ಔಷಧಿ ಖರೀದಿಗೆ ತೆರಳಿದ ಯುವಕನನ್ನು ಥಳಿಸಿ ಕೊಂದ ಗುಂಪು: ಆರೋಪ

Update: 2021-05-18 07:31 GMT
ಆಸಿಫ್ ಖಾನ್‌ (Photo: The Quint)

ಹೊಸದಿಲ್ಲಿ: ಔಷಧಿ ಖರೀದಿಸಲು ತನ್ನ ಇಬ್ಬರು ಸೋದರಸಂಬಂಧಿಗಳೊಂದಿಗೆ ಕಾರಿನಲ್ಲಿ ತೆರಳಿದ್ದ 25 ವರ್ಷದ ಆಸಿಫ್ ಖಾನ್‌ನನ್ನು ಅವರ ಗ್ರಾಮದ ಜನರೇ ಅಪಹರಿಸಿದ ಕೆಲವೇ ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ ಎಂದು NDTV ವರದಿ ಮಾಡಿದೆ.

ಹರ್ಯಾಣದ ನುಹ್ ಜಿಲ್ಲೆಯ ಖೇಡಾ ಖಲೀಲ್ ಪುರ ಗ್ರಾಮದ ನಿವಾಸಿ ಆಸಿಫ್ ಜಿಮ್ ತರಬೇತುದಾರರಾಗಿದ್ದು, ತನ್ನ ಸೋದರಸಂಬಂಧಿ ಸಹೋದರರೊಂದಿಗೆ ಔಷಧ ತೆಗೆದುಕೊಂಡು ಮನೆಗೆ ಮರಳುತ್ತಿದ್ದಾಗ ಅಪಹರಿಸಲಾಗಿತ್ತು. 12ರಷ್ಟಿದ್ದ ಗುಂಪು ಮೊದಲಿಗೆ ಕಾರನ್ನು ಅಡ್ಡಗಟ್ಟಿ ಥಳಿಸಿತು. ಆಸಿಫ್ ನನ್ನು ಅಪಹರಿಸಿ, ಅವರ ಸೋದರ ಸಂಬಂಧಿಗಳನ್ನು ಬಿಟ್ಟುಬಿಟ್ಟಿದ್ದರು. ಜನರ ಗುಂಪು ಆಸಿಫ್‌ಗೆ ಮಾರಣಾಂತಿಕವಾಗಿ ಥಳಿಸಿ ಹತ್ಯೆಗೈದಿದ್ದು, ಇನ್ನಿಬ್ಬರಿಗೆ ತೀವ್ರ ಸ್ವರೂಪದ ಗಾಯವಾಗಿದೆ ಎಂದು ವರದಿಯಾಗಿದೆ.

ಘಟನೆಯು ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಯಿತು ಹಾಗೂ  ಸ್ಥಳೀಯರು ದಾಳಿಕೋರರನ್ನು ಬಂಧಿಸುವಂತೆ ಒತ್ತಾಯಿಸಿ ರಸ್ತೆಗಳನ್ನು ತಡೆದರು. ನಂತರ ಪೊಲೀಸರು ಪ್ರತಿಭಟನಾ ನಿರತ ಸ್ಥಳೀಯರನ್ನು ಚದುರಿಸಲು ಯತ್ನಿಸಿದಾಗ ಸ್ಥಳೀಯರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.

ಆಸಿಫ್ ಖಾನ್ ನನ್ನು ಕೋಲುಗಳು, ರಾಡ್ ಗಳು ಹಾಗೂ ಕಲ್ಲುಗಳಿಂದ ಹಲ್ಲೆ ಮಾಡಿ ಗುಂಪೊಂದು ಹತ್ಯೆಗೈದಿದೆ ಎಂದು ಆಸಿಫ್ ಕುಟುಂಬದವರು ಆರೋಪಿಸಿದ್ದಾರೆ.

ದುಷ್ಕರ್ಮಿಗಳು ಆಸಿಫ್ ಮೃತದೇಹವನ್ನು ಸೊಹ್ನಾದ ಹಳ್ಳಿಯಲ್ಲಿ ಎಸೆದಿದ್ದಾರೆ ಎಂದು ವರದಿಯಾಗಿದೆ.

ಘಟನೆಗೆ "ಹಿಂದೂ-ಮುಸ್ಲಿಂ ಆಯಾಮ ಇಲ್ಲ’’ ಎಂದು ನುಹ್ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಸಿಂಗ್ ಹೇಳಿದ್ದಾರೆ. ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಜಗಳವನ್ನು, ಇಲ್ಲಿಯ ತನಕ  ಗ್ರಾಮದ ಹಿರಿಯ ಸದಸ್ಯರು ಬಗೆಹರಿಸುತ್ತಿದ್ದರು. ಪ್ರಮುಖ ಆರೋಪಿಗಳು ಆಸಿಫ್ ಅವರ ಗ್ರಾಮ, ಖೇಡಾ ಖಲೀಲ್ಪುರಕ್ಕೆ ಸೇರಿದವರಾಗಿದ್ದು, ಅವರಲ್ಲಿ ಕೆಲವರನ್ನು ಬಂಧಿಸಲಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

"ಎರಡೂ ಗುಂಪುಗಳು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ  ಹಲ್ಲೆ ಪ್ರಕರಣಗಳನ್ನು ಎದುರಿಸುತ್ತಿವೆ. ಆರು ಆರೋಪಿಗಳನ್ನು ಬಂಧಿಸಲಾಗಿದೆ. ಎಸ್‌ಐಟಿಯನ್ನು ರಚಿಸಲಾಗಿದೆ, ಅದು ಪ್ರಕರಣದ ತನಿಖೆ ನಡೆಸುತ್ತಿದೆ" ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News