"ಬಂಗಾಳದಲ್ಲಿ ಅಸ್ಥಿರತೆ ಸೃಷ್ಟಿಸಲು ರಾಜ್ಯಪಾಲರನ್ನು ಬಳಸಲಾಗುತ್ತಿದೆ, ಅವರನ್ನು ಹುದ್ದೆಯಿಂದ ಕೆಳಗಿಳಿಸಿ"

Update: 2021-05-19 10:43 GMT

ಮುಂಬೈ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಅಲ್ಲಿನ ರಾಜ್ಯಪಾಲ ಜಗದೀಪ್ ಧನ್ಕರ್ ಅವರನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿರುವ ಶಿವಸೇನೆ, ಧನ್ಕರ್ ಅವರನ್ನು ಅವರ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದೆ.

ಈ ಕುರಿತು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಬರೆದಿದೆಯಲ್ಲದೆ ರಾಜ್ಯಪಾಲರ ವರ್ತನೆ 'ಸಂವಿಧಾನಕ್ಕೆ ವಿರುದ್ಧವಾಗಿದೆ' ಎಂದು ಹೇಳಿದೆ.

ಪಶ್ಚಿಮ ಬಂಗಾಳದ ಸಚಿವರುಗಳಾದ ಫಿರ್ಹಾದ್ ಹಕೀಂ ಹಾಗೂ ಸುಬ್ರತಾ ಮುಖರ್ಜಿ ಮತ್ತು ತೃಣಮೂಲ ಶಾಸಕ ಮದನ್ ಮಿತ್ರ ಹಾಗೂ ಮಾಜಿ ತೃಣಮೂಲ ನಾಯಕ ಸೋವನ್ ಚಟರ್ಜಿ ಅವರನ್ನು ನಾರದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಬಂಧಿಸಿದ ಬೆಳವಣಿಗೆಯ ನಂತರ ಶಿವಸೇನೆಯ ಆರೋಪ ಕೇಳಿ ಬಂದಿದೆ.

"ಶಾಸಕರನ್ನು ಬಂಧಿಸಲು ಸಿಬಿಐಗೆ ಸ್ಪೀಕರ್ ಅನುಮತಿ ಅಗತ್ಯವಾದರೂ ಅಂತಹ ಅನುಮತಿ ಪಡೆಯಲಾಗಿರಲಿಲ್ಲ,  ಆದರೆ ತಾವು ಶಾಸಕರನ್ನು ಬಂಧಿಸಲು ಸಿಬಿಐಗೆ ಅನುಮತಿ ನೀಡಿದ್ದಾಗಿ ಧನ್ಕರ್ ಹೇಳಿದ್ದಾರೆ" ಎಂದು ಶಿವಸೇನೆ ತನ್ನ ಸಂಪಾದಕೀಯದಲ್ಲಿ ಬರೆದಿದೆ.

ಮಹಿಳಾ ಸಿಎಂ ಒಬ್ಬರನ್ನು 'ಹಿಂಸಿಸುವ' ಕೆಲಸವನ್ನು ಕೇಂದ್ರ ಸರಕಾರ ರಾಜ್ಯಪಾಲರಿಗೆ ವಹಿಸಿದೆ ಎಂದು ಆರೋಪಿಸಿದ ಶಿವಸೇನೆ, ರಾಷ್ಟ್ರೀಯ ಮಹಿಳಾ ಆಯೋಗ ಈ  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದೆ.

ಇದೇ ಪ್ರಕರಣದಲ್ಲಿ ಆರೋಪ ಹೊತ್ತ ಮುಕುಲ್ ರಾಯ್ ಹಾಗೂ ಸುವೇಂದು ಅಧಿಕಾರಿ ವಿರುದ್ಧ ಸಿಬಿಐ ತನಿಖೆಯೇಕಿಲ್ಲ ಎಂದು ಪ್ರಶ್ನಿಸಿದ ಶಿವಸೇನೆ, ಪಶ್ಚಿಮ ಬಂಗಾಳದಲ್ಲಿನ ಬೆಳವಣಿಗೆಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿವೆ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ, ಚುನಾವಣೆಯಲ್ಲಿ ಸೋಲನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಈ ರೀತಿ ಸಿಎಂ ವಿರುದ್ಧ ದಾಳಿ ನಡೆಸುತ್ತಿದೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News