ಕುಟುಂಬಸ್ಥರೇ ಹಿಂಜರಿಯುವ ಕಾಲದಲ್ಲಿ ಧರ್ಮಾತೀತವಾಗಿ ಶವಸಂಸ್ಕಾರ ಮಾಡುತ್ತಿರುವ ಯುವಕರು

Update: 2021-05-17 15:34 GMT

ತುಮಕೂರು: ಕೋವಿಡ್19 ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದು, ಭಾರತದಲ್ಲಿ ರೋಗದಿಂದ ಮೃತಪಟ್ಟವರ ಮುಖ ನೋಡಲು ಕುಟುಂಬಸ್ಥರೇ ಹಿಂಜರಿಯುತ್ತಾ, ಶವಸಂಸ್ಕಾರಕ್ಕೂ ಬಾರದಿರುವ ಪ್ರಸಂಗಗಳು ಅಲ್ಲಲ್ಲಿ ನೋಡುತ್ತಿದ್ದೇವೆ‌‌. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲೆಯ ಯುವಕರು, ಜಾತಿ- ಧರ್ಮದ ಗಡಿ ದಾಟಿ, ಯಾವುದೇ ಹಣ, ಪ್ರಚಾರಕ್ಕೆ ಆಸೆ ಪಡದೆ ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ಮಾಡುವ ಮೂಲಕ ಮಾನವೀಯ ಸೇವೆಯನ್ನು ಒದಗಿಸುತ್ತಿದ್ದಾರೆ.

2020ರ ಮಾರ್ಚ್ ನಲ್ಲಿ ಕೋವಿಡ್19 ಮೊದಲನೇ ಅಲೆಯಲ್ಲಿ ಶಿರಾ ನಗರದ ವ್ಯಕ್ತಿಯೊಬ್ಬರು ಬಲಿಯಾಗಿ ಸುದ್ದಿಯಾಗಿದ್ದರು. ಆದರೆ ಅವರ ಶವ ಸಂಸ್ಕಾರ ಹೇಗೆ ನಡೆಸಬೇಕು ಎಂಬ ಸಾಕಷ್ಟು ಗೊಂದಲಗಳು ಇದ್ದ ಕಾರಣ, ಸಮಾಜ ಸೇವೆಯಲ್ಲಿ ತೊಡಗಿರುವ ಉದ್ಯಮಿ ತಾಜುದ್ದೀನ್ ಶರೀಫ್ ಎಂಬುವವರು ತಜ್ಞ ವೈದ್ಯರುಗಳನ್ನು ಸಂಪರ್ಕಿಸಿ, ಶವಸಂಸ್ಕಾರ ಹೇಗೆ ಮಾಡುವುದು, ಏನೇನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿ ಪಡೆದು, ಅವರ ನಿರ್ದೇಶನದಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿ ದಫನ್ ಕಾರ್ಯ ನೆರವೇರಿಸಿದ್ದರು.

"ಮುಸ್ಲಿಂ ಯುವಕರ ಸಂಘದ ಹೆಸರಿನಲ್ಲಿ ಅಶಕ್ತರು, ಆನಾಥರು, ನಿರ್ಗತಿಕರ ಶವಸಂಸ್ಕಾರ ನಡೆಸುವುದಾಗಿ ಅಂದಿನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಿ ಅನುಮೋಧನೆ ಪಡೆದು, ಶವಸಂಸ್ಕಾರ ಕಾರ್ಯ ಆರಂಭಿಸಿದ್ದು, ಇದುವರೆಗೂ ಕೋವಿಡ್, ಕೋವಿಡೇತರ, ಅನಾಥ ಶವಗಳು ಸೇರಿ ಒಂದು ಸಾವಿರಕ್ಕೂ ಅಧಿಕ ಶವಗಳ ಅಂತ್ಯಕ್ರಿಯೆ ಮಾಡಲಾಗಿದೆ" ಎಂದು ತಾಜುದ್ದೀನ್ ಪತ್ರಿಕೆಗೆ ತಿಳಿಸಿದ್ದಾರೆ.

ಶವ ಸಂಸ್ಕಾರಕ್ಕೆ ನಾವು ಹಣದ ಬೇಡಿಕೆ ಇಡುತ್ತಿಲ್ಲ. ಮೃತರ ಕುಟುಂಬದವರು ಅರ್ಥಿಕವಾಗಿ ಶಕ್ತರಿದ್ದರೆ ಅವರಿಂದ ಅಂಬ್ಯುಲೆನ್ಸ್ ಮತ್ತು ಶವಕ್ಕೆ ಸುತ್ತುವ ಬಟ್ಟೆಯ ಖರ್ಚನ್ನು ಮಾತ್ರ ಪಡೆಯಲಾಗುತ್ತಿದೆ. ಅರ್ಥಿಕವಾಗಿ ದುರ್ಬಲರಾಗಿದ್ದರೆ, ನಾವೇ ಕೈಯಿಂದ ಎಲ್ಲವನ್ನು ಭರಿಸಿ, ಶವಸಂಸ್ಕಾರ ನಡೆಸುತ್ತಿದ್ದೇವೆ. ಸರಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಎರಡು ಕಡೆಯಿಂದಲೂ ದೂರವಾಣಿ ಕರೆಗಳು ಬರುತ್ತವೆ. ಸುಮಾರು 15 ಜನರನ್ನು ಒಳಗೊಂಡ 2 ತಂಡ ತುಮಕೂರು ನಗರದಲ್ಲಿ ಕೆಲಸ ಮಾಡುತ್ತಿದೆ ಎಂದರು.

ಅನಾಥ ಶವಗಳಿಗೆ ಅಪತ್ಭಾಂಧವರಾದ ತುರುವೇಕೆರೆ ಯುವಕರು: ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಅಫ್ಜಲ್, ಆರಿಫ್ ಮತ್ತು ಅವರ 15 ಜನ ಗೆಳೆಯರ ತಂಡ ಕೋವಿಡ್-2ನೇ ಅಲೆಯಲ್ಲಿ ಸಾವನ್ನಪ್ಪಿದ ಅನಾಥ ಮೃತದೇಹಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ದಫನ್ ಮಾಡುವ ಕಾರ್ಯವನ್ನು ಮಾಡುತ್ತಿದ್ದು, ಇದುವರೆಗೂ 25ಕ್ಕೂ ಹೆಚ್ಚು ಶವಸಂಸ್ಕಾರ ನಡೆಸಿದ್ದಾರೆ. ಇದರಲ್ಲಿ 4 ಮಾತ್ರ ಮುಸ್ಲಿಂ ಸಮುದಾಯಕ್ಕೆ ಸೇರಿದವುಗಳಾಗಿವೆ. ಮೃತರ ಕುಂಟುಂಬದಿಂದ ಯಾವುದೇ ಹಣ ಪಡೆಯದೆ ತಮ್ಮ ಕೈಯಿಂದಲೇ ಎಲ್ಲವನ್ನು ಭರಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಅಯಾಯ ಧರ್ಮದ ಸಂಪ್ರದಾಯದ ಪ್ರಕಾರ ಶವ ಸಂಸ್ಕಾರ ನಡೆಸುತ್ತಿದ್ದು, ಇವರ ಕಾರ್ಯಕ್ಕೆ ಕ್ಷೇತ್ರದ ಶಾಸಕ ಬಿಜೆಪಿಯ ಮಸಾಲೆ ಜಯರಾಮ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರಟಗೆರೆ ತಾಲೂಕಿಗೆ ಸಂಬಂಧಿಸಿದಂತೆ ಆರು ಜನರ ತಂಡ ಇಂತಹದ್ದೇ ಕಾರ್ಯದಲ್ಲಿ ತೊಡಗಿದೆ. ಕೊರಟಗೆರೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ನಯಾಜ್ ಮತ್ತು ಸಮಾಜ ಸೇವಕ, ದಲಿತ ಮುಖಂಡ ಜಟ್ಟಿ ಅಗ್ರಹಾರ ನಾಗರಾಜು ಅವರ ನೇತೃತ್ವದಲ್ಲಿ ತಂಡವೊಂದು, ಕುಟುಂಬಸ್ಥರು ಶವಸಂಸ್ಕಾರ ಮಾಡಲು ಹಿಂಜರಿಯುವ ಸಂದರ್ಭದಲ್ಲಿ ತಾವುಗಳೇ ಮುಂದೆ ನಿಂತು ಈ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು 8 ಶವಸಂಸ್ಕಾರಗಳು ಇವರ ತಂಡದಿಂದ ಮಾಡಲಾಗಿದೆ.

ಹಾಗೆಯೇ ತುಮಕೂರು ತಾಲೂಕು ತಹಶೀಲ್ದಾರ್ ಮೋಹನ್‍ಕುಮಾರ್ ಅವರು, ಶವಸಂಸ್ಕಾರಕ್ಕೆ ಮನೆಯವರು ಮುಂದೆ ಬಾರದ ಎರಡು ಪ್ರಕರಣಗಳಲ್ಲಿ ತಾವೇ ಮುಂದೆ ನಿಂತು, ಸಂಪ್ರದಾಯದ ಪ್ರಕಾರ ಶವಸಂಸ್ಕಾರ ನಡೆಸಿ, ಹಿರಿಯ ಅಧಿಕಾರಿಗಳು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವ್ಯಕ್ತಿಯ ಒಳ್ಳೆಯತನವನ್ನು ಆತನ ಶವಯಾತ್ರೆಯಲ್ಲಿ ನೋಡುವ ಅನ್ನುವ ಗಾದೆ ಮಾತಿದೆ. ಆದರೆ ಇದಕ್ಕೆ ತದ್ವಿರುದ್ದ ಎಂಬ ರೀತಿಯಲ್ಲಿ ಈ ಕೊರೋನ ಸಂದರ್ಭದಲ್ಲಿ ಸ್ವತಃ ಕುಟುಂಬಸ್ಥರೇ ಮೃತದೇಹದ ಹತ್ತಿರ ಬರಲು ಹೆದರುತ್ತಿದ್ದಾರೆ. ಈ ಸಂದರ್ಭ ತಮಗೆ ಸಂಬಂಧವೇ ಇಲ್ಲದೆ, ತಮ್ಮ ಜಾತಿ- ಧರ್ಮದವರೂ ಅಲ್ಲದ ಅನೇಕ ಶವಗಳಿಗೆ ಮುಕ್ತಿ ತೋರಿಸುವ ಕೆಲಸವನ್ನು ಜಿಲ್ಲೆಯಲ್ಲಿ ಹಲವು ಯುವಕರ ತಂಡ ಮಾಡುತ್ತಿವೆ. ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೇ ಗೌರವಯುತ ಶವಸಂಸ್ಕಾರ ಮಾಡುತ್ತಿರುವ ಇವರು, ನಮ್ಮ ನಡುವೆ ಇನ್ನೂ ಮಾನವೀಯತೆ ಬದುಕಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

Writer - -ರಂಗರಾಜು ಎನ್.ಡಿ ತುಮಕೂರು

contributor

Editor - -ರಂಗರಾಜು ಎನ್.ಡಿ ತುಮಕೂರು

contributor

Similar News