ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಂಜನಗೂಡಿನ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಪುತ್ರ ವಿಜಯೇಂದ್ರ

Update: 2021-05-18 15:08 GMT

ಮೈಸೂರು,ಮೇ.18: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ನಂಜನಗೂಡು ಶ್ರೀಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಗಳವಾರ ಬೆಳಗ್ಗೆ ಪತ್ನಿ ಸಮೇತ ನಂಜನಗೂಡಿಗೆ ಆಗಮಿಸಿ ಕಪಿಲಾ ನದಿಯ ದಡದಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ. ನಂತರ ಶ್ರೀಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಜಯೇಂದ್ರ ಆಗಮಿಸುತ್ತಿದ್ದಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ವಿಶೇಷ ಆತಿಥ್ಯ ನೀಡಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ದೇವರ ದರ್ಶನ ಮಾಡಿಸಿದ್ದಾರೆ. ಈ ವೇಳೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಿ, ಫೋಟೋ, ವೀಡಿಯೋ ತೆಗೆಯದಂತೆ ಭದ್ರತಾ ಸಿಬ್ಬಂದಿ ನಿರ್ಬಂಧ ವಿಧಿಸಿದ್ದರು.

ಕೊರೋನ ಹೆಚ್ಚಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಜೊತೆಗೆ ಎಲ್ಲಾ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿ ದೇವಸ್ಥಾನದ ಅರ್ಚಕರು ಮಾತ್ರ ಪೂಜೆ ಸಲ್ಲಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ನಂಜನಗೂಡು ಶ್ರೀಶ್ರೀಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ಬಂದು ದರ್ಶನ ಪಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಯ ಪುತ್ರನಿಗೊಂದು ಕಾನೂನು, ಸಾರ್ವಜನಿಕರಿಗೊಂದು ಕಾನೂನೇ ? ಅವರಿಗೆ ಮಾತ್ರ ಯಾಕೆ ಗೌರವ ಪೂರ್ವಕವಾಗಿ ದೇವರ ದರ್ಶನ ಮಾಡಿಸುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ವಿಜಯೇಂದ್ರ ದೇವಸ್ಥಾನದ ಒಳಕ್ಕೆ ತೆರಳುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

''ತಲೆಹೋಗುತ್ತದೆ ಎಂದಾಗ ದರ್ಶನಕ್ಕೆ ಅವಕಾಶ ಮಾಡಲೇಬೇಕಾಗುತ್ತದೆ''

ಮುಖ್ಯಮಂತ್ರಿಗಳ ಪುತ್ರ ಎಂಬ ಕಾರಣಕ್ಕೆ ಅನಿವಾರ್ಯವಾಗಿ ಬಿ.ವೈ.ವಿಜಯೇಂದ್ರ ಅವರಿಗೆ ನಂಜನಗೂಡು ಶ್ರೀಶ್ರೀಕಂಠೇಶ್ವರಸ್ವಾಮಿ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು ಎಂದು ಶ್ರೀಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ತಿಳಿಸಿದರು.

ಈ ಕುರಿತು 'ವಾರ್ತಾಭಾರತಿ'ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಕೆಲವು ಅನಿವಾರ್ಯ ಕಾರಣಕ್ಕೆ ಅವಕಾಶ ಕಲ್ಪಿಸಬೇಕಾಗುತ್ತದೆ. ಇದು ದೊಡ್ಡ ವಿಷಯವೇನಲ್ಲ ಎಂದು ಹೇಳಿದರು.

ಸಿಎಂ ಪುತ್ರನಿಗೆ ಲಾಕ್ ಡೌನ್ ಸಂದರ್ಭದಲ್ಲಿ ಅವಕಾಶವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ತಲೆ ಹೋಗುತ್ತದೆ ಎಂದಾಗ ಅವಕಾಶ ಮಾಡಲೇಬೇಕಾಗುತ್ತದೆ. ಹಾಗಾಗಿ ಹತ್ತು ನಿಮಿಷ ದೇವರ ದರ್ಶನ ಮಾಡಿ ಹೋದರು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News