ಒಂದೇ ಹುದ್ದೆ ಇದ್ದರೆ ಎಸ್ಸಿ, ಎಸ್ಟಿ ಅಭ್ಯರ್ಥಿಗೆ ಮೀಸಲಿಡಲಾಗದು: ಹೈಕೋರ್ಟ್

Update: 2021-05-18 15:37 GMT

ಬೆಂಗಳೂರು, ಮೇ 18: ಕಾಲೇಜಿನ ಒಂದು ವಿಷಯಕ್ಕೆ ಬೋಧಕ ಸಿಬ್ಬಂದಿ ಹುದ್ದೆ ಒಂದೇ ಇದ್ದರೆ ಅದನ್ನು ಎಸ್ಸಿ ಅಥವಾ ಎಸ್ಟಿ ಅಭ್ಯರ್ಥಿಗೆ ಮೀಸಲಿಡಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.

2007ರ ಸೆಪ್ಟೆಂಬರ್ ನಿಂದ ಮಂಡ್ಯದ ಅನುದಾನಿತ ಪಿಯು ಕಾಲೇಜಿನ ಗಣಿತ ಉಪನ್ಯಾಸಕಿ ಎಂ.ಎಸ್.ರಶ್ಮಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇರುವ ಒಂದೇ ಹುದ್ದೆಯನ್ನು ಮೀಸಲಿಡುವುದು ಕಾನೂನಿಗೆ ವಿರುದ್ಧ ಎಂದು ಪೀಠಕ್ಕೆ ತಿಳಿಸಿದ್ದಾರೆ.

ಗಣಿತ ವಿಷಯದ ಹುದ್ದೆಯನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಿ 2019ರ ಸೆ.22ರಂದು ಅಧಿಸೂಚನೆ ಹೊರಡಿಸಲಾಗಿದೆ. ಒಂದೇ ಹುದ್ದೆಯನ್ನು ನಿರ್ದಿಷ್ಟ ಜಾತಿಗೆ ಮೀಸಲಿರಿಸಿದರೆ, ಅದು ಶೇ.100ರಷ್ಟು ಮೀಸಲಾತಿ ನಿಗದಿ ಮಾಡಿದಂತೆ ಆಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಒಂದೇ ಹುದ್ದೆ ಇದ್ದಾಗ ಅದನ್ನು ನಿರ್ದಿಷ್ಟ ಸಮುದಾಯಕ್ಕೆ ಮೀಸಲಿಡಲು ಆಗದು ಎಂಬುದಕ್ಕೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳಿವೆ ಎಂದು ಉಲ್ಲೇಖಿಸಿತು.

ನೇಮಕಾತಿ ಪ್ರಕ್ರಿಯೆಗೆ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ತಿಳಿಸಿದ ಪೀಠ, ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಅರ್ಜಿದಾರರ ಸೇವೆಗೆ ತೊಂದರೆ ಆಗಬಾರದು’ ಎಂದು ಕಾಲೇಜಿಗೆ ನಿರ್ದೇಶನ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News