ಕೋವಿಡ್‌ ನಡುವೆ ಕೋಮುದ್ವೇಷದ ಮಾತುಗಳನ್ನಾಡಿದ ಪ್ರತಾಪ್‌ ಸಿಂಹ: ಟ್ವಿಟರ್‌ ನಾದ್ಯಂತ ಆಕ್ರೋಶ

Update: 2021-05-17 14:10 GMT

ಬೆಂಗಳೂರು: ದೇಶದಾದ್ಯಂತ ಜನರು ಕೋವಿಡ್‌ ಎರಡನೇ ಅಲೆಯಿಂದ ತತ್ತರಿಸಿದ್ದಾರೆ. ಕರ್ನಾಟಕದಲ್ಲೂ ದಿನಂಪ್ರತಿ ಕೋವಿಡ್‌ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಈ ಪರಿಸ್ಥಿತಿಯ ನಡುವೆ ಫೇಸ್‌ ಬುಕ್‌ ಲೈವ್‌ ನಲ್ಲಿ ಕೋಮುದ್ವೇಷದ, ನ್ಯಾಯಾಂಗ ನಿಂದನೆಯ ಮಾತುಗಳನ್ನಾಡಿದ ಸಂಸದ ಪ್ರತಾಪ ಸಿಂಹ ಕುರಿತಾದಂತೆ ಟ್ವಿಟರ್‌ ನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಟ್ವಿಟರ್‌ ನಲ್ಲಿ #ಕೋಮುದ್ವೇಷಿಪ್ರತಾಪ, #ResignbjpMPPrathap ಟ್ರೆಂಡಿಂಗ್‌ ಆಗಿದೆ.

ತಮ್ಮ ಫೇಸ್ಬುಕ್‌ ಲೈವ್‌ ನಲ್ಲಿ ಮಾತನಾಡುತ್ತಾ ಸಂಸದ ಪ್ರತಾಪ ಸಿಂಹ, "ನೀವು ಕಮ್ಯುನಲ್ ಅಂತ ತಿಳಿದುಕೊಳ್ಳಿ, ಆದರೆ ನಿಮ್ಮ ಬುದ್ಧಿಗೋಸ್ಕರ ಹೇಳ್ತಿರೋದು. ವೆಸ್ಟ್ ಬೆಂಗಾಳಲ್ಲಿ ನೀವು ಯಾವ ರೀತಿ ವೋಟ್‌ ಹಾಕಿದ್ದೀರಿ ಅಂತ ನಮಗೆ ಗೊತ್ತಿದೆ. ಮಮತಾ ಬ್ಯಾನರ್ಜಿ ಹೇಗೆ ಗೆದ್ದಳು ಅಂತಾನೂ ಕೂಡ ನಮಗೆ ಗೊತ್ತಿದೆ. ಆದರೆ ನಿಮ್ ಬುದ್ಧೀನ ಒಂದ್ ಸ್ವಲ್ಪ ಸರಿ ಮಾಡ್ಕಳಿ, ಪುರುಸೊತ್ತಿಲ್ದಲೆ ಹುಟ್ಟಿಸ್ಕಂಬುಟ್ಟು ಈವಾಗ ಬಂದ್ಬುಟ್ಟು ಎಲ್ಲಾರ್ನೂ ಸಾಕು ಸಲಹು ಮೋದಿ ಅಂತೆಲ್ಲ ಹೇಳ್ತಾ ಇರ್ಬೇಡಿ ನೀವು" ಎಂದು ಪ್ರತಾಪ ಸಿಂಹ ಹೇಳಿದ್ದಾರೆ.

ಇದು ಮಾತ್ರವಲ್ಲದೇ ಕೋವಿಡ್‌ ವಿಚಾರದಲ್ಲಿ ನ್ಯಾಯಾಲಯಗಳ ಮಧ್ಯಪ್ರವೇಶದ ಕುರಿತು ಮಾತನಾಡಿದ ಅವರು, "ಕೋರ್ಟ್‌ ನವರು ಹೇಳ್ತಾರಲ್ಲ, ಮೊನ್ನೇನೂ ಹೇಳಿದ್ರಲ್ಲ ನಮ್ಮಲ್ಲೂ ಕೂಡಾ, ನಿಮಗೆ ಆಗಲ್ಲಾಂದ್ರೆ ಹೇಳಿಬಿಡಿ ಅಂತ. ಆಗ್ಲಿಲ್ಲಾಂದ್ರೆ ಇವರು ಮಾಡಿಬಿಡ್ತಾರಾ? ಇವ್ರ್‌ ಕೈಯಲ್ಲಿ ಒಂದು ಕೇಸ್‌ ಅನ್ನು ಇತ್ಯರ್ಥ ಮಾಡೋದ್ರಲ್ಲೇ ಇನ್ನೂ 20 ವರ್ಷಕ್ಕಾಗೋವಷ್ಟನ್ನು ಪೆಂಡಿಂಗ್‌ ಇಟ್ಟಿದ್ದಾರೆ. ಇನ್ನು ಇವ್ರು ವ್ಯಾಕ್ಸಿನ್‌ ಕೊಡ್ತಾರಾ? "ಎಂದು ಪ್ರತಾಪ್‌ ಸಿಂಹ ಹೇಳಿಕೆ ನೀಡಿದ್ದಾರೆ. ಈ ಕುರಿತು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News