ರಾಜ್ಯದಲ್ಲೂ ಡಿಆರ್‍ಡಿಒ ವತಿಯಿಂದ ಕೋವಿಡ್ ಕೇಂದ್ರ ಪ್ರಾರಂಭಿಸಲು ರಕ್ಷಣಾ ಸಚಿವರಿಗೆ ಸವದಿ ಪತ್ರ

Update: 2021-05-18 12:41 GMT

ಬೆಂಗಳೂರು, ಮೇ 18: ದೇಶದ ನಾಲ್ಕು ಕಡೆಗಳಲ್ಲಿ ಕೇಂದ್ರದ ರಕ್ಷಣಾ ಇಲಾಖೆಯ ಡಿಆರ್‍ಡಿಒ ವತಿಯಿಂದ ವಿಶೇಷ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ತೆರೆದಂಥ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ರಕ್ಷಣಾ ಇಲಾಖೆಯಿಂದ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ದಿಲ್ಲಿ, ವಾರಣಾಸಿ, ಅಹಮದಾಬಾದ್ ಮತ್ತು ಲಕ್ನೋಗಳಲ್ಲಿ ಡಿಆರ್‍ಡಿಒ ವತಿಯಿಂದ ವಿಶೇಷ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸುವುದಕ್ಕೆ ಕೇಂದ್ರದ ರಕ್ಷಣಾ ಸಚಿವರನ್ನು ಲಕ್ಷ್ಮಣ ಸವದಿ ಅಭಿನಂದಿಸಿದ್ದಾರೆ.

ಕರ್ನಾಟಕದಲ್ಲಿಯೂ ಪ್ರಸ್ತುತ ಕೋವಿಡ್ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಇಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಅಧಿಕವಾಗಿದೆ. ವೈದ್ಯರ ಮೇಲೆ ಒತ್ತಡವೂ ತೀವ್ರವಾಗಿದೆ. ಆದುದರಿಂದ, ಕರ್ನಾಟಕದಲ್ಲಿಯೂ ಆದಷ್ಟು ಶೀಘ್ರವಾಗಿ ಸುಸಜ್ಜಿತ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸುವುದು ಸೂಕ್ತ ಎಂದು ಅವರು ಹೇಳಿದರು.

ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ಕೇಂದ್ರದ ರಕ್ಷಣಾ ಇಲಾಖೆಯ ಸ್ವಾಮ್ಯದಲ್ಲಿ ಸಾಕಷ್ಟು ಖಾಲಿ ಜಾಗಗಳೂ ಈಗ ಲಭ್ಯವಿದೆ. ಇದನ್ನು ಬಳಕೆ ಮಾಡಿಕೊಂಡು ರಕ್ಷಣಾ ಇಲಾಖೆಯಿಂದ ತಕ್ಷಣವೇ ಕೋವಿಡ್ ಕೇಂದ್ರಗಳನ್ನು ಪ್ರಾರಂಭಿಸಿದರೆ ಸಾಕಷ್ಟು ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮಕೈಗೊಳ್ಳಬೇಕೆಂದು ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News