ಸಾಲ ಮರುಪಾವತಿ ವಿಳಂಬ: ಮಲೆನಾಡಿನ ಹೆಸರಾಂತ ಸಹಕಾರಿ ಸಾರಿಗೆ ಸಂಸ್ಥೆಯ ಆಸ್ತಿ ಜಪ್ತಿ

Update: 2021-05-18 16:01 GMT

ಚಿಕ್ಕಮಗಳೂರು, ಮೇ 18: ಕಾಫಿನಾಡಿನ ಕೀರ್ತಿಯನ್ನು ಏಷ್ಯಾ ಖಂಡದಾದ್ಯಂತ ಪಸರಿಸಿದ್ದ, ಮಾದರಿ ಸಾರಿಗೆ ಸಂಸ್ಥೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದ, ಕಾರ್ಮಿಕರೇ ಮಾಲಕರಾಗಿ ಸಹಕಾರಿ ತತ್ವದ ಮೇಲೆ 3 ದಶಕಗಳ ಹಿಂದೆ ಸ್ಥಾಪನೆಗೊಂಡಿದ್ದ, ಕೊಪ್ಪ ಪಟ್ಟಣದಿಂದ ಆರಂಭಿಸಿ ನೆರೆಯ ನಾಲ್ಕು ಜಿಲ್ಲೆಗಳಲ್ಲಿ ಸುಗಮ ಸಾರಿಗೆ ಸೇವೆ ಮೂಲಕ ಮನೆಮಾತಾಗಿದ್ದ ಸಹಕಾರಿ ಸಾರಿಗೆ ಸಂಸ್ಥೆಗೆ ಕೊನೆಗೂ ಬೀಗಮುದ್ರೆ ಬಿದ್ದಿದೆ.

ತೀವ್ರ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಕಳೆದ ಒಂದೂವರೆ ವರ್ಷದಿಂದ ರಾಜ್ಯಾದ್ಯಂತ ಸುದ್ದಿಯಲ್ಲಿದ್ದ ಸಹಕಾರಿ ಸಾರಿಗೆ ಸಂಸ್ಥೆ, ಹೆಚ್ಚಿದ ಆರ್ಥಿಕ ಹೊರೆಯಿಂದಾಗಿ ಕಳೆದ 2019ರಿಂದ ಸಂಸ್ಥೆಯ 72ಕ್ಕೂ ಹೆಚ್ಚು ಬಸ್‍ಗಳ ಸೇವೆಯನ್ನು ಸ್ಥಗಿತಗೊಳಿಸಿತ್ತು. ಸಂಸ್ಥೆಯ ಆಡಳಿತ ಮಂಡಳಿ ಸಹಕಾರಿ ಸಾರಿಗೆ ಬಸ್‍ಗಳ ಸೇವೆಯನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಅವಿರತ ಪ್ರಯತ್ನಗಳನ್ನು ಮಾಡುತ್ತಿದ್ದು, ಸಂಸ್ಥೆಯ ಬಸ್‍ಗಳು ಇನ್ನೇನು ರಸ್ತೆಗಿಳಿಯಲಿವೆ ಎಂಬ ಹಂತದಲ್ಲಿ ಖಾಸಗಿ ಹಣಕಾಸು ಸಂಸ್ಥೆಯೊಂದು ಸಾಲ ಮರುಪಾವತಿ ಮಾಡದ ಕಾರಣ ಮುಂದಿಟ್ಟುಕೊಂಡು ಸಂಸ್ಥೆಯ ಆಸ್ತಿಗಳ ಜಪ್ತಿ ಮಾಡಲಾಗಿದೆ. 

ಸಹಕಾರಿ ಸಾರಿಗೆ ಸಂಸ್ಥೆಯನ್ನು ಮತ್ತೆ ಪುನಾರಂಭಗೊಳಿಸುವ ಉದ್ದೇಶದಿಂದ ಸಂಸ್ಥೆಯ ಆಡಳಿತ ಮಂಡಳಿ ತನ್ನ ಹೆಸರಿನಲ್ಲಿರುವ ಭೂಮಿಯನ್ನು ಅಡಮಾನವಿರಿಸಿ ಚೆನ್ನೈ ಮೂಲದ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಲಿ. ಎಂಬ ಹಣಕಾಸು ಸಂಸ್ಥೆಯಿಂದ ಪಡೆದ ಸಾಲ ಮರುಪಾವತಿ ಮಾಡಿಲ್ಲ ಎಂದು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸೋಮವಾರ ಪೊಲೀಸ್ ಭದ್ರತೆಯಲ್ಲಿ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ನವರು ಸಹಕಾರಿ ಸಾರಿಗೆ ಸಂಸ್ಥೆಯ ಆಸ್ತಿಯನ್ನು ಸೀಝ್ ಮಾಡಿದ್ದಾರೆ.

ಸಂಸ್ಥೆಯ ಆಸ್ತಿ ಜಪ್ತಿಗೆ ಕಾರಣ ಏನು ?
ತೀವ್ರ ಆರ್ಥಿಕ ಸಂಕಷ್ಟದಿಂದ ಕಳೆದ 2019ರಲ್ಲಿ ಸಾರಿಗೆ ಬಸ್‍ಗಳ ಸೇವೆಯನ್ನು ಸ್ಥಗಿತಗೊಳಿಸಲು ಸಂಸ್ಥೆಯ ಆಡಳಿತ ಮಂಡಳಿ ನಿರ್ಧರಿಸಿತ್ತು. ನಿರ್ಧಾರಕ್ಕೆ ಇಡೀ ಮಲೆನಾಡಿನ ಜನರು ಮನನೊಂದು ಸಹಕಾರಿ ಸಂಸ್ಥೆಯ ಬಸ್‍ಗಳ ಸೇವೆಯನ್ನು ಪುನಾರಂಭಿಸುವಂತೆ ಆಗ್ರಹಿಸಿದ್ದರು. ಅಲ್ಲದೇ ಸರಕಾರ ಸಂಸ್ಥೆಯ ನೆರವಿಗೆ ಬರಬೇಕೆಂದೂ ಜನಪ್ರತಿನಿಧಿಗಳೂ ಸೇರಿದಂತೆ ಸಾರ್ವಜನಿಕರು, ಸಂಸ್ಥೆಯ ಅಭಿಮಾನಿಗಳು ಸರಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಹಾಲಿ ಬಿಜೆಪಿ ಸರಕಾರದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಳೆದ ವರ್ಷ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದರು. 

ಅದರಂತೆ ಸಹಕಾರಿ ಇಲಾಖೆಯಿಂದ ವರದಿ ನೀಡಲು ಸೂಚಿಸಿದ್ದರು. ಇಲಾಖಾಧಿಕಾರಿಗಳ ತಂಡ ಸಹಕಾರಿ ಸಂಸ್ಥೆಯ ಆರ್ಥಿಕ ಸಂಕಷ್ಟಕ್ಕೆ ಕಾರಣವಾದ ಅಂಶಗಳನ್ನು ದಾಖಲಿಸಿ ಸರಕಾರಕ್ಕೆ ಸಲ್ಲಿಸಿದ್ದು, ಈ ವರದಿ ಆಧಾರದ ಮೇಲೆ ಸರಕಾರ ತೆರಿಗೆ ವಿನಾಯಿತಿ, ಶಾಲಾ ಕಾಲೇಜು ಮಕ್ಕಳಿಗೆ ಸಂಸ್ಥೆ ನೀಡುತ್ತಿದ್ದ ಉಚಿತ ಪ್ರಯಾಣದ ಶುಲ್ಕವನ್ನು ಭರಿಸಲು ಹಣಕಾಸು ಇಲಾಖೆಗೆ ಪತ್ರ ಬರೆದಿತ್ತು. ಸರಕಾರದ ನೆರವು ಸಿಗುವ ಆಶಾಭಾವನೆಯಿಂದ ಸಂಸ್ಥೆಯ ಆಡಳಿತ ಮಂಡಳಿ ಸಂಸ್ಥೆಯ ಪುನಾರಂಭದ ಉದ್ದೇಶದಿಂದ ಚೆನ್ನೈ ಮೂಲದ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಎಂಬ ಖಾಸಗಿ ಹಣಕಾಸು ಸಂಸ್ಥೆಯ ಕೊಪ್ಪ ಶಾಖೆಯಿಂದ 1 ಕೋಟಿ 10 ಲಕ್ಷ ರೂ. ಸಾಲ ಪಡೆದಿತ್ತು. ಅಲ್ಲದೇ ಮಂಗಳೂರು ಮೂಲದ ಖಾಸಗಿ ಸಾರಿಗೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸಹಕಾರಿ ಸಾರಿಗೆ ಸಂಸ್ಥೆಯ ಬಸ್‍ಗಳ ಸಾರಿಗೆ ಸೇವೆಯನ್ನು ಪುನಾರಂಭಕ್ಕೆ ಅಗತ್ಯವಿದ್ದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು.

ಆದರೆ ಕಳೆದ ಮಾರ್ಚ್ ತಿಂಗಳಿಂದ ಇಡೀ ದೇಶವನ್ನು ಕಾಡುತ್ತಿರುವ ಕೊರೋನ ಸೋಂಕಿನ ಕಾರಣಕ್ಕೆ ಸರಕಾರ ಲಾಕ್‍ಡೌನ್ ಘೋಷಣೆ ಮಾಡಿದ ಪರಿಣಾಮ ಸಹಕಾರಿ ಸಾರಿಗೆ ಸಂಸ್ಥೆಯ ಬಸ್‍ಗಳು ರಸ್ತೆಗಿಳಿಯಲು ಸಾಧ್ಯವಾಗಿರಲಿಲ್ಲ. ಲಾಕ್‍ಡೌನ್ ಕಾರಣಕ್ಕೆ ಆದಾಯವಿಲ್ಲದೇ ಫೈನಾನ್ಸ್ ನಿಂದ ಪಡೆದ ಸಾಲದ ಕಂತು ಮರುಪಾವತಿಯೂ ಸಾಧ್ಯವಾಗಿರಲಿಲ್ಲ. ಲಾಕ್‍ಡೌನ್ ತೆರವಿನ ಬಳಿಕ ಬಸ್‍ಗಳನ್ನು ರಸ್ತೆಗಿಳಿಸುವ ಸಿದ್ಧತೆ ನಡೆಯಿತಾದರೂ ಸದ್ಯ ಮತ್ತೆ ಲಾಕ್‍ಡೌನ್ ಆದೇಶ ಜಾರಿಯಾಗಿರುವ ಪರಿಣಾಮ ಸಹಕಾರಿ ಸಾರಿಗೆ ಸಂಸ್ಥೆಯ ಬಸ್‍ಗಳು ರಸ್ತೆಗೆ ಇಳಿಯಲೇ ಇಲ್ಲ. ಪರಿಣಾಮ ಸಂಸ್ಥೆ ಪಡೆದ ಸಾಲದ ಕಂತು ಮರುಪಾವತಿಯೂ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಮೊರೆ ಹೋಗಿದ್ದು, ಜಿಲ್ಲಾಧಿಕಾರಿ ಆಸ್ತಿ ಜಪ್ತಿಗೆ ಆದೇಶ ನೀಡಿದ್ದರ ಪರಿಣಾಮ ಸಹಕಾರಿ ಸಾರಿಗೆ ಸಂಸ್ಥೆಗೆ ಬೀಗ ಬೀಳುವಂತಾಗಿದೆ.

ಮಾನವೀಯತೆ ಮರೆತ ಡಿಸಿ: ಸಂಸ್ಥೆಯ ಆಡಳಿತ ಮಂಡಳಿ ಬೇಸರ
ಸಹಕಾರಿ ಸಾರಿಗೆ ಸಂಸ್ಥೆ ಎಂಬ ಹಡಗು ಇನ್ನೇನು ಮುಳುಗಿಯೇ ಬಿಟ್ಟಿತು ಎಂಬ ಹೊತ್ತಿನಲ್ಲಿ ಆಡಳಿತ ಮಂಡಳಿ ಸಂಸ್ಥೆಯ ಪುನಾರಂಭಕ್ಕೆ ಹಲವು ಸಾರಿಗೆ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದು, ಆರಂಭದಲ್ಲಿ ಬೆಂಗಳೂರು ಮೂಲದ ಖಾಸಗಿ ಸಾರಿಗೆ ಸಂಸ್ಥೆಯ ಬಸ್‍ಗಳ ಸೇವೆ ಆರಂಭಿಸಲು ಮುಂದೆ ಬಂದಿತ್ತು. ಆದರೆ ಕಡೆ ಗಳಿಗೆಯಲ್ಲಿ ಅವರು ಒಪ್ಪಂದಕ್ಕೆ ಮುಂದಾಗಿರಲಿಲ್ಲ. ನಂತರ ಆಡಳಿತ ಮಂಡಳಿ ಮಂಗಳೂರು ಮೂಲದ ಖಾಸಗಿ ಸಾರಿಗೆ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ಒಪ್ಪಂದವನ್ನೂ ಮಾಡಿಕೊಂಡಿದ್ದರು. ಒಪ್ಪಂದಂತೆ ಮೇ 7ರಂದು ಸಹಕಾರಿ ಸಾರಿಗೆ ಸಂಸ್ಥೆ ಬಸ್‍ಗಳು ರಸ್ತೆಗಿಳಿಯಬೇಕಿತ್ತು. ಆದರೆ ಇದೇ ವೇಳೆ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲೆ ಇದು ಸಾಧ್ಯವಾಗಿಲ್ಲ. ಲಾಕ್‍ಡೌನ್ ತೆರವಿನ ಬಳಿಕ ಸಹಕಾರಿ ಸಾರಿಗೆ ಬಸ್‍ಗಳು ಮಂಗಳೂರು ಮೂಲದ ಖಾಸಗಿ ಸಾರಿಗೆ ಸಂಸ್ಥೆಯ ನೇತೃತ್ವದಲ್ಲಿ ರಸ್ತೆಗಿಳಿಯಲಿದ್ದವು. ಆದರೆ ಲಾಕ್‍ಡೌನ್ ಅವಧಿಯಲ್ಲಿ ಆದಾಯವಿಲ್ಲದೇ ಸಂಕಷ್ಟದಲ್ಲಿದ್ದ ಸಂಸ್ಥೆಯ ಆಸ್ತಿಯನ್ನು ಶ್ರೀರಾಮ್ ಟ್ರಾನ್ಸ್ ಪೋರ್ಟ್‍ನ ದೂರಿನ ಮೇರೆಗೆ ಜಿಲ್ಲಾಧಿಕಾರಿ ಆಸ್ತಿ ಜಪ್ತಿಗೆ ಆದೇಶ ನೀಡಿದ್ದು, ಜಿಲ್ಲಾಧಿಕಾರಿ ಲಾಕ್‍ಡೌನ್ ಅವಧಿಯಲ್ಲಿ ಸಾಲ ವಸೂಲಿಗೆ ಆದೇಶ ನೀಡುವ ಮೂಲಕ ಮಾನವೀಯತೆ ಮರೆತಿದ್ದಾರೆ ಎಂದು ಸಹಕಾರಿ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿ ಬೇಸರ ವ್ಯಕ್ತಪಡಿಸಿದೆ. ಲಾಕ್‍ಡೌನ್ ಅವಧಿಯಲ್ಲಿ ಸಾಲ ವಸೂಲಾತಿಯನ್ನು ಮುಂದೂಡಿ ಸರಕಾರವೇ ವಿನಾಯಿತಿ ನೀಡಿದೆ. ಆದರೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಕೊಪ್ಪ ತಹಶೀಲ್ದಾರ್ ಲಾಕ್‍ಡೌನ್ ಸಂದರ್ಭದಲ್ಲಿ ಅಮಾನುಷವಾಗಿ ವರ್ತಿಸುವ ಮೂಲಕ ಮಲೆನಾಡಿನ ಜನರಲ್ಲಿ ಗೊಂದಲ ಮೂಡಿಸಿದ್ದಾರೆಂದು ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.

ನ್ಯಾಯಲಯದ ಮೊರೆ ಹೋಗಲು ಸಿದ್ಧತೆ: ಲಾಕ್‍ಡೌನ್ ಅವಧಿಯಲ್ಲಿ ಎಲ್ಲ ಸಾರಿಗೆ ಸಂಸ್ಥೆಗಳು ಸಂಕಷ್ಟದಲ್ಲಿವೆ. ಸರಕಾರದ ಸಾರಿಗೆ ಸೇವೆಯೂ ಸ್ತಬ್ಧಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಯಾವ ಒತ್ತಡ ಮಣಿದು ಶ್ರೀರಾಮ್ ಟ್ರಾನ್ಸ್ ಪೋರ್ಟ್ ಲಿ. ಪರ ಆದೇಶ ಹೊರಡಿಸಿದ್ದಾರೋ ಗೊತ್ತಿಲ್ಲ. ಹಣಕಾಸು ಸಂಸ್ಥೆಯಿಂದ ಪಡೆದ ಸಾಲವನ್ನು ಮರುಪಾವತಿ ಮಾಡುತ್ತಲೇ ಬಂದಿದ್ದೇವೆ. ಲಾಕ್‍ಡೌನ್ ಜಾರಿಯಾದಾಗಿನಿಂದ ಸಾಲ ಮರುಪಾವತಿಗೆ ಸಮಸ್ಯೆಯಾಗಿದೆ. ಸಹಕಾರಿ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ಸಂಬಂಧ ಮಂಗಳೂರು ಮೂಲದ ಖಾಸಗಿ ಸಾರಿಗೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವರಿಂದ ಮೊದಲ ಕಂತಿನ ಹಣ ಬರುವುದು ತಡವಾಗಿದ್ದರಿಂದ  ಸಾಲ ಮರುಪಾವತಿ ಸಾಧ್ಯವಾಗಿಲ್ಲ. ಜಿಲ್ಲಾಡಳಿತ ಇದನ್ನು ಪರಿಶೀಲಿಸಿ, ಲಾಕ್‍ಡೌನ್ ಸಂದರ್ಭ ಆಸ್ತಿಜಪ್ತಿಗೆ ಅವಕಾಶ ನೀಡಬಾರದಿತ್ತು. ಸಹಕಾರಿ ತತ್ವದಡಿಯಲ್ಲಿ ಜನಪರ ಸೇವೆ ನೀಡುವ ಸಾರಿಗೆ ಸಂಸ್ಥೆಯೊಂದಿಗೆ ಜಿಲ್ಲಾಧಿಕಾರಿಯ ಇಂತಹ ನಡೆ ನಿರೀಕ್ಷಿಸಿರಲಿಲ್ಲ. ಜಪ್ತಿ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಲಾಗಿದೆ ಎಂದು ಸಹಕಾರಿ ಸಂಸ್ಥೆಯ ಅಧ್ಯಕ್ಷ ಧರ್ಮಪ್ಪ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

ಸರಕಾರದ ನೆರವು ಅತ್ಯಗತ್ಯ: ಸಹಕಾರಿ ಸಾರಿಗೆ ಬಸ್‍ಗಳ ಸೇವೆ ಸ್ಥಗಿತಗೊಂಡಿದ್ದ ಅವಧಿಯಲ್ಲಿ ಸರಕಾರ ನೆರವಿನ ಹಸ್ತ ನೀಡಲು ಮುಂದಾಗಿತ್ತು. ಸಹಕಾರಿ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯ ಆರ್ಥಿಕ ಹೊರೆ ತಪ್ಪಿಸಲು ಸಹಕಾರಿ ಇಲಾಖೆ ಮೂಲಕ ಸರಕಾರ ವರದಿಯನ್ನೂ ತರಿಸಿಕೊಂಡಿದ್ದು, ಸರಕಾರ ಸಹಕಾರಿ ಸಾರಿಗೆಗೆ ತೆರಿಗೆ ವಿನಾಯಿತಿ, ವಿದ್ಯಾರ್ಥಿ ಪಾಸ್‍ಗಳ ಶುಲ್ಕವನ್ನು ಪಾವತಿಸಬೇಕಿದೆ. ಈ ಸಂಬಂಧ ಸರಕಾರ ಹಣಕಾಸು ಇಲಾಖೆಗೆ ಪತ್ರ ಬರೆದು ಸುಮ್ಮನಾಗಿದೆಯೇ ಹೊರತು ಸಂಸ್ಥೆಗೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಸರಕಾರ ತನ್ನ ಭರವಸೆ ಈಡೇರಿಸಿದಲ್ಲಿ ಸಹಕಾರಿ ಸಾರಿಗೆ ಸಂಸ್ಥೆಯ ಪುನಃಶ್ಚೇತನ ಸಾಧ್ಯ ಎಂಬುದು ಸಂಸ್ಥೆಯ ಆಡಳಿತ ಮಂಡಳಿ ಮನವಿಯಾಗಿದೆ.

ಸಂಸ್ಥೆಯು 72ಕ್ಕೂ ಹೆಚ್ಚು ಬಸ್‍ಗಳನ್ನು ಹೊಂದಿದ್ದು, ಕಳೆದ ಒಂದೂವರೆ ವರ್ಷಗಳಿಂದ ಈ ಬಸ್‍ಗಳು ರಸ್ತೆಗಿಳಿದಿಲ್ಲ. ಪರಿಣಾಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 300ಕ್ಕೂ ಹೆಚ್ಚು ಕಾರ್ಮಿಕರ ಬದುಕು ಅತಂತ್ರವಾಗಿದೆ, ಕಾರ್ಮಿಕರ ವೇತನ, ಪಿಎಫ್ ಸೇರಿದಂತೆ ಇತರ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ಸರಕಾರದ ನೆರವಿನೊಂದಿಗೆ ಸಂಸ್ಥೆಯ ಬಸ್‍ಗಳು ಮತ್ತೆ ಸಾರಿಗೆ ಸೇವೆಗಿಳಿದಲ್ಲಿ ಮಾತ್ರ ಮಲೆನಾಡಿನ ಹೆಮ್ಮೆಯ ಸಾರಿಗೆ ಸಂಸ್ಥೆ ಹಾಗೂ ಕಾರ್ಮಿಕರು ಉಳಿಯಲು ಸಾಧ್ಯವಿದೆ.

ಸಹಕಾರಿ ತತ್ವದ ಮೇಲೆ ಆರಂಭವಾಗಿ ಕಾರ್ಮಿಕರೇ ಮಾಲಕರಾಗಿದ್ದ, ಮಲೆನಾಡಿನ ಜನರ ಸಾರಿಗೆ ಸಮಸ್ಯೆಯನ್ನು ನೀಗಿಸಿ ನಾಲ್ಕು ಜಿಲ್ಲೆಗಳಲ್ಲಿ 3 ದಶಕಗಳಿಂದ ಉತ್ತಮ ಸಾರಿಗೆ ಸೇವೆ ನೀಡುತ್ತ ಜನಮನ ಗೆದ್ದಿದ್ದ ಸಹಕಾರಿ ಸಾರಿಗೆ ಸಂಸ್ಥೆ ಜಿಲ್ಲೆ, ರಾಜ್ಯ, ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿದ್ದ ಸಂಸ್ಥೆಯಾಗಿದೆ. ಇಂತಹ ಹೆಮ್ಮೆಯ ಸಾರಿಗೆ ಸಂಸ್ಥೆಯ ಪುನಾರಂಭಕ್ಕೆ ಸರಕಾರ ನೆರವಾಗಲಿದೆ ಎಂದು ಕಾಫಿನಾಡಿನ ಜನರು ಆಶಾಭಾವನೆ ಹೊಂದಿದ್ದರು. ಆದರೆ ಮಂಗಳವಾರ ಬೆಳಗ್ಗೆ ಸಹಕಾರಿ ಸಾರಿಗೆ ಸಂಸ್ಥೆಯ ಆಸ್ತಿ ಜಪ್ತಿ ಮಾಡಿರುವ ಸುದ್ದಿ ಕಾಫಿನಾಡಿನ ಜನರಿಗೆ ಅಘಾತ ನೀಡಿದೆ.

ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಹಣಕಾಸು ಸಂಸ್ಥೆಯಿಂದ ಸಹಕಾರಿ ಸಾರಿಗೆ ಸಂಸ್ಥೆಯ 1 ಎಕರೆ ಭೂಮಿ ಆಧಾರದ ಮೇರೆಗೆ 1.20 ಕೋ. ರೂ. ಸಾಲ ಮಾಡಿದ್ದೇವೆ. ಈ ಪೈಕಿ 96 ಲಕ್ಷ ಸಾಲ ತೀರಿಸಲಾಗಿದೆ. ಕೋವಿಡ್ ಕಾರಣದಿಂದಾಗಿ ಬಾಕಿ ಸಾಲ ಮರುಪಾವತಿ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಸಂಸ್ಥೆಯ ಭೂಮಿಯನ್ನು ಜಪ್ತಿ ಮಾಡಿದ್ದಾರೆ. ಸಹಕಾರಿ ಸಾರಿಗೆ ಸಂಸ್ಥೆ ಸಾರಿಗೆ ಬಸ್‍ಗಳ ಸೇವೆ ಆರಂಭಕ್ಕೆ ಮಂಗಳೂರಿನ ಖಾಸಗಿ ಸಾರಿಗೆ ಸಂಸ್ಥೆಯವರೊಂದಿಗೆ ಒಪ್ಪಂದವಾಗಿದೆ. ಲಾಕ್‍ಡೌನ್ ಕಾರಣಕ್ಕೆ ಬಸ್‍ಗಳ ಸೇವೆ ಸಾಧ್ಯವಾಗಿಲ್ಲ. ಲಾಕ್‍ಡೌನ್ ತೆರವಿನ ಬಳಿಕ ಎಲ್ಲವೂ ಸರಿಯಾಗಲಿದೆ. ಸಹಕಾರಿ ಸಾರಿಗೆ ಬಸ್‍ಗಳ ಸಂಚಾರ ಮತ್ತೆ ಪುನಾರಂಭವಾಗಲಿದೆ. ಒಪ್ಪಂದದಂತೆ ಮಂಗಳೂರಿನ ಸಾರಿಗೆ ಸಂಸ್ಥೆಯವರು 46 ಲಕ್ಷ ರೂ. ಅನ್ನು ಈ ಹಿಂದೆಯೇ ನೀಡಿದೆ. ಅದರಲ್ಲಿ ಸಂಸ್ಥೆಯ ಕಾರ್ಮಿಕರ ವೇತನ ನೀಡಿದ್ದು, ಬಾಕಿ ಇದ್ದ ಪಿಎಫ್ ಹಣದ ಪೈಕಿ 8 ಲಕ್ಷದಷ್ಟು ಹಣವನ್ನು ಜಮೆ ಮಾಡಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಸಂಸ್ಥೆಯ ಆಸ್ತಿ ಜಪ್ತಿಗೆ ಜಿಲ್ಲಾಧಿಕಾರಿ ಆದೇಶ ನೀಡಿರುವುದು ಸರಿಯಲ್ಲ.
- ಧರ್ಮಪ್ಪ, ಅಧ್ಯಕ್ಷ, ಸಹಕಾರಿ ಸಾರಿಗೆ ಸಂಸ್ಥೆ, ಕೊಪ್ಪ

ಸಹಕಾರಿ ಸಾರಿಗೆ ಸಂಸ್ಥೆಯು ಸಹಕಾರಿ ಇಲಾಖೆ ನಿಬಂಧನೆಗಳಡಿಯಲ್ಲಿ ನಡೆಯುತ್ತಿದೆ. ಡೀಸೆಲ್ ಬೆಲೆ ಏರಿಕೆ, ಇನ್ಶೂರೆನ್ಸ್ ಶುಲ್ಕ ಹೆಚ್ಚಳ, ತೆರಿಗೆ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಹಾಗೂ ಮಲೆನಾಡಿನಲ್ಲಿ ಸರಕಾರಿ ಸಾರಿಗೆ ಬಸ್‍ಗಳ ಪೈಪೋಟಿ ಕಾರಣಕ್ಕೆ ಸಂಸ್ಥೆ ನಷ್ಟ ಅನುಭವಿಸಿತ್ತು. ಈ ಸಂಬಂಧ ಸರಕಾರ ಸಹಕಾರಿ ಇಲಾಖೆ ಮೂಲಕ ವರದಿ ಪಡೆದುಕೊಂಡಿದೆ. ವರದಿ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕೆಎಸ್ಸಾರ್ಟಸಿ, ಬಿಎಂಟಿಸಿ ಸಾರಿಗೆ ಸಂಸ್ಥೆಗಳಂತೆ ಸಹಕಾರಿ ಸಾರಿಗೆ ಸಂಸ್ಥೆಗೂ ಮಾನ್ಯತೆ ನೀಡಬೇಕೆಂದು ಆದೇಶಿಸಿದ್ದರು. ಅದರಂತೆ ಸರಕಾರ ವಿದ್ಯಾರ್ಥಿ ಪಾಸ್ ಶುಲ್ಕದ 6.60 ಕೋ. ರೂ. ನೀಡಲು ಹಣಕಾಸು ಇಲಾಖೆಗೆ ಪತ್ರ ಬರೆದಿದೆ. ಈ ವೇಳೆ ಅತಿವೃಷ್ಟಿ ನೆಪವೊಡ್ಡಿ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ. ಇದನ್ನು ಖಂಡಿಸಿ ಪ್ರತಿಭಟನೆ ಮಾಡಿದಾಗ ಹಿಂದಿನ ಜಿಲ್ಲಾಧಿಕಾರಿ ಹಣ ಕೊಡಿಸುವ ಭರವಸೆ ನೀಡಿದ್ದರು. ಬಳಿಕ ಲಾಕ್‍ಡೌನ್ ಕಾರಣಕ್ಕೆ ಸರಕಾರದಿಂದ ಹಣಕಾಸಿನ ನೆರವು ಸಿಕ್ಕಿಲ್ಲ.

- ಧರ್ಮಪ್ಪ, ಅಧ್ಯಕ್ಷ, ಸಹಕಾರಿ ಸಾರಿಗೆ ಸಂಸ್ಥೆ, ಕೊಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News