ತೆರಿಗೆ ಹಣ ಜನರ ಏಳಿಗೆಗಾಗಿ ಬಳಸಿದ್ದಕ್ಕಾಗಿ ಇಂದಿನ ಬಿಜೆಪಿಗರು ಪೋಲಿಯೋ ಮುಕ್ತರಾಗಿರುವುದು: ಕಾಂಗ್ರೆಸ್ ವ್ಯಂಗ್ಯ

Update: 2021-05-17 16:10 GMT

ಬೆಂಗಳೂರು, ಮೇ 17: `ಕಾಮಿಡಿ ಕಿಂಗ್ ನಳಿನ್ ಕುಮಾರ್ ಕಟೀಲ್ ಅವರೇ, ತೆರಿಗೆ ಹಣವನ್ನು ಜನರ ಏಳಿಗೆಗಾಗಿ ಬಳಸಿದ್ದಕ್ಕಾಗಿಯೇ ಇಂದಿನ ಬಿಜೆಪಿಗರು ಪೊಲಿಯೋ ಮುಕ್ತರಾಗಿ ಕೈಕಾಲು ನೆಟ್ಟಗಿರುವುದು, ಸಿಡುಬು, ದಡಾರದಂತಹ ಮಾರಕ ಕಾಯಿಲೆಗಳಿಂದ ಬದುಕುಳಿದಿದ್ದು! ತೆರಿಗೆ ಹಣವನ್ನು ಅನಗತ್ಯ ಪ್ರತಿಮೆಗಳು, `ಸೆಂಟ್ರಲ್ ವಿಸ್ತಾ'ದಂತಹ ದುಬಾರಿ ಪ್ರಚಾರದ ಗಿಮಿಕ್‍ಗಳಿಗೆ ಬಳಸಲಿಲ್ಲ ನಾವು' ಎಂದು ಕಾಂಗ್ರೆಸ್ ಟೀಕಿಸಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಆಳುವ ಸರಕಾರ ವಿಫಲವಾಗಿರುವಾಗ ನೋಡುತ್ತಾ ಕೈ ಕಟ್ಟಿ ಕುಳಿತಿರಲು ಸಾಧ್ಯವಿಲ್ಲ, ನಮ್ಮ ಜನತೆಯನ್ನು ರಕ್ಷಿಸಿಕೊಳ್ಳುವುದು ಕಾಂಗ್ರೆಸ್ ಜವಾಬ್ದಾರಿ. ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಕೋವಿಡ್-19 ಸೋಂಕಿನಿಂದ ಆಗಿರುವ ಲಾಕ್‍ಡೌನ್‍ನಿಂದ ಸಂತ್ರಸ್ತರಾದ ಜನತೆಯ ನೆರವಿಗೆ ನಿಲ್ಲಲಿದೆ ಕಾಂಗ್ರೆಸ್. 
ಬಿಜೆಪಿ ಆಡಳಿತದಲ್ಲಿ ಬದುಕಲು ಹೆಣಗಾಟ, ಸತ್ತರೂ ಪರದಾಟ. ಪ್ರಧಾನಿಗಳ `ನಮಾಮಿ ಗಂಗಾ' ಎಂದರೆ ಇದೇನಾ?' ಎಂದು ಪ್ರಶ್ನಿಸಿದೆ.

`ಇದು ರಾಜ್ಯ ಬಿಜೆಪಿ ಸರಕಾರದ ನಿರ್ಲಕ್ಷ್ಯ ಧೋರಣೆಗೆ ನಿದರ್ಶನ. ಒಂದು ವರ್ಷದ ಅವಧಿಯಲ್ಲಿ ಈ ಸರಕಾರ ನಿದ್ದೆ ಮಾಡುತ್ತಾ, ತಜ್ಞರ ಎಚ್ಚರಿಕೆಯನ್ನೂ ಕಡೆಗಣಿಸಿ ವೈದ್ಯಕೀಯ ವ್ಯವಸ್ಥೆಯನ್ನು ಗಟ್ಟಿಗೊಳಿಸದೆ ಕುಳಿತಿದ್ದರ ಪರಿಣಾಮವೇ ಅಪಾರ ಸಂಖ್ಯೆಯ ಸಾವು ನೋವು. ಕನಿಷ್ಠ ಪಕ್ಷ ವೆಂಟಿಲೇಟರ್‍ಗಳ ಗುಣಮಟ್ಟ ಪರೀಕ್ಷಿಸದಿರುವುದು ಅಕ್ಷಮ್ಯ!' ಎಂದು ಕಾಂಗ್ರೆಸ್ ಟೀಕಿಸಿದೆ.

`ಈ ಹೊಸ ಮಾದರಿಯ ಸೋಂಕನ್ನು ಎದುರಿಸುವ ಬಗ್ಗೆ ಸರಕಾರದ ಕಾರ್ಯತಂತ್ರವೇನು? ಇದರ ಅಧ್ಯಯನಕ್ಕೆ ತಜ್ಞರ ಸಮಿತಿ ನೇಮಿಸಲಾಗಿದೆಯೇ? ಇದನ್ನು ನಿಗ್ರಹಿಸಬಹುದಾದ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸಲಾಗಿದೆಯೇ?
ಇದರ ಚಿಕಿತ್ಸೆಗೆ ಅಗತ್ಯವಾದ ಔಷಧಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳಲಾಗಿದೆಯೇ? ಔಷಧಗಳ ಕಾಳ ಸಂತೆಯನ್ನು ನಿಯಂತ್ರಿಸಲಾಗಿದೆಯೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

`ರಾಜ್ಯದಲ್ಲಿ ಬ್ಲಾಕ್ ಫಂಗಸ್ ಕಾಡಲಾರಂಭಿಸಿದೆ, ಈಗಾಗಲೇ ಕಾಳದಂಧೆಕೋರರು ಶಿಲೀಂದ್ರ ನಿರೋಧಕ ಔಷಧಗಳಿಗೆ ಕೃತಕ ಅಭಾವ ಸೃಷ್ಟಿಸಿದ್ದಾರೆ, ಇಷ್ಟುದಿನ ಕಳೆದರೂ ಔಷಧಗಳ ಕಾಳಸಂತೆ ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾಳಸಂತೆ ನಿಯಂತ್ರಿಸುವ ಕ್ರಮಗಳ ಬಗ್ಗೆ ಇನ್ನೂ ಚಿಂತನೆಯೇ ನಡೆಸಿಲ್ಲ' ಎಂದು ಕಾಂಗ್ರೆಸ್ ದೂರಿದೆ.

`ಕೊರೋನಗೆ ಬೇಜವಾಬ್ದಾರಿತನ ತೋರಿದಂತೆಯೇ ಹೊಸ ಮಾದರಿಯ ಬ್ಲಾಕ್ ಫಂಗಸ್ ಸೋಂಕಿನ ಬಗ್ಗೆಯೂ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ. `ಆತಂಕ ಬೇಡ' ಎನ್ನುತ್ತಿರುವ ಆರೋಗ್ಯ ಸಚಿವ ಡಾ.ಸುಧಾಕರ್ ಅವರೇ, ನೀವು ಡಾಕ್ಟರ್ ಇರಬಹುದೇನೋ, ತಜ್ಞರಲ್ಲ! ನಿರ್ಲಕ್ಷ್ಯ ಬಿಟ್ಟು ಶುರುವಿನಲ್ಲಿಯೇ ಸೋಂಕನ್ನು ನಿಯಂತ್ರಿಸಲು ತಕ್ಷಣ ತಜ್ಞರ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಿ' ಎಂದು ಕಾಂಗ್ರೆಸ್ ಸಲಹೆ ನೀಡಿದೆ.

`ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ರೋಗಿಗಳಿಗೆ ಅಗತ್ಯ ಆಕ್ಸಿಜನ್, ಬೆಡ್, ಔಷಧಿಗಳು, ವೆಂಟಿಲೇಟರ್ ಯಾವುದನ್ನೂ ವ್ಯವಸ್ಥೆ ಮಾಡಲು ಈ ಸರಕಾರದಿಂದ ಸಾಧ್ಯವಾಗುತ್ತಿಲ್ಲ. ಸರಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿ ನಡೆಯಿಂದಾಗಿ ಸಾಮಾನ್ಯ ಜನತೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ' ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ

`ಜನರ ಜೀವ ಉಳಿಸುವುದು ಮುಖ್ಯ, ಅಭಿವೃದ್ಧಿ ಕಾರ್ಯಗಳನ್ನು ನಂತರ ಮಾಡಿಕೊಳ್ಳೋಣ. ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹಣವನ್ನು ಕೋವಿಡ್ ಲಸಿಕೆಗೆ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ. ಜನರಿಗೆ ಉಚಿತವಾಗಿ ಲಸಿಕೆ ನೀಡಲು ಕಾಂಗ್ರೆಸ್ ರೂಪಿಸಿರುವ 100 ಕೋಟಿ ರೂಪಾಯಿ ಯೋಜನೆಗೆ ಸರಕಾರ ಅನುಮತಿ ನೀಡಲಿ. ನಾವೂ ಸರಕಾರದ ಜೊತೆ ಕೈಜೋಡಿಸುತ್ತೇವೆ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News