`ಬ್ಲ್ಯಾಕ್ ಫಂಗಸ್' ಕೊರೋನ ಸೋಂಕಿನಷ್ಟು ಭೀಕರವಲ್ಲ, ಆತಂಕಪಡುವ ಅಗತ್ಯವಿಲ್ಲ: ಆರೋಗ್ಯ ಸಚಿವ ಡಾ.ಸುಧಾಕರ್

Update: 2021-05-17 16:08 GMT

ಬೆಂಗಳೂರು, ಮೇ 17: `ಕಪ್ಪು ಶಿಲೀಂಧ್ರ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಆದರೆ, ಈ ಬಗ್ಗೆ ಜನಸಾಮಾನ್ಯರು ಆತಂಕಪಡುವ ಅಗತ್ಯವಿಲ್ಲ. ಇದು ಕೊರೋನ ವೈರಸ್ ಸೋಂಕಿನಷ್ಟು ಈ ರೋಗ ಭೀಕರವಲ್ಲ. ಕೇಂದ್ರ ಸರಕಾರದಿಂದ ಈ ಕಾಯಿಲೆ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ನಗರದ ಆರೋಗ್ಯ ಸೌಧದಲ್ಲಿ ಕಪ್ಪು ಶಿಲೀಂಧ್ರ ರೋಗದ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾತನಾಡಿದ ಅವರು, `ರಾಜ್ಯದಲ್ಲಿ ಇದುವರೆಗೆ 97 ಜನರಿಗೆ ಕಪ್ಪು ಶಿಲೀಂಧ್ರ ರೋಗ ಬಂದಿದ್ದು, ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ. ಆ ಪೈಕಿ, ಮೂವರು ಬೆಂಗಳೂರಿನವರು. ಒಬ್ಬರು ಕೋಲಾರ ಜಿಲ್ಲೆ ಮೂಲದವರು' ಎಂದು ವಿವರಣೆ ನೀಡಿದರು.

`ಅತಿಯಾದ ಸಕ್ಕರೆ ಕಾಯಿಲೆ(ಮಧುಮೇಹ) ಇರುತ್ತದೆಯೋ ಅವರಿಗೆ ಕೊರೋನ ಸೋಂಕು ತಗುಲಿದ ಸಂದರ್ಭದಲ್ಲಿ ಅತಿಯಾದ ಸ್ಟಿರಾಯಿಡ್ಸ್ ಬಳಸಿದರೆ ಈ ರೋಗ ಬರುವ ಸಾಧ್ಯತೆಗಳಿವೆ. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಕಾಯಿಲೆ ಇರುವವರು ಕೋವಿಡ್‍ನಿಂದ ಗುಣಮುಖರಾದ ಬಳಿಕ ನಿಯಂತ್ರಣದಲ್ಲಿರಬೇಕು. ಕ್ಯಾನ್ಸರ್ ಇರುವವರು, ಅಂಗಾಂಗ ಕಸಿ ಮಾಡಿಸಿಕೊಂಡಿರುವವರಿಗೆ, ಎಚ್‍ಐವಿ ಸೋಂಕು ಇರುವವರಿಗೂ ಕಪ್ಪು ಶಿಲೀಂಧ್ರ ರೋಗ ಬರುವ ಸಾಧ್ಯತೆಗಳಿವೆ' ಎಂದು ಸುಧಾಕರ್ ಮಾಹಿತಿ ನೀಡಿದರು.

ಮಾಹಿತಿ ನೀಡಬೇಕು: ರಾಜ್ಯದಲ್ಲಿ ಯಾರಿಗೆ ಬ್ಲ್ಯಾಕ್ ಫಂಗಸ್ ಸೋಂಕು ಸೋಂಕು ಬಂದರೆ ಸರಕಾರಕ್ಕೆ ತಕ್ಷಣವೇ ಮಾಹಿತಿ ನೀಡಬೇಕು. ಈ ರೋಗವನ್ನು ಮುಚ್ಚಿಟ್ಟರೆ ಕಾನೂನು ಬಾಹಿರ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಶಿಲೀಂದ್ರ ದಾಳಿ ಮಾಡಿ ಮೂಗಿಗೆ ಬರುತ್ತದೆ. ನಂತರ ಕಣ್ಣಿಗೆ ಹಾನಿ ಮಾಡುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.

ಬೆಂಗಳೂರು ಹೊರತುಪಡಿಸಿ ಮೈಸೂರು, ಶಿವಮೊಗ್ಗ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಜಿಮ್ಸ್, ಕಿಮ್ಸ್, ಕೆಎಂಸಿ ಹಾಗೂ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಕಪ್ಪು ಶಿಲೀಂಧ್ರ ರೋಗ ಚಿಕಿತ್ಸೆಗಾಗಿ 40-60 ವಯಲ್ಸ್ ಬೇಕಿದೆ. ನಮಗೆ 1,050ರಷ್ಟು ವಯಲ್ಸ್ ನೀಡಲು ಕೇಂದ್ರ ಮಂಜೂರಾತಿ ನೀಡಿದೆ. ಐಸೋಕೋನೋಸೋಲ್, ಪೋಸೋಕೋನೋಸೋಲ್‍ಗೆ 20 ಸಾವಿರ ವಯಲ್ಸ್‍ಗೆ ನಾವು ಬೇಡಿಕೆ ಇಟ್ಟಿದ್ದೇವೆ. ಇನ್ನು ಮುಂದೆ ವೈದ್ಯರ ಸೂಚನೆ ಇಲ್ಲದೆ ಸ್ಟಿರಾಯಿಡ್ಸ್‍ಗಳನ್ನು ಯಾರೂ ನೀಡುವಂತಿಲ್ಲ ಎಂದು ಅವರು ಸೂಚಿಸಿದರು.

ಕೇಂದ್ರ ಸರಕಾರ ಅಧಿಸೂಚಿತ ರೋಗವಾಗಿದ್ದು, ಇದಕ್ಕೆ ಖಾಸಗಿಯಾಗಿ ಚಿಕಿತ್ಸೆ ನೀಡುವಂತೆ ಇಲ್ಲ. ರೋಗ ಪತ್ತೆಯಾದರೆ ಸರಕಾರದ ಗಮನಕ್ಕೆ ತರುವಂತೆ ಆದೇಶ ಹೊರಡಿಸಲಾಗಿದೆ. ಆರಂಭದಲ್ಲೆ ತೋರಿಸಿಕೊಳ್ಳಬೇಕು. ನಲ್ಲಿ ನೀರು ಬಳಸುವುದರಿಂದ ಕಪ್ಪು ಶಿಲೀಂಧ್ರ ಬರುತ್ತದೆಯೇ ಎಂಬ ಅನುಮಾನವಿದೆ. ಈ ಬಗ್ಗೆ ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದೇವೆ. ಈ ಕಾಯಿಲೆ ಗಾಳಿಯಲ್ಲಿ ಹರಡುವುದಿಲ್ಲ ಎಂದು ಸಚಿವ ಸುಧಾಕರ್ ಇದೇ ವೇಳೆ ಸ್ಪಷ್ಟಪಡಿಸಿದರು.

`ಭಾರತ್ ಬಯೋಟೆಕ್ 1 ಕೋಟಿ ಲಸಿಕೆ ಉತ್ಪಾದನೆ ಮಾಡುತ್ತಿದ್ದು, ರಾಜ್ಯದ ಮಾಲೂರಿನಲ್ಲಿ ಉತ್ಪಾದನೆ ಆರಂಭಿಸಿದರೆ ಜೂನ್ ಅಂತ್ಯಕ್ಕೆ 1 ಕೋಟಿ ಡೋಸ್ ಲಭ್ಯವಾಗಲಿದೆ. ಜುಲೈನಲ್ಲಿ 2ರಿಂದ 3 ಕೋಟಿ, ಆಗಸ್ಟ್ ನಲ್ಲಿ ನಾಲ್ಕೈದು ಕೋಟಿ ಡೋಸ್ ಉತ್ಪಾದನೆ ನಿರೀಕ್ಷೆ ಇದ್ದು, ರಾಜ್ಯದಲ್ಲಿ ಲಸಿಕೆ ನೀಡಲು ಆದ್ಯತೆ ನೀಡಲು ಈಗಾಗಲೇ ಮನವಿ ಮಾಡಲಾಗಿದೆ'
-ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

`ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ಹೋಮ್ ಐಸೋಲೇಷನ್ ಬದಲಿಗೆ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಲಾಗುತ್ತಿದೆ. ಇದೀಗ ಅದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಬರಲಿದೆ. ಹಳ್ಳಿಗಳಲ್ಲಿ ಪ್ರತ್ಯೇಕವಾಗಿ ಇರಲು ಸೂಕ್ತ ವ್ಯವಸ್ಥೆ ಇರುವುದಿಲ್ಲ. ಬಹಳ ಬೇಗ ಬೇರೆಯವರಿಗೆ ರೋಗ ಹರಡುತ್ತದೆ. ಅಲ್ಲದೆ, ಚಿಕಿತ್ಸೆ ಮತ್ತು ಔಷಧಿಗಳ ವ್ಯವಸ್ಥೆಯೂ ಹಳ್ಳಿಗಳಲ್ಲಿ ಇರುವುದಿಲ್ಲ'
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News