ಜಿಂಕೆ ಮರಿ ಬೇಟೆ: ಇಬ್ಬರ ಬಂಧನ, ನಾಲ್ವರು ಪರಾರಿ

Update: 2021-05-17 14:23 GMT

ಮಡಿಕೇರಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸಮೀಪ ಜಿಂಕೆ ಮರಿಯನ್ನು ಬೇಟೆಯಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ನಾಗರಹೊಳೆ ಅರಣ್ಯ ಇಲಾಖೆ ಬಂಧಿಸಿದೆ.

ಬಿರುನಾಣಿ ಬಾಡಗರಕೇರಿ ಮೂಲದ ಆರೋಪಿಗಳಾದ ಕೆ.ಪ್ರೀತಂ ಹಾಗೂ  ಎ.ರಾಬಿನ್ ತಿಮ್ಮಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಜಿಂಕೆ ಮರಿ, ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ಮತ್ತೊಂದು ಕಾರಿನಲ್ಲಿ ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಮೀಪ ಸೋಮವಾರ ನಸುಕಿನಲ್ಲಿ ಗುಂಡಿನ ಶಬ್ಧ ಕೇಳಿ ಬಂದ ಕಡೆ ಅರಣ್ಯ ಸಿಬ್ಬಂದಿಗಳು ಧಾವಿಸಿದಾಗ ಸ್ಥಳದಲ್ಲಿದ್ದ ಒಂದು ಕಾರು ಸಹಿತ ನಾಲ್ವರು ಬೇಟೆಗಾರರು ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಕೆ.ಪ್ರೀತಂ ಮತ್ತು ಎ.ರಾಬಿನ್ ತಿಮ್ಮಯ್ಯ ಎಂಬುವವರನ್ನು ಅಧಿಕಾರಿಗಳು ಸ್ಥಳದಲ್ಲೇ ಬಂಧಿಸಿದ್ದಾರೆ.

ಸೋಮವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಮರಿ ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಆಲ್ಟೋ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳ ವಿರುದ್ದ 1972 ವನ್ಯಜೀವಿ ಸಂರಕ್ಷಣಾ ಕಾಯಿದೆ ಕಲಂ 50, 51ರ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ತಲೆ ಮರೆಸಿಕೊಂಡಿರುವ ಇತರ 4 ಮಂದಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಾಗರಹೊಳೆ ವಲಯದ ಡಿವೈಆರ್‍ಎಫ್‍ಓ ಕಾಂತರಾಜು, ಅರಣ್ಯ ರಕ್ಷಕ ಬಡೇಸಾಬ್, ಅರಣ್ಯ ವೀಕ್ಷಕ ಚಿಕ್ಕಮಾದ, ಚಾಲಕ ಅಭಿಶೇಕ್ ಅವರಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News