ಬಳ್ಳಾರಿಯಲ್ಲಿ ಐದು ದಿನ, ಕಲಬುರ್ಗಿಯಲ್ಲಿ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್

Update: 2021-05-18 13:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 18: ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್‍ಡೌನ್‍ಗೆ ಆಯಾ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಬಳ್ಳಾರಿ ಜಿಲ್ಲೆಯಾದ್ಯಂತ ನಾಳೆ(ಮೇ 19) ಬೆಳಗ್ಗೆ 10ರಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

ನಿಷೇಧ: ಲಾಕ್‍ಡೌನ್ ಅವಧಿಯಲ್ಲಿ ಕಿರಾಣಿ, ದಿನಸಿ, ಹಣ್ಣು ತರಕಾರಿಗಳು, ಮದ್ಯ, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಹಾಗೂ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರೋಗಿಗಳು ಮತ್ತು ಅವರೊಂದಿಗೆ ಸಂಚರಿಸುವ ಸಂಬಂಧಿಕರನ್ನು ಪೊಲೀಸರು ತಡೆಯುವಂತಿಲ್ಲ ಎಂದು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿಗಳು, ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಅವರು ಆಸ್ಪತ್ರೆಗೆ, ಔಷಧಿ ಅಂಗಡಿಗಳಿಗೆ, ಡಯಾಗ್ನಸ್ಟಿಕ್ ಕೇಂದ್ರಗಳಿಗೆ ತೆರಳಲು ಪೊಲೀಸರು ಅವಕಾಶ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ರಾತ್ರಿ ವಸತಿ ರಹಿತ ನಿರ್ಗತಿಕರ ಕೇಂದ್ರ, ವೃದ್ಧಾಶ್ರಮ, ಬಾಲಮಂದಿರಗಳು, ಅನಾಥಾಶ್ರಮಗಳು ಕಾರ್ಯನಿರ್ವಹಿಸಬಹುದು. ಮೇ 25ರ ನಂತರ ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿ–ಗತಿಯನ್ನು ಪರಿಶೀಲಿಸಿದ ಬಳಿಕ ನಿರ್ಬಂಧಗಳನ್ನು ತೆರವು ಮಾಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕಲಬುರ್ಗಿ: ಕೋವಿಡ್ ಸಂಬಂಧ ಜಿಲ್ಲಾಡಳಿತ ಮತ್ತಷ್ಟು ಬಿಗಿ ಕ್ರಮಗಳಿಗೆ ಮುಂದಾಗಿದ್ದು, ಮೇ 20ರಿಂದ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಲು ಮುಂದಾಗಿದೆ.

ಮಂಗಳವಾರ ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲೆಯಾದ್ಯಂತ ನಾಳೆಯಿಂದ(ಮೇ 20) ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಜಾರಿಯಾಗಲಿದೆ. ಈ ಸಂದರ್ಭದಲ್ಲಿ ತರಕಾರಿ, ದಿನಸಿ ಖರೀದಿಗೂ ಅವಕಾಶ ಇರುವುದಿಲ್ಲ. ಹೊಟೇಲ್‍ನಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ಇರುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News