ಕೋವಿಡ್ ನಿಯಂತ್ರಣ ವಿಚಾರದಲ್ಲಿ ಸಿಎಂ ಯಡಿಯೂರಪ್ಪರ ಕಾರ್ಯ ತೃಪ್ತಿ ತಂದಿಲ್ಲ: ಬಿಜೆಪಿ ಶಾಸಕ ಯತ್ನಾಳ್

Update: 2021-05-17 12:10 GMT

ಬೆಂಗಳೂರು, ಮೇ 17: ಕೊರೋನ ನಿಯಂತ್ರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯ ತೃಪ್ತಿ ತಂದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಭೇಟಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಕೊರತೆ, ಕೋವಿಡ್ ಲಸಿಕೆ ಸಮಸ್ಯೆ ಕುರಿತು ರಾಜ್ಯದ ಪರ ಸಂಸದರು ಧ್ವನಿ ಎತ್ತುತ್ತಿಲ್ಲ. ಸಿಎಂ ಅವರನ್ನು ಕರೆದು ಸಮಾಲೋಚಿಸಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಬೇಕಿತ್ತು. ಮುಖ್ಯಮಂತ್ರಿ, ಪ್ರಧಾನಿಯನ್ನು ಭೇಟಿಯೇ ಮಾಡುವುದಿಲ್ಲ. ರಾಜ್ಯ ಸರಕಾರ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಪ್ರಧಾನಿ ನಿರ್ದೇಶನದಂತೆ ಇಲ್ಲಿ ಕೆಲಸ ಆಗುತ್ತಿಲ್ಲ. ಎಷ್ಟು ಬಾರಿ ಯಡಿಯೂರಪ್ಪ ಪ್ರಧಾನಿ ಭೇಟಿಯಾಗಿದ್ದಾರೆಂದು ಪ್ರಶ್ನಿಸಿದರು.

ಕಾವೇರಿಗೆ ಸೀಮಿತ: ಸಿಎಂ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ನಾಲ್ಕು ಕುರ್ಚಿ ಹಾಕಿ ಸಭೆ ಮಾಡುತ್ತಾರೆ. ಮಾಧ್ಯಮಗಳು ಅದನ್ನೆ ದೊಡ್ಡ ಸಭೆ ಎಂದು ಸುದ್ದಿ ಮಾಡುತ್ತಾರೆ. ಕೊರೋನ ಸೋಂಕು ನಿಯಂತ್ರಣದಲ್ಲಿ ಸಿಎಂ ಬಿ.ಎಸ್‍ವೈ ಅವರ ಕೆಲಸ ತೃಪ್ತಿ ತಂದಿಲ್ಲ. ರಾಜ್ಯದಲ್ಲಿ ಲಸಿಕೆ ಅಭಿಯಾನ ವಿಫಲವಾಗಿದ್ದಕ್ಕೆ ಬುದ್ದಿಜೀವಿಗಳು, ವಿಪಕ್ಷಗಳೇ ಕಾರಣ. ಅವರು ಇಲ್ಲಸಲ್ಲದ ಅಪ ಪ್ರಚಾರ ಮಾಡಿದರು ಎಂದು ದೂರಿದರು.

ಕೋವಿಡ್ ಲಸಿಕೆ ಬಗ್ಗೆ ಸಿಎಂ ರಾಜ್ಯದ ಜನರಿಗೆ ಅರಿವು ಮೂಡಿಸಬೇಕಿತ್ತು. ಆದರೆ, ಅದನ್ನು ಅವರು ಮಾಡಲಿಲ್ಲ. ಕೇವಲ ಪ್ರಚಾರಕ್ಕೆ ಸಿಎಂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿದರು. ಆದರೆ, ಅದನ್ನ ಸರಿಯಾಗಿ ವಿತರಣೆ ಮಾಡೋ ಕೆಲಸ ಮಾಡಿಲ್ಲ. ಸಿಎಂ ಪ್ರಚಾರಕ್ಕೆ ಮಾತ್ರ ಲಸಿಕೆ ಅಭಿಯಾನ ಉದ್ಘಾಟನೆ ಮಾಡಿದರು ಎಂದು ಮುಖ್ಯಮಂತ್ರಿ ವಿರುದ್ಧ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದರು.

ವಿಜಯಪುರ ಜಿಲ್ಲೆಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಬೇಕಿದೆ. ಇನ್ನು ಬೆಡ್‍ಗಳು ಬೇಕಿದೆ. ವ್ಯಾಕ್ಸಿನೇಷನ್ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ವಿಜಯಪುರದಲ್ಲಿ ಮನೆ-ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆಶಾ ಕಾರ್ಯಕರ್ತೆಯರಿಗೆ 5ಸಾವಿರ ರೂ.ಬಹುಮಾನ ರೂಪದಲ್ಲಿ ಕೊಟ್ಟಿದ್ದೇವೆ. ಇಡೀ ಜಿಲ್ಲೆಗೆ ವ್ಯಾಕ್ಸಿನೇಷನ್ ಆಗಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕೋವಿಡ್ ಎರಡನೇ ಡೋಸ್‍ಗೆ ಅವಧಿ ಹೆಚ್ಚಳ ಮಾಡಿದ್ದಾರೆ. ವಿಜಯಪುರದಲ್ಲಿ ಬೆಡ್ ಕೊರತೆ ಇದೆ. ಇದನ್ನ ಸರಿ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 100 ಬೆಡ್ ಹೆಚ್ಚಳ ಮಾಡಬೇಕು ಎಂದು ಕೋರಿದ್ದೇವೆ. 100 ಬೆಡ್ ಆಕ್ಸಿಜನ್ ಯುಕ್ತ ಆಸ್ಪತ್ರೆ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ. ಸಿಬ್ಬಂದಿ ಕೊರತೆ ತಪ್ಪಿಸಲು ಮನವಿ ಮಾಡಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News