗೆ ಪರಿಹಾರದ ಪ್ಯಾಕೇಜ್ ಘೋಷಣೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಬಿಜಿಎಸ್ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಬಳಿಕ ಮಾತನಾಡಿದ ಅವರು, 'ಲಾಕ್‍ಡೌನ್ ವಿಸ್ತರಣೆ ಮತ್ತು ಪ್ಯಾಕೇಜ್ ಘೋಷಣೆ ವಿಚಾರದ ಬಗ್ಗೆ ಬೇರೆ ಸಂದರ್ಭದಲ್ಲಿ ಮಾತಾಡುತ್ತೇನೆ. ಈ ಕುರಿತು ಚರ್ಚೆ ಮಾಡುತ್ತಿದ್ದೇವೆ, ಆದರೆ, ಇದುವರೆಗೆ ಯಾವುದೇ ತೀರ್ಮಾನ ಆಗಿಲ್ಲ. ಚರ್ಚೆ ಮುಗಿದ ಬಳಿಕ ಈ ಬಗ್ಗೆ ನಿರ್ಧಾರ ಪ್ರಕಟಿಸುತ್ತೇವೆ' ಎಂದು ಹೇಳಿದರು.

ಚಿಕಿತ್ಸೆಗೆ ಅನುಕೂಲ: ಕೆಂಗೇರಿ ಉಪನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ `ಟ್ರಯೆಜ್' ಉದ್ಘಾಟನೆ ಮಾಡಿದ್ದೇನೆ. ಕೋವಿಡ್ ರೋಗಿಯ ಪರಿಸ್ಥಿತಿ ಆಧಾರದ ಮೇಲೆ ವೈದ್ಯರು ಅವರ ಚಿಕಿತ್ಸೆಗೆ ಹೇಗೆ ನಡೆಸಬೇಕು ಎಂದು ನಿರ್ಧಾರ ಮಾಡಲಿದ್ದಾರೆ. 24 ಗಂಟೆ ವೈದ್ಯರು ಉಪಸ್ಥಿತಿ ಇರಲಿದ್ದಾರೆ. ರೋಗಿಯ ಪರಿಸ್ಥಿತಿ ನೋಡಿ ಸಾಮಾನ್ಯ, ಐಸಿಯು ವ್ಯವಸ್ಥೆ ಬಗ್ಗೆ ವೈದ್ಯರು ತೀರ್ಮಾನಿಸುತ್ತಾರೆ. ಸೆಂಟರ್‍ನಲ್ಲಿ ಒಂದು ಆ್ಯಂಬುಲೆನ್ಸ್ ಇರಲಿದೆ. ಟ್ರಯೇಜ್ ಸೆಂಟರ್ ನಲ್ಲಿ ಸಮರ್ಥ ರೀತಿಯಲ್ಲಿ ಕೆಲಸ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸಲಾಗುವುದು. ಅಲ್ಲದೆ, ಹೋಮ್ ಐಸೋಲೇಷನ್‍ನಲ್ಲಿ ಇರುವ ಸೋಂಕಿತರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ, ಸಲಹೆ ಮತ್ತು ಔಷಧಗಳನ್ನು ಒದಗಿಸಲಾಗುವುದು. ತೀವ್ರ ಉಸಿರಾಟದ ಸಮಸ್ಯೆ ಇರುವವರಿಗೆ ಆಮ್ಲಜನಕ ವ್ಯವಸ್ಥೆ ನೀಡಲಾಗುವುದು ಎಂದು ಅವರು, ಆಸ್ಪತ್ರೆಗಳ ಮೇಲಿನ ಒತ್ತಡ ತಪ್ಪಿಸಲು ಟ್ರಯೆಜ್ ಸೆಂಟರ್ ನೆರವಾಗಲಿದ್ದು, ಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇರ್ ಸೆಂಟರ್ ಆರಂಭ: ಇಂದು ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಬಿಜಿಎಸ್ ಗ್ಲೋಬಲ್ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ಹಾಸ್ಪಿಟಲ್ ವತಿಯಿಂದ ಉತ್ತರಹಳ್ಳಿ ಮುಖ್ಯರಸ್ತೆ, ಕೆಂಗೇರಿಯಲ್ಲಿ 210 ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳು, 43 ಐಸಿಯು ಹಾಸಿಗೆಗಳು, 30 ಹಾಸಿಗೆಗಳು ಹಾಗೂ 100 ಸಾಮಾನ್ಯ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್  ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಹಸಿರು ಪ್ರತಿಷ್ಠಾನದ ವತಿಯಿಂದ ಎರಡು ಸಾವಿರ ಸಸಿಗಳನ್ನು ಮಠಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮಿ, ಸಹಕಾರ ಸಚಿವ ಎಸ್. ಟಿ.ಸೋಮಶೇಖರ್, ಮುಡಾ ಅಧ್ಯಕ್ಷ ರಾಜೀವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

`ನಾನು ಪ್ರತಿನಿಧಿಸುವ ಯಶವಂತಪುರ ಕ್ಷೇತ್ರದಲ್ಲಿ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳ ನೆರವಿನಿಂದ ಸುಸಜ್ಜಿತ ಹಾಗೂ ಶಾಶ್ವತ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವ ಚಿಂತನೆ ಇದೆ. ಆ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಆದಿಚುಂಚನಗಿರಿ ಮಠದ ಸ್ವಾಮಿಗಳ ನಮ್ಮ ಮನವಿಗೆ ಸ್ಪಂದಿಸಿ ಕೋವಿಡ್ ಕೇಸ್ ಸೆಂಟರ್ ಆರಂಭಿಸಿದ್ದಾರೆ. ಇದರಿಂದ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗಲಿದೆ. ಲಾಕ್‍ಡೌನ್ ಬಗ್ಗೆ ಸಿಎಂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಿದ್ದಾರೆ'
-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News