ಲಾಕ್‍ಡೌನ್ ವಿಶೇಷ ಪ್ಯಾಕೇಜ್ ಘೋಷಣೆಗೆ ವೆಲ್ಫೇರ್ ಪಾರ್ಟಿ ಒತ್ತಾಯ

Update: 2021-05-17 13:57 GMT

ಬೀದರ್, ಮೇ 17: ಮಹಾಮಾರಿ ಕೊರೋನ ಸಂಕ್ರಮಿತ ಕಾಲದಲ್ಲಿ ಸರಕಾರ ಲಾಕ್‍ಡೌನ್ ಮಾಡಿರುವುದು ಸರಿ. ಆದರೆ, ಬಡವರ, ಮಧ್ಯಮ ವರ್ಗದ ಜೀವನ ದುಡಿಮೆ ಇಲ್ಲದೇ ನಡೆಸುವುದು ಕಷ್ಟಕರವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಮುಜಾಹಿದ್ ಪಾಷ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರವನ್ನು ಬಸವಕಲ್ಯಾಣ ತಹಶೀಲ್ದಾರ್ ಅವರ ಮೂಲಕ ಸಲ್ಲಿಕೆ ಮಾಡಿರುವ ಅವರು, ತೀವ್ರ ಸಂಕಷ್ಟದಲ್ಲಿ ಬದುಕುತ್ತಿರುವ ಬಡ-ಮಧ್ಯಮ ವರ್ಗಕ್ಕೆ ಸರಕಾರ ಕೂಡಲೇ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಸತತ ಲಾಕ್‍ಡೌನ್‍ನಿಂದ ಕೂಲಿ ಕಾರ್ಮಿಕರು, ರೈತರು, ಕುಶಲಕರ್ಮಿಗಳು, ಕ್ಷೌರಿಕರು, ಕಟ್ಟಡ ಕಾರ್ಮಿಕರು, ಟೈಲರ್, ಆಟೋ, ಟ್ಯಾಕ್ಸಿ ಚಾಲಕರು, ಅನುದಾನರಹಿತ ಶಿಕ್ಷಕರು, ಗ್ಯಾರೇಜ್ ಮೆಕ್ಯಾನಿಕ್, ಬೀದಿ ಬದಿ ವ್ಯಾಪಾರಿಗಳು, ಮಡಿವಾಳರು, ಅಂಬಿಗರು, ಅಲೆಮಾರಿ ಸಮುದಾಯದವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯದವರು ತಮ್ಮ ವೃತ್ತಿಯನ್ನೆ ನೆಚ್ಚಿಕೊಂಡು ಬದುಕು ಸಾಗಿಸುವವರಿಗೆ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸರಕಾರ ಪ್ರತಿಯೊಂದು ಕುಟುಂಬದ ವ್ಯಕ್ತಿಗೆ 10 ಕೆಜಿ ಅಕ್ಕಿ, ರೇಷನ್ ಕಿಟ್ ಹಾಗೂ 10 ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಬೇಕು. ಕೋವಿಡ್-19 ಬಂದ ರೋಗಿಗೆ ಉಚಿತವಾಗಿ ಚಿಕಿತ್ಸೆ ಕೊಡಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಮತ್ತು ಆಕ್ಸಿಜನ್, ಬೆಡ್, ರೆಮ್ಡಿಸಿವರ್ ಔಷಧಿಯ ವ್ಯವಸ್ಥೆ ಮಾಡಬೇಕು. ವಿದ್ಯುತ್ ಬಿಲ್, ಫೈನಾನ್ಸ್ ಹಾಗೂ ಬ್ಯಾಂಕ್‍ಗಳಲ್ಲಿ ಬಡ್ಡಿ ವಿನಾಯಿತಿ ಮಾಡಬೇಕು ಎಂದು ಮುಜಾಹಿದ್ ಪಾಷ ಒತ್ತಾಯಿಸಿದ್ದಾರೆ.

ತಹಶೀಲ್ದಾರ್‍ಗೆ ಪತ್ರವನ್ನು ಸಲ್ಲಿಸಿದ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಬಸವಕಲ್ಯಾಣ ತಾಲೂಕು ಅಧ್ಯಕ್ಷ ಅರಫಾತ್, ಮುಖಂಡ ಬಿಲಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News