ಪ್ರಧಾನಿಯನ್ನು ಟೀಕಿಸಿದವರ ಬಂಧನ: ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ 'ನಮ್ಮನ್ನೂ ಬಂಧಿಸಿ' ಪೋಸ್ಟರ್‌ ಅಭಿಯಾನ

Update: 2021-05-18 12:39 GMT

ಶಿವಮೊಗ್ಗ, ಮೇ 18: 'ಪ್ರಧಾನಿ ಮೋದಿಯವರೆ ನಮ್ಮ ದೇಶದ ವ್ಯಾಕ್ಸಿನ್‌ನನ್ನು ಏಕೆ ವಿದೇಶಕ್ಕೆ ಕಳುಹಿಸಿದಿರಿ' ಎಂಬ ಪ್ರಶ್ನೆ ಇರುವ ಪೋಸ್ಟರ್ ಅಂಟಿಸಿದ 15 ಜನರನ್ನು ಸರ್ಕಾರ ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿವಮೂರ್ತಿ ವೃತ್ತದಲ್ಲಿ ಪೋಸ್ಟರ್‌ಗಳನ್ನು ಹಿಡಿದು 'ನಮ್ಮನ್ನೂ ಬಂಧಿಸಿ' ಎಂದು ಆಗ್ರಹಿಸುವುದರ ಮೂಲಕ ಪ್ರತಿಭಟನೆ ನಡೆಸಿದರು.

'ಭಾರತ ಸರ್ಕಾರ ತನ್ನ ದೇಶದ ಜನರ ಜೀವಗಳನ್ನು ಪಣಕ್ಕಿಟ್ಟು ವಿದೇಶಿ ಜನರ ರಕ್ಷಣೆಗಾಗಿ ಹೊರಟಿರುವುದು ಅತ್ಯಂತ ಖಂಡನಿಯ. ಬಹುಶಃ ಪ್ರಧಾನಿ ಮೋದಿ ವಿದೇಶಗಳಲ್ಲಿಯೇ ಹೆಚ್ಚು ತಿರುಗಾಡುತ್ತಿದ್ದರ ಪರಿಣಾಮವಿದು. ವಿದೇಶಕ್ಕೆ ಲಸಿಕೆ ನೀಡುತ್ತಿರುವುದಕ್ಕೆ ಮೋದಿ ಮತ್ತು ಅವರ ಭಕ್ತರು ಹೇಳುವ ರೀತಿಯಂತೂ ಅಸಹ್ಯವಾಗಿದೆ' ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಲಸಿಕೆ ಹಾಕಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಪ್ರಧಾನ ಮಂತ್ರಿಗಳೇ ಇಂತಹ ಕ್ಷುಲ್ಲಕ ಕಾರಣಗಳನ್ನು ಬಿಡಿ. ಕಳ್ಳನಿಗೊಂದು ಪಿಳ್ಳೆನೆಪ ಎಂಬಂತೆ ಆಡಬೇಡಿ. ವಿದೇಶಕ್ಕೆ ಲಸಿಕೆ ಕಳಿಸುವುದಾದರೆ ನಮ್ಮ ದೇಶಕ್ಕೆ ಸಾಕಾಗುವಷ್ಟಿ ಇಟ್ಟುಕೊಂಡು ಕಳುಹಿಸಬೇಕು. ಈಗಾಗಲೇ ದೇಶವ್ಯಾಪಿ ಲಕ್ಷಾಂತರ ಜನ ಸಾಯುತ್ತಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಸಹ ಹತ್ತು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಜನರೆಲ್ಲಾ ಇದೇ ಪ್ರಶ್ನೆ ಕೇಳುತ್ತಾರೆ. ಎಲ್ಲರನ್ನೂ ಬಂಧಿಸುವ ತಾಕತ್ತಿದೆಯಾ? ಇದಕ್ಕಾಗಿಯೇ ಮೊದಲು ನಮ್ಮನ್ನು ಬಂಧಿಸಿ ಎಂಬ ಅಭಿಯಾನ ಕಾಂಗ್ರೆಸ್ ಆರಂಭಿಸಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್‌ಕುಮಾರ್, ಜಿಲ್ಲಾಧ್ಯಕ್ಷ ಹೆಚ್. ಪಿ. ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್, ಉತ್ತರ ಬ್ಲಾಕ್ ಅಧ್ಯಕ್ಷ ಬಿ.ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಈ.ಟಿ.ನಿತಿನ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಎಸ್. ಕುಮರೇಶ್, ಮುಖಂಡ ಆರ್.ಕಿರಣ್,ಪವನ್, ಗಗನ್ ಗೌಡ, ಶರತ್ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News