ವಾಲ್ನೂರು: ಕಾಡಾನೆ ದಾಳಿಗೆ ಕಾರ್ಮಿಕ ಸಾವು

Update: 2021-05-17 12:30 GMT

ಮಡಿಕೇರಿ: ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಸಿದ್ದಾಪುರ ಸಮೀಪ ವಾಲ್ನೂರು ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ರಾಜ್ಯದ ತಿರುಚ್ಚನಪಳ್ಳಿಯ ಏಳುಮಲೈ(50) ಎಂಬುವವರೇ ಮೃತ ದುರ್ದೈವಿ. ಅಮ್ಮಂಗಲದ ಬೊಪ್ಪಂಡ ಪ್ರಭುಗಣಪತಿ ಅವರ ತೋಟದಲ್ಲಿ ಕಾರ್ಮಿರಾಗಿದ್ದ ಇವರು ಇಂದು ಬೆಳಗ್ಗೆ ಲೈನ್ ಮನೆಯ ಬಳಿಯ ಹೊಳೆಗೆ ತೆರಳಿದ್ದ ಸಂದರ್ಭ ಏಕಾಏಕಿ ದಾಳಿ ನಡೆಸಿದ ಆನೆ ತೀವ್ರವಾಗಿ ಘಾಸಿಗೊಳಿಸಿ ಕೊಂದು ಹಾಕಿದೆ. 

ಕಳೆದ ಒಂದು ವಾರದಿಂದ ಹಲಸಿನ ಹಣ್ಣನ್ನು ತಿನ್ನಲು ಹಿಂಡು ಹಿಂಡು ಕಾಡಾನೆಗಳು ಈ ಭಾಗದಲ್ಲಿ ಲಗ್ಗೆ ಇಡುತ್ತಿವೆ. ಗ್ರಾಮದಲ್ಲಿ ಆತಂಕ ಮೂಡಿದ್ದು, ಕಾರ್ಮಿಕ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಸ್ಥಳಕ್ಕೆ ಕುಶಾಲನಗರ ರೇಂಜರ್ ಅನನ್ಯ ಕುಮಾರ್, ಮೀನುಕೊಲ್ಲಿ ಅರಣ್ಯ ಪಾಲಕ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದರು.  

ಏಳುಮಲೈ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ತಿರುಚ್ಚನಪಳ್ಳಿಗೆ ಕೊಂಡೊಯ್ಯಲಾಯಿತು. ಅರಣ್ಯ ಇಲಾಖೆ ವತಿಯಿಂದ ಮೊದಲ ಹಂತದಲ್ಲಿ 2.50 ಲಕ್ಷ ರೂ. ಪರಿಹಾರ ಧನ ನೀಡಲಾಗುತ್ತಿದ್ದು, ನಂತರ 5 ಲಕ್ಷ ರೂ. ನೀಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರು ಕೂಡ ಲೈನ್ ಮನೆಯಲ್ಲೇ ವಾಸವಾಗಿದ್ದರು.

ಹುಲಿ ಆತಂಕ
ಕಾಡಾನೆಗಳ ಜೊತೆಯಲ್ಲೇ ಹುಲಿ ಹಾವಳಿ ಕೂಡ ಸುತ್ತಮುತ್ತಲ ಗ್ರಾಮಗಳನ್ನು ಕಾಡಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ವಾಲ್ನೂರಿನ ಚೇನಂಡ ಅಯ್ಯಪ್ಪ ಅವರು ತಮ್ಮ ತೋಟದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಹುಲಿ ಸಂಚಾರದ ದೃಶ್ಯಾವಳಿ ಸೆರೆಯಾಗಿದೆ. ಕಾಡಾನೆಯ ದೃಶ್ಯವೂ ಇದ್ದು, ಪ್ರತಿದಿನ ವನ್ಯಜೀವಿಗಳು ಬಂದು ಹೋಗುತ್ತಿರುವ ಬಗ್ಗೆ ಖಾತ್ರಿಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಎರಡು ಹಸುಗಳು ಹುಲಿ ದಾಳಿಗೆ ಬಲಿಯಾಗಿದೆ. 

ಕಳಪೆ ಕಾಮಗಾರಿ
ಕಾಡಾನೆ ದಾಳಿ ತಡೆಗೆ ರೈಲ್ವೆ ಕಂಬಿಗಳ ಬೇಲಿ ಅಳವಡಿಸುವ ಕಾರ್ಯ ಅರ್ಧದಲ್ಲೇ ನಿಂತಿದೆ. ಅಲ್ಲದೆ ಈ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಸೋಲಾರ್ ಬೇಲಿ ಅಳವಡಿಕೆಯೂ ವೈಜ್ಞಾನಿಕವಾಗಿ ಇಲ್ಲದ ಕಾರಣ ಆನೆಗಳ ಉಪಟಳವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಆನೆ ಕಂದಗಳನ್ನು ನಿರ್ಮಿಸುವುದು ಸೂಕ್ತವೆಂದು ಗ್ರಾ.ಪಂ ಮಾಜಿ ಸದಸ್ಯ ಜತ್ತ ವಿಜಯ ಒತ್ತಾಯಿಸಿದ್ದಾರೆ. 

ವಾಲ್ನೂರು, ತ್ಯಾಗತ್ತೂರು, ಅಭ್ಯತ್ ಮಂಗಲ ಸುತ್ತಮುತ್ತಲ ಗ್ರಾಮಸ್ಥರು ಕಾಡಾನೆ, ಹುಲಿ ಭಯದೊಂದಿಗೆ ಕೋವಿಡ್ ನಿಂದಲೂ ಬೇಸತ್ತಿದ್ದು, ಯಾರೂ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News