ಕುಸ್ತಿಪಟು ಸುಶೀಲ್ ಕುಮಾರ್ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ ಪೊಲೀಸರು

Update: 2021-05-18 04:48 GMT

ಹೊಸದಿಲ್ಲಿ : ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದಿರುವ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಬಂಧನಕ್ಕೆ ದೆಹಲಿ ಪೊಲೀಸರು ಬಲೆ ಬೀಸಿದ್ದು, ಸುಶೀಲ್ ಇರುವಿಕೆ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಕುಸ್ತಿಪಟುವೊಬ್ಬರ ಸಾವಿಗೆ ಕಾರಣವಾದ ಛತ್ರಸಾಲ್ ಸ್ಟೇಡಿಯಂ ಸಂಘರ್ಷಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ರನ್ನು ದೆಹಲಿ ಪೊಲೀಸರು ಹುಡುಕುತ್ತಿದ್ದಾರೆ. ಜತೆಗೆ ತಲೆ ಮರೆಸಿಕೊಂಡಿರುವ ಆತನ ಸಹಚರ ಅಜಯ್ ಕುಮಾರ್ ಬಂಧನಕ್ಕೆ 50 ಸಾವಿರ ರೂ. ಬಹುಮಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

"ಸುಶೀಲ್ ಕುಮಾರ್ ಬಂಧನಕ್ಕೆ ಉಪಯುಕ್ತವಾಗುವ ಮಾಹಿತಿ ನೀಡಿದವರಿಗೆ ಒಂದು ಲಕ್ಷ ಮತ್ತು ಅವರ ಸಹಚರ ಅಜಯ್ ಕುರಿತು ಮಾಹಿತಿ ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ವಾರ ದೆಹಲಿ ಕೋರ್ಟ್, ಸುಶೀಲ್ ಕುಮಾರ್ ಹಾಗೂ ಇತರ ಆರು ಮಂದಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಇದಕ್ಕೂ ಮುನ್ನ ಸುಶೀಲ್ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು. ಈ ಜಗಳದಲ್ಲಿ ಸಂತ್ರಸ್ತರಾದವರ ಹೇಳಿಕೆಗಳನ್ನು ಪೊಲೀಸರು ಈಗಾಗಲೇ ದಾಖಲಿಸಿಕೊಂಡಿದ್ದಾರೆ.

ಮಾಡೆಲ್ ಟೌನ್ ಪ್ರದೇಶದ ಫ್ಲಾಟ್ ಖಾಲಿ ಮಾಡುವ ವಿಚಾರದಲ್ಲಿ ಈ ಜಗಳ ನಡೆದಿತ್ತು. ಎಫ್‌ಐಆರ್‌ನಲ್ಲಿ ಹೆಸರು ಇರುವ ಸುಶೀಲ್ ಕುಮಾರ್ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ದೆಹಲಿ-ಎನ್‌ಸಿಆರ್ ಪ್ರದೇಶ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಹುಡುಕಾಟ ನಡೆದಿದೆ. ಈ ಗಲಾಟೆ ನಡೆದಾಗ ಸುಶೀಲ್ ಕುಮಾರ್ ಸ್ಥಳದಲ್ಲಿದ್ದರು ಎಂದು ಸಂತ್ರಸ್ತರು ಹೇಳಿದ್ದಾರೆ. ಕಳೆದ ಮಂಗಳವಾರ ನಡೆದ ಈ ಜಗಳದಲ್ಲಿ 23 ವರ್ಷದ ಉದಯೋನ್ಮುಖ ಕುಸ್ತಿಪಟು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News