ಖಾಸಗಿ ಆ್ಯಂಬುಲೆನ್ಸ್ ನಲ್ಲಿ ಹೆಚ್ಚುವರಿ ಹಣ ಕೇಳಿದರೆ ಕ್ರಮ: ಸಚಿವ ಈಶ್ವರಪ್ಪ ಎಚ್ಚರಿಕೆ

Update: 2021-05-18 11:34 GMT

ಶಿವಮೊಗ್ಗ, ಮೇ.18: ಕೋವಿಡ್‌ನಿಂದ ಮೃತಪಟ್ಟವರ ಮೃತದೇಹ ಸಾಗಿಸುವ ಖಾಸಗಿ ಆ್ಯಂಬುಲೆನ್ಸ್ ನನವರು ಹೆಚ್ಚಿನ ಹಣ ಕೇಳಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಎಲ್ಲಾ ರೀತಿಯ ಎಚ್ಚರಿಕೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ ಮತ್ತು ಎಲ್ಲಾ ಜಿಲ್ಲೆಗಳ ಮಾಹಿತಿ ಪಡೆದಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಶವಗಳನ್ನು ಸಾಗಿಸುವ ಖಾಸಗಿ ಆ್ಯಂಬುಲೆನ್ಸ್ ಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ 26 ಸಾವಿರ ರೂ ಹಣ ಪಡೆದ ಉದಾಹರಣೆ ಇದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಈಗಾಗಲೇ ನಿಗದಿಪಡಿಸಿದ ದರವನ್ನೇ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೆಲವು ಖಾಸಗಿ ಆ್ಯಂಬುಲೆನ್ಸ್ ಮಾಲಕರು ಪಿಪಿಇ ಕಿಟ್‌ಗೆ ಹೆಚ್ಚುವರಿ ಹಣ ಖರ್ಚಾಗುವುದರಿಂದ ಹೆಚ್ಚು ಹಣ ಪಡೆಯಲಾಗುತ್ತದೆ ಎಂದು ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ ಮೃತದೇಹದ ಜೊತೆಗೆ ಎರಡು ಪಿಪಿಇ ಕಿಟ್ ನೀಡುತ್ತಿದ್ದು, ಇನ್ನೆರಡು ನೀಡಿದರೆ ಹೆಚ್ಚುವರಿ ದುಡ್ಡು ಕೇಳುವುದು ತಪ್ಪುತ್ತದೆ ಎಂದು ಪತ್ರಕರ್ತರು ಸಲಹೆ ನೀಡಿದರು.

ಈ ಸಲಹೆಗೆ ತಕ್ಷಣವೇ ಒಪ್ಪಿಕೊಂಡ ಸಚಿವರು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ ಪ್ರತಿ ಮೃತದೇಹದ ಜೊತೆಗೆ 4 ಪಿಪಿಇ ಕಿಟ್ ಕೊಡುವಂತೆ ಮತ್ತು ಆಂಬುಲೆನ್ಸ್‌ನವರು ನಿಗದಿತ ದರವನ್ನು ಮಾತ್ರ ಪಡೆದುಕೊಳ್ಳುವಂತೆ ಸೂಚಿಸಿದರು. ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆಯುವವರ ವಿರುದ್ಧ ಕ್ರಮಕೈಗೊಂಡು ಆಂಬುಲೆನ್ಸ್ ಸೀಝ್ ಮಾಡಲಾಗುವುದು ಎಂದು ಹೇಳಿದರು.

ಅದೇ ರೀತಿ, ತರಕಾರಿ ಮಾರಾಟ ವಾಹನಗಳಿಗೆ ಅವಕಾಶ ನೀಡಲಾಗಿದ್ದು, ಅವರು ತರಕಾರಿ ದರಪಟ್ಟಿಯನ್ನು ನಮೂದಿಸಬೇಕು, ಹೆಚ್ಚಿನ ಬೆಲೆ ಪಡೆಯಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಪಂ ಸಿಇಒ ಎಂ.ಎಲ್. ವೈಶಾಲಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News